ಪೊಲೀಸ್ ಕ್ವಾರ್ಟರ್ಸ್ ಜಾಗ ಕಬಳಿಸಲು ಯತ್ನಿಸಿದ್ದ ಭೂಗಳ್ಳರು ಅಂದರ್

Untitled design (40)

ಬೆಂಗಳೂರು: ಮಲ್ಲೇಶ್ವರಂನಲ್ಲಿರುವ ಐತಿಹಾಸಿಕ ಪೊಲೀಸ್ ಕ್ವಾರ್ಟರ್ಸ್ ಜಾಗವನ್ನು ಲಪಟಾಯಿಸಲು ಸಂಚು ರೂಪಿಸಿದ್ದ ಮೂವರು ಖದೀಮರನ್ನು ಮಲ್ಲೇಶ್ವರಂ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಕೃಷ್ಣಮೂರ್ತಿ, ಶ್ರೀನಾಥ್ ನಗರಗಡ್ಡೆ ಮತ್ತು ಕೃಷ್ಣ ಎಂದು ಗುರುತಿಸಲಾಗಿದೆ. ಈ ಭೂಗಳ್ಳರು ಸುಮಾರು 25 ಸಾವಿರ ಚದರಡಿ ವಿಸ್ತೀರ್ಣದ ಬೆಲೆಬಾಳುವ ಸರ್ಕಾರಿ ಜಾಗವನ್ನು ತಮ್ಮ ಹೆಸರಿಗೆ ಮಾಡಿಕೊಳ್ಳಲು ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದರು ಎಂಬ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ.

ಮಲ್ಲೇಶ್ವರಂನ ಹಳೆಯ ಪೊಲೀಸ್ ವಸತಿ ಗೃಹಗಳಲ್ಲಿ ಪ್ರಸ್ತುತ ನಾಲ್ವರು ಪೊಲೀಸ್ ಇನ್ಸ್‌ಪೆಕ್ಟರ್‌ಗಳ ಕುಟುಂಬಗಳು ವಾಸಿಸುತ್ತಿವೆ. ಇತ್ತೀಚೆಗೆ ಲೋಕಾಯುಕ್ತ ಇನ್ಸ್‌ಪೆಕ್ಟರ್ ಕುಮಾರ್ ಅವರ ಮನೆಗೆ ಬಂದ ವಿದ್ಯುತ್ ಬಿಲ್‌ನಲ್ಲಿ ಇಲಾಖೆಯ ಹೆಸರಿನ ಬದಲಾಗಿ ‘ಮಹಾಲಕ್ಷ್ಮಿ’ ಎಂಬ ಖಾಸಗಿ ಮಹಿಳೆಯ ಹೆಸರು ಕಂಡುಬಂದಿದೆ. ಇದರಿಂದ ಅನುಮಾನಗೊಂಡ ಅಧಿಕಾರಿಗಳು ತನಿಕೆ ನಡಸಿದ್ದಾರೆ ಈ ವೇಳೆ ಭೂಗಳ್ಳರ ಬಗ್ಗೆ ತಿಳಿದುಬಂದಿದೆ.

ಆರೋಪಿಗಳು ಬಿಬಿಎಂಪಿ ಅಧಿಕಾರಿಗಳ ಕಣ್ತಪ್ಪಿಸಿ ಅಥವಾ ಶಾಮೀಲಾಗಿ ಅಕ್ರಮವಾಗಿ ಇ-ಖಾತಾ ಮಾಡಿಸಿಕೊಂಡಿದ್ದರು. ಅಷ್ಟೇ ಅಲ್ಲದೆ, ಈ ಜಾಗವನ್ನು ಕೃಷ್ಣಮೂರ್ತಿ ಎಂಬಾತನಿಗೆ ಮಾರಾಟ ಮಾಡಲು ಒಪ್ಪಂದ ಪತ್ರವನ್ನೂ ಸಿದ್ಧಪಡಿಸಿದ್ದರು. 1913ರ ಮಾಪನ ನಕ್ಷೆಯಲ್ಲಿಯೇ ಈ ಜಾಗ ‘ಪೊಲೀಸ್ ವಸತಿಗೃಹ’ ಎಂದು ದಾಖಲಾಗಿದ್ದರೂ, ವಂಚಕರು ಅದನ್ನು ಖಾಸಗಿ ಆಸ್ತಿ ಎಂದು ಬಿಂಬಿಸಲು ಯತ್ನಿಸಿದ್ದರು.

ಹಂತ ಹಂತವಾಗಿ ಜಾಗ ಕಬಳಿಸಲು ಮುಂದಾಗಿದ್ದ ಈ ಗ್ಯಾಂಗ್, ಅಲ್ಲಿ ವಾಸವಿದ್ದ ಪೊಲೀಸ್ ಅಧಿಕಾರಿಗಳ ಕುಟುಂಬಕ್ಕೇ ಜಾಗ ಖಾಲಿ ಮಾಡುವಂತೆ ಬೆದರಿಕೆ ಕೂಡ ಹಾಕಿತ್ತು. ಸದ್ಯ ಲೋಕಾಯುಕ್ತ ಇನ್ಸ್‌ಪೆಕ್ಟರ್ ಕುಮಾರ್ ನೀಡಿದ ದೂರಿನ ಮೇರೆಗೆ ಎಫ್‌ಐಆರ್ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿಗಳನ್ನು ಅರೆಸ್ಟ್‌ ಮಾಡಿದ್ದಾರೆ.

Exit mobile version