ಸರ್ಕಾರದ ನಿಯಮದಿಂದ ಬಯಲಾಯ್ತು ಕೊಲೆ ರಹಸ್ಯ: ಪತ್ನಿಯನ್ನೇ ಕೊಂದ ಪತಿ ಅರೆಸ್ಟ್

Untitled design (50)

ಬೆಂಗಳೂರು ಸೆ.25: ಖಾಲಿ ಸೈಟ್‌ಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವ ಸರ್ಕಾರದ ನಿಯಮವೇ ಬೆಂಗಳೂರಿನಲ್ಲಿ ನಡೆದಿದ್ದ ಕೊಲೆ ಪ್ರಕರಣವೊಂದನ್ನು ಬಯಲಿಗೆಳೆದಿದೆ. ಸಂಪಿಗೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಎಂ.ಎಸ್. ನಗರ ಅಗ್ರಹಾರ ಲೇಔಟ್‌ನ ಖಾಲಿ ಜಾಗದಲ್ಲಿ ಕೊಳೆತ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆಯಾಗಿದ್ದು, ಪೊಲೀಸರ ತನಿಖೆಯಲ್ಲಿ ಪತಿಯೇ ಪತ್ನಿಯನ್ನು ಕೊಲೆ ಮಾಡಿ ಶವವನ್ನು ಸೈಟ್‌ನಲ್ಲಿ ಎಸೆದಿರುವುದು ಬೆಳಕಿಗೆ ಬಂದಿದೆ.

ಖಾಲಿ ಸೈಟ್‌ ಸ್ವಚ್ಛಗೊಳಿಸಲು ಮಾಲೀಕರು ಕಾರ್ಮಿಕರನ್ನು ಕಳುಹಿಸಿದ್ದರು. ಈ ವೇಳೆ ಕಾರ್ಮಿಕರಿಗೆ ಸೈಟ್‌ನಲ್ಲಿ ಮಹಿಳೆಯ ಶವ ಪತ್ತೆಯಾಗಿದೆ. ಸುಮಾರು 20 ದಿನಗಳ ಹಿಂದೆಯೇ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದ್ದು, ಮೃತದೇಹ ಕೊಳೆತ ಸ್ಥಿತಿಯಲ್ಲಿತ್ತು. ಕೆಲವೆಡೆ ನಾಯಿಗಳು ಮೃತದೇಹವನ್ನು ಎಳೆದಾಡಿದ್ದರಿಂದ ಗುರುತು ಪತ್ತೆಹಚ್ಚುವುದು ಪೊಲೀಸರಿಗೆ ಸವಾಲಾಗಿತ್ತು.

ಮಾಹಿತಿ ಪಡೆದು ಸ್ಥಳಕ್ಕೆ ಬಂದ ಸಂಪಿಗೆಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದರು. ಈ ವೇಳೆ ಮೃತದೇಹದ ಮೇಲಿದ್ದ ಬಟ್ಟೆಯ ಟ್ಯಾಗ್ ಪೊಲೀಸರ ಕೈಗೆ ಪ್ರಮುಖ ಸುಳಿವು ನೀಡಿತು. ಮಾಲ್‌ವೊಂದರಲ್ಲಿ ಖರೀದಿಸಲಾಗಿದ್ದ ಬಟ್ಟೆಯ ಟ್ಯಾಗ್ ಮತ್ತು ಬಿಲ್‌ ವಿವರಗಳನ್ನು ಪರಿಶೀಲಿಸಿದಾಗ ಪೊಲೀಸರು ಮೃತ ಮಹಿಳೆಯ ಗುರುತು ಪತ್ತೆಹಚ್ಚುವಲ್ಲಿ ಯಶಸ್ವಿಯಾದರು.

ಮೃತಳನ್ನು ಒಡಿಶಾ ಮೂಲದ ಅನುಸೂಯ (28) ಎಂದು ಗುರುತಿಸಲಾಯಿತು. ಅನುಸೂಯ ಹಾಗೂ ಸಾಗರ್ ಚಂದ್ರ ರಾವತ್ (32) ಕಳೆದ ಎರಡು ವರ್ಷಗಳ ಹಿಂದೆ ಪ್ರೀತಿಸಿ ವಿವಾಹವಾಗಿದ್ದರು. ಕುಟುಂಬಸ್ಥರಿಗೆ ತಿಳಿಯದಂತೆ ವಿವಾಹವಾಗಿದ್ದ ಈ ದಂಪತಿ ಬೆಂಗಳೂರಿಗೆ ಬಂದು ಪ್ರತ್ಯೇಕ ಹೋಟೆಲ್‌ಗಳಲ್ಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಸಾಗರ್‌ ಹೋಟೆಲ್‌ವೊಂದರಲ್ಲಿ ಕಿಚನ್ ಸೂಪರ್‌ವೈಸರ್ ಆಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.

ಪೊಲೀಸರ ತನಿಖೆ ವೇಳೆ ದಂಪತಿ ನಡುವೆ ಹಣಕಾಸಿನ ವಿಚಾರವಾಗಿ ಆಗಾಗ ಗಲಾಟೆ ನಡೆಯುತ್ತಿದ್ದ ಮಾಹಿತಿ ಸಿಕ್ಕಿದೆ. ಆಗಸ್ಟ್ 11ರಂದು ಕೂಡ ಇಬ್ಬರ ನಡುವೆ ಜಗಳ ನಡೆದಿದ್ದು, ಬಳಿಕ ಮನೆಗೆ ಬಂದ ನಂತರವೂ ಗಲಾಟೆ ಮುಂದುವರಿದಿದೆ. ಈ ವೇಳೆ ಸಾಗರ್ ಪತ್ನಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ.

ಕೊಲೆಯ ಬಳಿಕ ಆರೋಪಿ ಸುಮಾರು ಮೂರು ದಿನಗಳ ಕಾಲ ಮೃತದೇಹವನ್ನು ಮನೆಯಲ್ಲೇ ಇಟ್ಟುಕೊಂಡಿದ್ದ ಎನ್ನಲಾಗಿದೆ. ಬಳಿಕ ಮೃತದೇಹವನ್ನು ಹಾಸಿಗೆಯಲ್ಲಿ ಸುತ್ತಿ ಖಾಲಿ ಸೈಟ್‌ಗೆ ಕೊಂಡೊಯ್ದು ಎಸೆದಿದ್ದಾನೆ. ಶವ ಎಸೆದ ನಂತರವೂ ಹಲವು ದಿನಗಳ ಕಾಲ ಸೈಟ್‌ ಸುತ್ತಮುತ್ತ ಓಡಾಡಿ, ಯಾರಾದರೂ ಅಲ್ಲಿಗೆ ಬರುತ್ತಾರೆಯೇ ಎಂಬುದನ್ನು ಗಮನಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಅನುಸೂಯ ಸಾವಿನ ಬಳಿಕವೇ ಆಕೆಯ ಕುಟುಂಬಸ್ಥರಿಗೆ ಮದುವೆಯ ವಿಚಾರ ತಿಳಿದಿದೆ. ಬಟ್ಟೆಯ ಟ್ಯಾಗ್‌ನಿಂದ ಆರಂಭವಾದ ತನಿಖೆ, ಹೋಟೆಲ್‌ನಲ್ಲಿ ನಡೆದ ವಿಚಾರಣೆ ಹಾಗೂ ಆರೋಪಿ ಸಾಗರ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಬಳಿಕ ಕೊಲೆಯ ರಹಸ್ಯವನ್ನು ಬಯಲಿಗೆಳೆದಿದೆ. ಶವ ಪತ್ತೆಯಾದ ಒಂದು ವಾರದೊಳಗೆ ಸಂಪಿಗೆಹಳ್ಳಿ ಪೊಲೀಸರು ಆರೋಪಿ ಪತಿ ಸಾಗರ್ ಚಂದ್ರ ರಾವತ್‌ನನ್ನು ಬಂಧಿಸಿದ್ದಾರೆ.

Exit mobile version