RCB-CSK ಮ್ಯಾಚ್ ಕ್ರೇಜ್: IPL ಟಿಕೆಟ್ ಆಸೆಗೆ ಬಿದ್ದ ಬೆಂಗಳೂರು ಟೆಕ್ಕಿಗೆ 1.46 ಲಕ್ಷ ರೂ. ಪಂಗನಾಮ

Untitled design (46)

ಬೆಂಗಳೂರು: ಐಪಿಎಲ್ ಇತಿಹಾಸದ ಅತ್ಯಂತ ದೊಡ್ಡ ಹಣಾಹಣಿ ಎನಿಸಿಕೊಂಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಚೆನ್ನೈ ಸೂಪರ್ ಕಿಂಗ್ಸ್ (CSK) ಪಂದ್ಯದ ಟಿಕೆಟ್‌ಗಳಿಗಾಗಿ ಅಭಿಮಾನಿಗಳು ಹಾತೊರೆಯುತ್ತಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಸೈಬರ್ ವಂಚಕರು ಜನರನ್ನು ಲೂಟಿ ಮಾಡುತ್ತಿದ್ದಾರೆ.ಈ ಪಂದ್ಯದ ಟಿಕೆಟ್ ಪಡೆಯಲು ಹೋದ ಬೆಂಗಳೂರಿನ ಟೆಕ್ಕಿಯೊಬ್ಬರು ಬರೋಬ್ಬರಿ 1.46 ಲಕ್ಷ ರೂಪಾಯಿ ಕಳೆದುಕೊಂಡು ಕಂಗಾಲಾಗಿದ್ದಾರೆ.

ವಂಚನೆ ನಡೆದಿದ್ದು ಹೇಗೆ ?

ಬೆಂಗಳೂರಿನ ಮಹದೇವಪುರ ನಿವಾಸಿಯಾಗಿರುವ ಸಾಫ್ಟ್‌ವೇರ್ ಇಂಜಿನಿಯರ್ (ಟೆಕ್ಕಿ), ಇನ್‌ಸ್ಟಾಗ್ರಾಮ್‌ನಲ್ಲಿ ಐಪಿಎಲ್ ಟಿಕೆಟ್ ಮಾರಾಟಕ್ಕಿದೆ ಎಂಬ ಪೋಸ್ಟ್ ಒಂದನ್ನು ಗಮನಿಸಿದ್ದಾರೆ. ಆರ್‌ಸಿಬಿ-ಸಿಎಸ್‌ಕೆ ಪಂದ್ಯದ ಟಿಕೆಟ್‌ಗಳು ಅಧಿಕೃತವಾಗಿ ಸೋಲ್ಡ್ ಔಟ್ ಆಗಿದ್ದರಿಂದ, ಹೇಗಾದರೂ ಮಾಡಿ ಟಿಕೆಟ್ ಪಡೆಯಬೇಕೆಂಬ ಹಂಬಲದಲ್ಲಿದ್ದ ಟೆಕ್ಕಿ ಆ ಪೋಸ್ಟ್ ಹಾಕಿದ್ದ ವ್ಯಕ್ತಿಯನ್ನು ಸಂಪರ್ಕಿಸಿದ್ದಾರೆ.

ವಂಚಕನು ಟೆಕ್ಕಿಗೆ ವಿಐಪಿ ಸೌಲಭ್ಯಗಳು, ಊಟದ ಕೂಪನ್‌ಗಳು ಮತ್ತು ಗ್ಯಾಲರಿಯ ಅತ್ಯುತ್ತಮ ಸೀಟುಗಳ ಟಿಕೆಟ್ ನೀಡುವುದಾಗಿ ಆಮಿಷ ಒಡ್ಡಿದ್ದಾನೆ. ಇದನ್ನು ನಂಬಿದ ಟೆಕ್ಕಿ, ಮೊದಲು ಕೆಲವು ಸಾವಿರ ರೂಪಾಯಿಗಳನ್ನು ವರ್ಗಾಯಿಸಿದ್ದಾರೆ. ಬಳಿಕ ವಂಚಕನು ಟೆಕ್ಕಿಯನ್ನು ಸ್ಟೇಡಿಯಂನ ಗೇಟ್ ಸಂಖ್ಯೆ 10ರ ಬಳಿ ಬರುವಂತೆ ಸೂಚಿಸಿದ್ದಾನೆ.

