ಬೆಳಗಾವಿ, ಜುಲೈ 18: ಕೊಲೆ ಪ್ರಕರಣದಲ್ಲಿ ಸಾಕ್ಷಿಯಾಗಿದ್ದ ಯುವಕನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೆರಿ ತಾಲೂಕಿನ ಹಿಡಕಲ್ ಡ್ಯಾಂ ಸಮೀಪ ನಡೆದಿದೆ. ಹಳೆ ವೈಷಮ್ಯವೇ ಈ ಕೊಲೆಗೆ ಕಾರಣ ಎನ್ನುವ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಮೃತ ಯುವಕನನ್ನು ಮುತ್ತುಸ್ವಾಮಿ ಹೃದಯರಾಜ್ ಪಾಸ್ಕಲ್ (30) ಎಂದು ಗುರುತಿಸಲಾಗಿದೆ. ಅವರು ಗೋಕಾಕ್ ಫಾಲ್ಸ್ ಸಮೀಪದ ಮಾಣಿಕವಾಡಿ ಗ್ರಾಮದ ನಿವಾಸಿ ಎಂದು ತಿಳಿದುಬಂದಿದೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಮುತ್ತುಸ್ವಾಮಿ ತಮ್ಮ ಸ್ನೇಹಿತರೊಂದಿಗೆ ಹಿಡಕಲ್ ಡ್ಯಾಂ ಭಾಗಕ್ಕೆ ತೆರಳಿದ್ದ ವೇಳೆ, ಒಂದು ಆಟೋ ಹಾಗೂ ಎರಡು ಬೈಕ್‌ಗಳಲ್ಲಿ ಬಂದಿದ್ದ ದುಷ್ಕರ್ಮಿಗಳ ತಂಡ ಏಕಾಏಕಿ ದಾಳಿ ನಡೆಸಿದೆ. ದಾಳಿಯಿಂದ ತಪ್ಪಿಸಿಕೊಳ್ಳಲು ಓಡಿದ ಮುತ್ತುಸ್ವಾಮಿ ಕೆಳಗೆ ಬಿದ್ದಿದ್ದು, ಬಳಿಕ ಆರೋಪಿಗಳು ಅವರನ್ನು ಸುತ್ತುವರಿದು ಮಾರಕಾಸ್ತ್ರಗಳಿಂದ ಮನಬಂದಂತೆ ಹಲ್ಲೆ ನಡೆಸಿದ್ದಾರೆ.
ಹಲ್ಲೆಯಲ್ಲಿ ಮುತ್ತುಸ್ವಾಮಿ ಅವರ ಕುತ್ತಿಗೆ ಸೇರಿದಂತೆ ದೇಹದ ಹಲವು ಭಾಗಗಳಿಗೆ ಗಂಭೀರ ಗಾಯಗಳಾಗಿವೆ. ಗಾಯಗೊಂಡ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆಯೇ ಅವರು ಮೃತಪಟ್ಟಿದ್ದಾರೆ. ದಾಳಿ ವೇಳೆ ಜೊತೆಗಿದ್ದ ಸ್ನೇಹಿತರು ಪ್ರಾಣಭಯದಿಂದ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಪೊಲೀಸರ ಮಾಹಿತಿ ಪ್ರಕಾರ, ಮುತ್ತುಸ್ವಾಮಿ ಗೋಕಾಕ್‌ನಲ್ಲಿ ನಡೆದಿದ್ದ ಸಿದ್ದಪ್ಪ ಎಂಬುವರ ಕೊಲೆ ಪ್ರಕರಣದಲ್ಲಿ ಪ್ರಮುಖ ಸಾಕ್ಷಿಯಾಗಿದ್ದರು. ಇದೇ ಹಿನ್ನೆಲೆಯಲ್ಲಿ ‘ಟೈಗರ್ ಗ್ಯಾಂಗ್’ ಸದಸ್ಯರಿಂದ ಅವರಿಗೆ ಜೀವ ಬೆದರಿಕೆ ಇತ್ತು ಎನ್ನಲಾಗಿದೆ. ತಮ್ಮ ಜೀವಕ್ಕೆ ಅಪಾಯವಿದೆ ಎಂದು ಮುತ್ತುಸ್ವಾಮಿ ತಮ್ಮ ಅಕ್ಕನಿಗೂ ಮುಂಚಿತವಾಗಿ ತಿಳಿಸಿದ್ದು, “ನನಗೆ ಏನಾದರೂ ಆದರೆ ಅದಕ್ಕೆ ಟೈಗರ್ ಗ್ಯಾಂಗ್ ಕಾರಣ” ಎಂದು ಹೇಳಿದ್ದರೆಂಬ ಮಾಹಿತಿ ಹೊರಬಿದ್ದಿದೆ.
ಇನ್ನೊಂದು ಪ್ರಮುಖ ಅಂಶವೆಂದರೆ, ಮುತ್ತುಸ್ವಾಮಿ ವಿರುದ್ಧವೂ ಒಂದು ಪ್ರಕರಣ ದಾಖಲಾಗಿದ್ದು, ಅವರು ಧಾರವಾಡ ಜೈಲಿನಿಂದ ಕೊಲೆ ನಡೆಯುವ ಹಿಂದಿನ ದಿನವೇ ಬಿಡುಗಡೆಯಾಗಿದ್ದರು ಎನ್ನಲಾಗಿದೆ. ಇದರಿಂದ ಪ್ರಕರಣ ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ.
ಘಟನಾ ಸ್ಥಳಕ್ಕೆ ಯಮಕನಮರಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಹಳೆಯ ದ್ವೇಷ, ಗ್ಯಾಂಗ್ ವೈಷಮ್ಯ ಅಥವಾ ಸಾಕ್ಷಿಯಾಗಿದ್ದ ಹಿನ್ನೆಲೆ ಸೇರಿದಂತೆ ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿದಿದೆ. ಆರೋಪಿಗಳ ಪತ್ತೆಗೆ ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
