ಸಂವಿಧಾನ ಸಂರಕ್ಷಣೆ ಮತ್ತು ಸವಾಲುಗಳು ಕುರಿತು ಬೆಂವಿವಿ ಚಿಂಥನ ಮಂಥನ

ಶಿಕ್ಷಣದ ಮೂಲಕ ಸಂವಿಧಾನ ಸಂರಕ್ಷಣೆ ಸಾಧ್ಯ: ಡಾ.ವಿಶ್ವನಾಥ್

BeFunky collage 2026 01 14T144326.179

“ಶಿಕ್ಷಣ ಸಂಸ್ಥೆ ವಿಶ್ವವಿದ್ಯಾಲಯಗಳು ಸಂವಿಧಾನವನ್ನು ಶಿಕ್ಷಣದ ಭಾಗವಾಗಿಸಿಕೊಂಡು ಸಂವಿಧಾನದ ಆಶಯ, ಮೌಲ್ಯಗಳನ್ನು ವಿದ್ಯಾರ್ಥಿಗಳಲ್ಲಿ ಬಿತ್ತಬೇಕು, ಆಗ ಮಾತ್ರ ಸಂವಿಧಾನದ ಸಂರಕ್ಷಣೆ ಸಾಧ್ಯ” ಎಂದು ಡಾ.ಬಿ.ಆರ್.ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ವಿಶ್ವವಿದ್ಯಾಲಯ ಕುಲಪತಿಗಳು ಅಭಿಪ್ರಾಯ ವ್ಯಕ್ತಪಡಿಸಿದರು.

ಬೆಂಗಳೂರು ವಿಶ್ವವಿದ್ಯಾಲಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಶಿಕ್ಷಕೇತರ ನೌಕರರ ಸಂಘದ ವತಿಯಿಂದ ಜ್ಞಾನಭಾರತಿ ಆಡಳಿತ ಕಚೇರಿಯಲ್ಲಿ ಆಯೋಜಿಸಿದ್ದ ‘ಪ್ರಸ್ತುತ ಕಾಲಘಟ್ಟದಲ್ಲಿ ಭಾರತೀಯ ಸಂವಿಧಾನದ ಸಂರಕ್ಷಣೆ ಮತ್ತು ಅದರ ಮುಂದಿರುವ ಸವಾಲುಗಳು’ ಎಂಬ ಚಿಂತನ ಮಂಥನ ವಿಶೇಷ ಕಾರ್ಯಕ್ರಮ ದಿಕ್ಸೂಚಿ ಭಾಷಣ ಮಾಡಿದರು. “ವಿಶ್ವಯುದ್ದದ‌‌‌ ನಂತರ ಅನೇಕ ದೇಶಗಳು ಸಂವಿಧಾನವನ್ನು ರಚಿಸಿ ಅಳವಡಿಸಿಕೊಂಡವು. ಆದರೆ ಕಾಲಾನುಕ್ರಮದಲ್ಲಿ ಅನೇಕ ದೇಶಗಳು ಅಧಃಪತನ ಸಾಧಿಸಿದವು. ಭಾರತದ ಸಂವಿಧಾನ ಮಾತ್ರ ಇನ್ನೂ ಗಟ್ಟಿಯಾಗಿದೆ.ಭಾರತದ ಸಾಮಾಜಿಕ ವ್ಯವಸ್ಥೆಗೆ ಡಾ.ಬಿ.ಆರ್.ಅಂಬೇಡ್ಕರ್ ಸಂವಿಧಾನ ಅತ್ಯಾವಶ್ಯಕ. ಪ್ರಸ್ತುತ ಸಂವಿಧಾನವನ್ನು ಅಲುಗಾಡಿಸುವ ಶಕ್ತಿಗಳು ಕಾರ್ಯಪ್ರವೃತ್ರವಾಗಿದೆ. ಯಾವುದೇ ಸರ್ಕಾರ, ಪಕ್ಷಗಳು ಅಧಿಕಾರಕ್ಕೆ ಬಂದರೂ ಸಾಂವಿಧಾನಿಕ ಸಂಸ್ಥೆಗಳನ್ನು ದುರ್ಬಳಕೆ ಮಾಡಿ ಆ ಸಂಸ್ಥೆಗಳನ್ನು ನಿರ್ಜೀವಗೊಳಿಸುವ ಪ್ರಯತ್ನಗಳು ನಡೆಯುತ್ತಿದೆ” ಎಂದು ತಿಳಿಸಿದರು‌.

“ಕೋಮು ಪ್ರಚೋದನೆ, ಜಾತಿ ತಾರತಮ್ಯ, ಅಸಮಾನತೆ ಹೊಂದಿರುವ ಯಾವುದೇ ಸಮಾಜದ ಏಳಿಗೆ ಸಾಧ್ಯವಿಲ್ಲ. ಶಿಕ್ಷಣದ ಮೂಲಕ ಮಾತ್ರ ಸಮಸಮಾಜ ನಿರ್ಮಾಣ‌ ಸಾಧ್ಯ. ಶಿಕ್ಷಣ ಸಂಸ್ಥೆ, ವಿಶ್ವವಿದ್ಯಾಲಯಗಳು ಸಂವಿಧಾನವನ್ನು ಶೈಕ್ಷಣಿಕ ಭಾಗವಾಗಿಸಿ ವಿದ್ಯಾರ್ಥಿಗಳಲ್ಲಿ ಸಂವಿಧಾನದ ಆಶಯಗಳ ಬಗ್ಗೆ ಅರಿವು ಮೂಡಿಸಬೇಕು. ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷರಾದ ಡಾ.ಗೊಲ್ಲಹಳ್ಳಿ ಶಿವಪ್ರಸಾದ್ ಮಾತನಾಡಿದ್ದು “ಸಂವಿಧಾನಕ್ಕೆ ಅಪಾಯವಿದೆ, ಸಂವಿಧಾನದ ಆಪತ್ತನ್ನು ದೂರ ಮಾಡಲು ಮನುವಾದವನ್ನು ಕಿತ್ತೆಸೆಯಬೇಕು.ಅಮ್ಮನಿಲ್ಲದ ಮನೆ ಅನಾಥಾವಾಗುವಂತೆ ಅಂಬೇಡ್ಕರ್ ಆಶಯ ಮರೆತ ದೇಶವು ಅನಾಥವಾಗುತ್ತದೆ ಎಂಬ ಭಾವವನ್ನು ಎಲ್ಲಾ ಸಮುದಾಯಗಳು ಅರಿತುಕೊಳ್ಳಬೇಕು. ಭಾರತದ ಸಂವಿಧಾನ ಸರ್ವಜನಾಂಗಕ್ಕೆ ಸೇರಿದ್ದು ಆದರೆ ದಲಿತರಿಗೆ ಮಾತ್ರ ಸೀಮಿತ ಎಂಬ ತಪ್ಪು ಪರಿಕಲ್ಪನೆಯಿದೆ. ಸ್ವಹಿತಾಸಕ್ತಿ ಬಿಟ್ಟು ಸಮಾಜಕ್ಕೆ ಬೆಳಕು ಚೆಲ್ಲಿದ ಮಹಾನೀಯರನ್ನು ಮರೆತು ತಮಗೆ ಬೇಕಾದವರನ್ನು ಮೆರೆಸುವ ಪಿತೂರಿ ