ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ವಾಹನ ಸವಾರರಿಗೆ ಸಂಚಾರ ಪೊಲೀಸರು ಮಹತ್ವದ ಸೂಚನೆ ನೀಡಿದ್ದಾರೆ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಬಳ್ಳಾರಿ ರಸ್ತೆಯಲ್ಲಿ ನವೆಂಬರ್ 6ರಿಂದ ಸಂಚಾರ ಮಾರ್ಗ ಬದಲಾವಣೆ ಜಾರಿಯಾಗಲಿದೆ. ರಸ್ತೆ ಅಭಿವೃದ್ಧಿ ಕಾಮಗಾರಿಯ ಹಿನ್ನೆಲೆಯಲ್ಲಿ ಮುಂದಿನ 18 ತಿಂಗಳ ಕಾಲ ಕೆಎಸ್ಆರ್ಟಿಸಿ ಬಸ್ಗಳು, ಖಾಸಗಿ ಬಸ್ಗಳು ಹಾಗೂ ಎಲ್ಲಾ ಮಾದರಿಯ ಸರಕು ಸಾಗಣೆ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ.
ಬಳ್ಳಾರಿ ರಸ್ತೆಯ ಯುಎಎಸ್ ಸ್ಟಾಫ್ ಕ್ವಾರ್ಟರ್ಸ್ನಿಂದ ಮೆಖ್ರಿ ಸರ್ಕಲ್ವರೆಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ (GBA) ನಾಲ್ಕು ಪಥದ ಎಲಿವೇಟೆಡ್ ಕಾರಿಡಾರ್ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದೆ. ನವೆಂಬರ್ 6ರಿಂದ ಆರಂಭವಾಗಲಿರುವ ಈ ಕಾಮಗಾರಿ ಸುಮಾರು 18 ತಿಂಗಳ ಕಾಲ ನಡೆಯುವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ ಕಾಮಗಾರಿ ನಡೆಯುವ ಮಾರ್ಗದಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ಅಡಚಣೆಯಾಗದಂತೆ ಸಂಚಾರ ಪೊಲೀಸರು ಪರ್ಯಾಯ ಮಾರ್ಗಗಳನ್ನು ಪ್ರಕಟಿಸಿದ್ದಾರೆ.
ವಿಮಾನ ನಿಲ್ದಾಣಕ್ಕೆ ತೆರಳುವವರಿಗೆ ಪರ್ಯಾಯ ಮಾರ್ಗ
ಹೆಬ್ಬಾಳ ಮಾರ್ಗವಾಗಿ ವಿಮಾನ ನಿಲ್ದಾಣಕ್ಕೆ ತೆರಳುವ ವಾಹನಗಳು ಓಲ್ಡ್ ಹೈ ಗ್ರೌಂಡ್ಸ್ ಜಂಕ್ಷನ್, ಕಲ್ಪನಾ ಜಂಕ್ಷನ್, ಓಲ್ಡ್ ಉದಯ ಟಿವಿ ಜಂಕ್ಷನ್, ಕಂಟೋನ್ಮೆಂಟ್ ರೈಲ್ವೆ ನಿಲ್ದಾಣ, ಟ್ಯಾನರಿ ರಸ್ತೆ ಹಾಗೂ ನಾಗವಾರ ರಸ್ತೆ ಮೂಲಕ ಸಂಚರಿಸಬೇಕು.
ಇನ್ನು ಯಶವಂತಪುರದಿಂದ ವಿಮಾನ ನಿಲ್ದಾಣಕ್ಕೆ ತೆರಳುವ ವಾಹನ ಸವಾರರು ಮತ್ತಿಕೆರೆ ರಸ್ತೆ ಮೂಲಕ ಬಂದು ಬಿಇಎಲ್ ವೃತ್ತದಲ್ಲಿ ಬಲಕ್ಕೆ ತಿರುಗಿ ರಿಂಗ್ ರಸ್ತೆ ಮಾರ್ಗವಾಗಿ ಪ್ರಯಾಣಿಸಬೇಕು.
