ಬೆಳಗಾವಿ: ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬಸಾಪುರ ಗ್ರಾಮ ಪಂಚಾಯತ್ ಅಧ್ಯಕ್ಷ ಭೀಮಶಿ ಕಾಲಿಮಣಿ 15 ವರ್ಷದ ಅಪ್ರಾಪ್ತ ಬಾಲಕಿಯನ್ನು ವಿವಾಹವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಗಂಭೀರ ಆರೋಪಗಳು ಕೇಳಿಬಂದಿವೆ. ಈ ಕುರಿತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಪ್ರತಿಕ್ರಿಯೆ ನೀಡಿದ್ದು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಕಾನೂನು ಕ್ರಮಕ್ಕೆ ಒಳಪಡಿಸಲಾಗಿದೆ ಎಂದು ತಿಳಿಸಿದ್ದಾರೆ.
2023ರ ನವೆಂಬರ್ 5ರಂದು ಭೀಮಶಿ ಕಾಲಿಮಣಿ ಅಪ್ರಾಪ್ತ ಬಾಲಕಿಯನ್ನು ವಿವಾಹವಾದ ಘಟನೆ ನಡೆದಿದ್ದು, ಬಾಲಕಿಯೀಗ ಗರ್ಭಿಣಿಯಾಗಿರುವ ಮಾಹಿತಿ ಬೆಳಕಿಗೆ ಬಂದಿದೆ. ಈ ಪ್ರಕರಣ ಬಯಲಿಗೆ ಬಂದ ತಕ್ಷಣ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ಜೊತೆಗೆ, ಪೊಕ್ಸೊ ಕಾಯ್ದೆಯಡಿ ಭೀಮಶಿ ವಿರುದ್ಧ ಕೇಸ್ ದಾಖಲಾಗಿದೆ.
ಭೀಮಶಿ ಕಾಲಿಮಣಿ ತನ್ನ ಪತ್ನಿಯನ್ನು ಪ್ರಾಪ್ತ ವಯಸ್ಸಿನವಳು ಎಂದು ಸಾಬೀತುಪಡಿಸಲು ನಕಲಿ ಜನನ ಪ್ರಮಾಣಪತ್ರವನ್ನು ಒದಗಿಸಿದ್ದ. ಆದರೆ, ಅಧಿಕಾರಿಗಳು ಈ ದಾಖಲೆಯನ್ನು ಮೂಲ ಜನನ ಪ್ರಮಾಣಪತ್ರದೊಂದಿಗೆ ಹೋಲಿಕೆ ಮಾಡಿ, ಆಕೆ ಅಪ್ರಾಪ್ತ ಬಾಲಕಿಯೆಂದು ದೃಢಪಡಿಸಿಕೊಂಡಿದ್ದಾರೆ. ಈ ಕೃತ್ಯಕ್ಕಾಗಿ ಭೀಮಶಿ ವಿರುದ್ಧ ಕಾನೂನು ಕ್ರಮ ಮುಂದುವರಿಯಲಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದ್ದಾರೆ.