ಬೆಂಗಳೂರು (ಜುಲೈ.28 ) : ಐಷಾರಾಮಿ ಕಾರುಗಳಿಗೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ಕೋಟ್ಯಂತರ ರೂಪಾಯಿ ವಂಚನೆ ನಡೆಸುತ್ತಿದ್ದ ಜಾಲವನ್ನು ಆಡುಗೋಡಿ ಠಾಣೆ ಪೊಲೀಸರು ಭೇದಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದ್ದು, ಅವರಿಂದ ಸುಮಾರು ₹1.74 ಕೋಟಿ ಮೌಲ್ಯದ ಏಳು ಐಷಾರಾಮಿ ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬಂಧಿತರನ್ನು ಪ್ರಭಾಕರ್, ಪ್ರಶಾಂತ್, ವೇಣುಗೌಡ ಹಾಗೂ ಭಾಗೇಶ್ ಎಂದು ಗುರುತಿಸಲಾಗಿದೆ. ಆರೋಪಿಗಳಿಂದ ಎರಡು ಟೊಯೋಟಾ ಫಾರ್ಚೂನರ್, ಒಂದು ವೋಲ್ವೋ, ಒಂದು ಇನ್ನೋವಾ, ಒಂದು ಫೋರ್ಡ್ ಹಾಗೂ ಸ್ವಿಫ್ಟ್ ಸೇರಿದಂತೆ ಒಟ್ಟು ಏಳು ವಾಹನಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಪ್ರಾಥಮಿಕ ತನಿಖೆಯ ಪ್ರಕಾರ, ಆರೋಪಿಗಳು ಕಾರು ಬ್ರೋಕರ್‌ಗಳಾಗಿ ಪರಿಚಯಿಸಿಕೊಂಡು ದುಬಾರಿ ಕಾರುಗಳ ಮಾಲೀಕರನ್ನು ಗುರಿಯಾಗಿಸುತ್ತಿದ್ದರು. ₹40ರಿಂದ ₹50 ಲಕ್ಷ ಮೌಲ್ಯದ ಕಾರುಗಳನ್ನು ಅಡಮಾನವಿಟ್ಟು ₹4ರಿಂದ ₹5 ಲಕ್ಷ ಸಾಲ ಪಡೆದಿದ್ದ ಮಾಲೀಕರ ಮಾಹಿತಿಯನ್ನು ಸಂಗ್ರಹಿಸಿ, ಬಳಿಕ ಆ ವಾಹನಗಳಿಗೆ ನಕಲಿ ದಾಖಲೆಗಳನ್ನು ಸೃಷ್ಟಿಸುತ್ತಿದ್ದರು. ಕೆಲ ಪ್ರಕರಣಗಳಲ್ಲಿ ಮೂಲ ಆರ್‌ಸಿ (RC) ದಾಖಲೆಯಲ್ಲೇ ತಿದ್ದುಪಡಿ ಮಾಡಿ ಮಾಲೀಕರ ಹೆಸರನ್ನು ಬದಲಾಯಿಸುತ್ತಿದ್ದರು.
ನಕಲಿ ದಾಖಲೆಗಳನ್ನು ಬಳಸಿಕೊಂಡು ಅದೇ ಕಾರುಗಳನ್ನು ಮತ್ತೊಬ್ಬ ಡೀಲರ್ ಅಥವಾ ಹಣಕಾಸು ಸಂಸ್ಥೆ ಬಳಿ ₹20ರಿಂದ ₹25 ಲಕ್ಷದವರೆಗೆ ಅಡಮಾನವಿಟ್ಟು ಹಣ ಪಡೆದು ವಂಚನೆ ನಡೆಸುತ್ತಿದ್ದರು. ನಂತರ ಮೂಲ ಅಡಮಾನ ಮೊತ್ತವನ್ನು ಪಾವತಿಸಿ ಕಾರನ್ನು ಬಿಡಿಸಿಕೊಂಡು ಮತ್ತೆ ಮತ್ತೊಬ್ಬರ ಬಳಿ ಅಡಮಾನವಿಡುವ ಮೂಲಕ ಸರಣಿ ವಂಚನೆ ಎಸಗುತ್ತಿದ್ದರು.
ಈ ರೀತಿ ಹಲವು ಬಾರಿ ಕೈಬದಲಾದ ವಾಹನಗಳ ನಿಜವಾದ ಮಾಲೀಕರನ್ನು ಪತ್ತೆಹಚ್ಚುವುದು ಪೊಲೀಸರಿಗೆ ದೊಡ್ಡ ಸವಾಲಾಗಿದೆ. ಕಾರುಗಳನ್ನು ಪಡೆದು ವಾಪಸ್ ನೀಡದೇ ವಂಚಿಸಿರುವ ಬಗ್ಗೆ ಸಾರ್ವಜನಿಕರಿಂದ ಬಂದ ದೂರಿನ ಆಧಾರದಲ್ಲಿ ತನಿಖೆ ಆರಂಭಿಸಿದ ಆಡುಗೋಡಿ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಬಂಧಿತರನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದ್ದು, ಈ ವಂಚನಾ ಜಾಲದಲ್ಲಿ ಇನ್ನೂ ಹಲವರು ಭಾಗಿಯಾಗಿರುವ ಸಾಧ್ಯತೆಯನ್ನೂ ಪೊಲೀಸರು ಪರಿಶೀಲಿಸುತ್ತಿದ್ದಾರೆ.
