ಬೆಂಗಳೂರಿನ 7 ಜನರ ಹತ್ಯೆ ಕೇಸ್‌; ಶವ ಸಾಗಿಸಲು 9 ಚೀಲಗಳ ಬಳಕೆ!

ಗುರ್ಲಾಪುರದಲ್ಲಿ (19)

ಬೆಂಗಳೂರು: ರಾಜ್ಯ ರಾಜಧಾನಿಯನ್ನು ಬೆಚ್ಚಿಬೀಳಿಸಿರುವ ಏಳು ಜನರ ಹತ್ಯೆ ಪ್ರಕರಣಕ್ಕೆ ಮತ್ತೊಂದು ಮಹತ್ವದ ತಿರುವು ಸಿಕ್ಕಿದೆ. ಕೊಲೆ ಮಾಡಿದ ಬಳಿಕ ಮೃತದೇಹಗಳನ್ನು ಸಾಗಿಸುವಾಗ ರಕ್ತ ಸೋರದಂತೆ ಹಾಗೂ ಯಾರಿಗೂ ಅನುಮಾನ ಬಾರದಂತೆ ಆರೋಪಿ ಇಂದುಶೇಖರ್ ರೂಪಿಸಿದ್ದ ಯೋಜನೆ ಪೊಲೀಸರ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಶವಗಳನ್ನು ಸಾಗಿಸಲು ಆತ ಅನುಸರಿಸಿದ್ದ ವಿಧಾನ ತನಿಖಾಧಿಕಾರಿಗಳನ್ನೇ ಬೆಚ್ಚಿಬೀಳಿಸಿದೆ.

ಆರೋಪಿ ಇಂದುಶೇಖರ್ ಮೃತದೇಹಗಳನ್ನು ಸಾಗಿಸುವ ಮುನ್ನವೇ ಅದಕ್ಕಾಗಿ ಸಿದ್ಧತೆ ಮಾಡಿಕೊಂಡಿದ್ದ ಎನ್ನಲಾಗಿದೆ. ಕಾರಿನಲ್ಲಿ ಶವಗಳನ್ನು ಸಾಗಿಸುವಾಗ ರಕ್ತ ಸೋರಿಕೆಯಾಗಿ ಸಾರ್ವಜನಿಕರಿಗೆ ಅನುಮಾನ ಬರಬಾರದು ಎಂಬ ಉದ್ದೇಶದಿಂದ ಒಂಬತ್ತು ಪ್ಲಾಸ್ಟಿಕ್ ಚೀಲಗಳನ್ನು ಬಳಸಿದ್ದಾನೆ ಎಂಬ ವಿಚಾರ ತನಿಖೆಯಲ್ಲಿ ಬಹಿರಂಗವಾಗಿದೆ.

ಬೆಡ್‌ಶೀಟ್‌ನಲ್ಲಿ ಸುತ್ತಿ 9 ಚೀಲಗಳಲ್ಲಿ ಪ್ಯಾಕ್!

ನಂದಿಬೆಟ್ಟದಲ್ಲಿ ಬಾಲಕ ಪುನೀತ್‌ನ ಮೃತದೇಹ ಪತ್ತೆಯಾಗಿತ್ತು. ಈ ಮೃತದೇಹವನ್ನು ಸಾಗಿಸುವ ಸಂದರ್ಭದಲ್ಲಿ ಆರೋಪಿ ಮೊದಲು ಬೆಡ್‌ಶೀಟ್‌ನಲ್ಲಿ ಸುತ್ತಿಕೊಂಡಿದ್ದ ಎನ್ನಲಾಗಿದೆ. ಬಳಿಕ ಒಂದರ ಮೇಲೊಂದು ಒಂಬತ್ತು ಪ್ಲಾಸ್ಟಿಕ್ ಚೀಲಗಳಲ್ಲಿ ಮೃತದೇಹವನ್ನು ತುಂಬಿದ್ದಾನೆ. ಈ ಮೂಲಕ ರಕ್ತ ಹೊರಬರದಂತೆ ಎಚ್ಚರಿಕೆ ವಹಿಸಿ ಶವ ಸಾಗಾಟಕ್ಕೆ ವ್ಯವಸ್ಥೆ ಮಾಡಿದ್ದ ಎಂಬುದು ಪೊಲೀಸರ ತನಿಖೆಯಲ್ಲಿ ತಿಳಿದುಬಂದಿದೆ.

ಮೃತದೇಹಕ್ಕೆ ಒಂಬತ್ತು ಸುತ್ತಿನ ರಕ್ಷಣಾ ಪದರ ನಿರ್ಮಿಸಿ ಸಾಗಾಟಕ್ಕೆ ಸಿದ್ಧಪಡಿಸಿದ್ದ ಎನ್ನಲಾಗಿದೆ. ಕಾರಿನಲ್ಲಿ ಶವ ಸಾಗಿಸುವಾಗ ರಕ್ತ ಸೋರಿಕೆಯಾಗದಂತೆ ನೋಡಿಕೊಳ್ಳುವುದೇ ಈ ವ್ಯವಸ್ಥೆಯ ಹಿಂದಿನ ಉದ್ದೇಶವಾಗಿತ್ತು.

ಯಾರಾದರೂ ಕೇಳಿದರೆ ಬಟ್ಟೆಗಳ ಮೂಟೆ ಎಂದು ಹೇಳಲು ಪ್ಲಾನ್!

ಶವ ಸಾಗಿಸುವ ಸಂದರ್ಭದಲ್ಲಿ ಯಾರಾದರೂ ಪ್ರಶ್ನಿಸಿದರೆ ಅಥವಾ ಅನುಮಾನ ವ್ಯಕ್ತಪಡಿಸಿದರೆ, ಅದು ಬಟ್ಟೆಗಳ ಮೂಟೆ ಎಂದು ಹೇಳಲು ಆರೋಪಿ ಯೋಜನೆ ರೂಪಿಸಿದ್ದ ಎನ್ನಲಾಗಿದೆ. ಇದಕ್ಕಾಗಿ ಕೊಲೆಗೂ ಮುನ್ನವೇ ಪ್ಲಾಸ್ಟಿಕ್ ಚೀಲಗಳನ್ನು ಖರೀದಿಸಿಕೊಂಡಿದ್ದ ಎಂಬ ಮಾಹಿತಿ ಪೊಲೀಸರ ವಿಚಾರಣೆಯಲ್ಲಿ ಹೊರಬಂದಿದೆ.

ಸದ್ಯ ಏಳು ಜನರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿಸಿದ್ದಾರೆ. ಕೊಲೆ ನಡೆದ ಸಂದರ್ಭ, ಮೃತದೇಹಗಳ ಸಾಗಾಟ ಮತ್ತು ಆರೋಪಿ ರೂಪಿಸಿದ್ದ ಪೂರ್ವಯೋಜನೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ.

Exit mobile version