ಬೆಂಗಳೂರು ಏರ್‌ಪೋರ್ಟ್‌ನಲ್ಲಿ 3.12 ಕೋಟಿ ಮೌಲ್ಯದ ಹೈಡೋ ಗಾಂಜಾ ಜಪ್ತಿ

Untitled design (47)

ಬೆಂಗಳೂರು: ಸಿಲಿಕಾನ್ ಸಿಟಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು (KIA) ಇತ್ತೀಚಿನ ದಿನಗಳಲ್ಲಿ ಮಾದಕ ವಸ್ತು ಸಾಗಾಟಗಾರರ ಪ್ರಮುಖ ತಾಣವಾಗಿ ಬದಲಾಗುತ್ತಿದೆಯೇ ಎಂಬ ಆತಂಕ ಶುರುವಾಗಿದೆ. ಇದಕ್ಕೆ ಸಾಕ್ಷಿಯೆಂಬಂತೆ, ಕಸ್ಟಮ್ಸ್ ಅಧಿಕಾರಿಗಳು ನಡೆಸಿದ ಮಿಂಚಿನ ಕಾರ್ಯಾಚರಣೆಯಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಅತ್ಯಂತ ದುಬಾರಿ ‘ಹೈಡೋ ಗಾಂಜಾ’ ವಶಪಡಿಸಿಕೊಳ್ಳಲಾಗಿದ್ದು, ಅಂತರಾಷ್ಟ್ರೀಯ ಡ್ರಗ್ಸ್ ಮಾಫಿಯಾದ ಬೃಹತ್ ಜಾಲವೊಂದನ್ನು ಭೇದಿಸಲಾಗಿದೆ.

ಕಾರ್ಯಾಚರಣೆ ನಡೆದಿದ್ದು ಹೇಗೆ ?

ಶುಕ್ರವಾರದಂದು ಬ್ಯಾಂಕಾಕ್‌ನಿಂದ ಬೆಂಗಳೂರಿಗೆ ಬಂದಿಳಿದ ವಿಮಾನವೊಂದರಲ್ಲಿ ಪ್ರಯಾಣಿಕರ ತಪಾಸಣೆ ನಡೆಯುತ್ತಿತ್ತು. ಈ ವೇಳೆ ಒಬ್ಬ ಪ್ರವಾಸಿಯ ನಡವಳಿಕೆಯ ಮೇಲೆ ಕಸ್ಟಮ್ಸ್ ಅಧಿಕಾರಿಗಳಿಗೆ ತೀವ್ರ ಅನುಮಾನ ಮೂಡಿದೆ. ಕೂಡಲೇ ಆತನನ್ನು ವಶಕ್ಕೆ ಪಡೆದು ಆತನ ಲಗೇಜ್‌ಗಳನ್ನು ಕೂಲಂಕಷವಾಗಿ ತಪಾಸಣೆ ನಡೆಸಿದಾಗ, ಅತ್ಯಂತ ಚಾಣಾಕ್ಷತನದಿಂದ ಬ್ಯಾಗ್‌ನಲ್ಲಿ ಅಡಗಿಸಿಟ್ಟಿದ್ದ ಮಾದಕ ವಸ್ತು ಪತ್ತೆಯಾಗಿದೆ.

ಅಧಿಕಾರಿಗಳು ವಶಪಡಿಸಿಕೊಂಡ ಈ ‘ಹೈಡೋ ಗಾಂಜಾ’ ಸುಮಾರು 8.93 ಕೆಜಿ ತೂಕವಿದ್ದು, ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇದರ ಮೌಲ್ಯ ಬರೋಬ್ಬರಿ 3.12 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಸಿಕ್ಕಿಬಿದ್ದ ಆರೋಪಿಯನ್ನು ಸದ್ಯ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

ಕಳೆದ ಒಂದು ವಾರದಿಂದ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ನಡೆಯುತ್ತಿರುವ ಸರಣಿ ಡ್ರಗ್ಸ್ ಬೇಟೆಗಳು ತನಿಖಾ ಸಂಸ್ಥೆಗಳನ್ನು ನಿದ್ದೆಗೆಡಿಸಿವೆ. ಗಮನಾರ್ಹ ಸಂಗತಿಯೆಂದರೆ, ಇತ್ತೀಚೆಗೆ ಸಿಕ್ಕಿಬಿದ್ದ ಬಹುತೇಕ ಆರೋಪಿಗಳು ಮತ್ತು ಮಾದಕ ವಸ್ತುಗಳು ಥೈಲ್ಯಾಂಡ್‌ನ ಬ್ಯಾಂಕಾಕ್‌ನಿಂದಲೇ ಬಂದಿರುವುದು ತನಿಖೆಯಲ್ಲಿ ದೃಢಪಟ್ಟಿದೆ. ಪ್ರವಾಸಿಗರ ಸೋಗಿನಲ್ಲಿ ಅತ್ಯಂತ ದುಬಾರಿ ಮಾದಕ ವಸ್ತುಗಳನ್ನು ಸಾಗಿಸುವ ವ್ಯವಸ್ಥಿತ ಜಾಲವೊಂದು ಬ್ಯಾಂಕಾಕ್‌ನಿಂದ ಬೆಂಗಳೂರಿಗೆ ಸಕ್ರಿಯವಾಗಿರುವುದು ಈ ಘಟನೆಯಿಂದ ಸ್ಪಷ್ಟವಾಗಿದೆ.

ವಿದೇಶಿ ಪ್ರವಾಸಿಗರನ್ನು ಬಳಸಿಕೊಂಡು ನಡೆಯುತ್ತಿರುವ ಈ ಮಾದಕ ದ್ರವ್ಯ ದಂಧೆಯನ್ನು ಮಟ್ಟಹಾಕಲು ಕಸ್ಟಮ್ಸ್ ಮತ್ತು ಕೇಂದ್ರ ಭದ್ರತಾ ಸಂಸ್ಥೆಗಳು ಈಗ ಹದ್ದಿನ ಕಣ್ಣಿಟ್ಟಿವೆ. ವಶಪಡಿಸಿಕೊಳ್ಳಲಾದ ಈ ಬೃಹತ್ ಪ್ರಮಾಣದ ಗಾಂಜಾ ಬೆಂಗಳೂರಿನಲ್ಲಿ ಯಾರಿಗೆ ತಲುಪಬೇಕಿತ್ತು? ಈ ಜಾಲದ ಹಿಂದೆ ಇರುವ ಪ್ರಮುಖ ಕಿಂಗ್‌ಪಿನ್‌ಗಳು ಯಾರು? ಎಂಬ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

Exit mobile version