ಟೆಕ್ಕಿ ಸ್ಟೇಡಿಯಂ ಹತ್ತಿರ ತಲುಪಿದಾಗ, ವಂಚಕನು ಫೋನ್ ಮೂಲಕವೇ ಮಾತನಾಡುತ್ತಾ ಹೊಸ ಹೊಸ ನೆಪಗಳನ್ನು ಹೇಳತೊಡಗಿದ. ಸೆಕ್ಯೂರಿಟಿ ಡಿಪಾಸಿಟ್, ಜಿಎಸ್‌ಟಿ, ಮತ್ತು ವಿಐಪಿ ಪಾಸ್ ಆಕ್ಟಿವೇಶನ್ ಹೆಸರಿನಲ್ಲಿ ಹಂತ ಹಂತವಾಗಿ ಹಣ ಪಾವತಿಸುವಂತೆ ಒತ್ತಾಯಿಸಿದ್ದಾನೆ. ಟಿಕೆಟ್ ಸಿಕ್ಕೇ ಸಿಗುತ್ತದೆ ಎಂಬ ನಂಬಿಕೆಯಲ್ಲಿ ಟೆಕ್ಕಿ ತನ್ನ ಮತ್ತು ತನ್ನ ತಾಯಿಯ ಬ್ಯಾಂಕ್ ಖಾತೆಗಳಿಂದ ಒಟ್ಟು 1.46 ಲಕ್ಷ ರೂಪಾಯಿಗಳನ್ನು ವಂಚಕ ನೀಡಿದ ವಿವಿಧ ಖಾತೆಗಳಿಗೆ ವರ್ಗಾಯಿಸಿದ್ದಾರೆ.

ಹಣ ಪಾವತಿಯಾದ ನಂತರ ವಂಚಕನು ತನ್ನ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದಾನೆ. ತಾನು ವಂಚನೆಗೆ ಒಳಗಾಗಿರುವುದನ್ನು ಅರಿತ ಟೆಕ್ಕಿ ತಕ್ಷಣವೇ ಸೈಬರ್ ಕ್ರೈಮ್ ಸಹಾಯವಾಣಿಗೆ ಕರೆ ಮಾಡಿ ದೂರು ನೀಡಿದ್ದಾರೆ. ಸದ್ಯ ಮಹದೇವಪುರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ಹಣ ವರ್ಗಾವಣೆಯಾದ ಬ್ಯಾಂಕ್ ಖಾತೆಗಳ ವಿವರಗಳನ್ನು ಆಧರಿಸಿ ತನಿಖೆ ಕೈಗೊಂಡಿದ್ದಾರೆ.

ಐಪಿಎಲ್ ಪಂದ್ಯಗಳ ಟಿಕೆಟ್‌ಗಳನ್ನು ಕೇವಲ ಅಧಿಕೃತ ವೆಬ್‌ಸೈಟ್‌ಗಳು ಅಥವಾ ಆ್ಯಪ್‌ಗಳ ಮೂಲಕ ಮಾತ್ರ ಖರೀದಿಸಬೇಕು. ಇನ್‌ಸ್ಟಾಗ್ರಾಮ್, ಫೇಸ್‌ಬುಕ್ ಅಥವಾ ಟೆಲಿಗ್ರಾಂನಲ್ಲಿ ಟಿಕೆಟ್ ನೀಡುವುದಾಗಿ ನಂಬಿಸುವ ವ್ಯಕ್ತಿಗಳಿಗೆ ಹಣ ಪಾವತಿಸಬೇಡಿ ಎಂದು ಪೊಲೀಸರು ಎಚ್ಚರಿಸಿದ್ದಾರೆ.

Exit mobile version