ವಿಮಾನ ನಿಲ್ದಾಣದಿಂದ ನಗರಕ್ಕೆ ಬರುವವರಿಗೆ ಸೂಚನೆ
ವಿಮಾನ ನಿಲ್ದಾಣದಿಂದ ನಗರದ ಕೇಂದ್ರ ಭಾಗಕ್ಕೆ ಆಗಮಿಸುವ ವಾಹನಗಳು ಹೆಬ್ಬಾಳದಲ್ಲಿ ಎಡಕ್ಕೆ ತಿರುಗಿ ನಾಗವಾರ ಜಂಕ್ಷನ್ ಮೂಲಕ ಬಲಕ್ಕೆ ತಿರುಗಿ ಬಾಂಬೂ ಬಜಾರ್ ಹಾಗೂ ಕ್ವೀನ್ಸ್ ರಸ್ತೆ ಮಾರ್ಗವನ್ನು ಬಳಸಬಹುದು. ಮತ್ತೊಂದು ಪರ್ಯಾಯವಾಗಿ ಹೆಬ್ಬಾಳದಲ್ಲಿ ಬಲಕ್ಕೆ ತಿರುಗಿ ಹೆಬ್ಬಾಳ್ ರಿಂಗ್ ರಸ್ತೆ, ಕುವೆಂಪು ಸರ್ಕಲ್, ಗೊರಗುಂಟೆಪಾಳ್ಯ ಜಂಕ್ಷನ್ ಮೂಲಕ ಡಾ. ರಾಜ್ಕುಮಾರ್ ರಸ್ತೆ ಮಾರ್ಗವಾಗಿ ನಗರ ಪ್ರವೇಶಿಸಬಹುದು.
ಯಶವಂತಪುರದಿಂದ ನಗರದ ಕೇಂದ್ರ ಭಾಗಕ್ಕೆ ಬರುವ ವಾಹನಗಳು ಬಿಎಚ್ಇಎಲ್ ಜಂಕ್ಷನ್, ಮಾರಮ್ಮ ಸರ್ಕಲ್ ಬಳಿ ಬಲಕ್ಕೆ ತಿರುಗಿ ಮಾರ್ಗೋಸಾ ರಸ್ತೆ ಮೂಲಕ ಸಂಚರಿಸಬೇಕು.
ಹೆಬ್ಬಾಳದಿಂದ ಬರುವವರಿಗೂ ಮಾರ್ಗ ಬದಲಾವಣೆ
ಹೆಬ್ಬಾಳ ಫ್ಲೈಓವರ್ನಿಂದ ಇಳಿಯುವ ವಾಹನಗಳು ಬ್ಯಾಪ್ಟಿಸ್ಟ್ ಆಸ್ಪತ್ರೆ ಮುಂಭಾಗದ ಸರ್ವಿಸ್ ರಸ್ತೆ ಮೂಲಕ ಸಿಬಿಐ ಜಂಕ್ಷನ್ ತಲುಪಿ ಬಳ್ಳಾರಿ ಮುಖ್ಯ ರಸ್ತೆಗೆ ಸಂಪರ್ಕ ಪಡೆಯಬಹುದು.
ಹೆಬ್ಬಾಳದಿಂದ ಆನಂದನಗರ, ಆರ್.ಟಿ. ನಗರ ಹಾಗೂ ಜಯಮಹಲ್ ಕಡೆಗೆ ತೆರಳುವವರು ಬ್ಯಾಪ್ಟಿಸ್ಟ್ ಆಸ್ಪತ್ರೆ ಮುಂಭಾಗದ ಸರ್ವಿಸ್ ರಸ್ತೆ, ಆನಂದನಗರ ಕ್ರಾಸ್ ಹಾಗೂ ಸಿಬಿಐ ಜಂಕ್ಷನ್ ಮೂಲಕ ಆನಂದನಗರ ಮುಖ್ಯ ರಸ್ತೆಯನ್ನು ತಲುಪಬೇಕು.
ಸಂಚಾರ ದಟ್ಟಣೆ ತಪ್ಪಿಸಲು ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಬೆಂಗಳೂರು ಸಂಚಾರ ಪೊಲೀಸರು ವಾಹನ ಸವಾರರಲ್ಲಿ ಮನವಿ ಮಾಡಿದ್ದಾರೆ.
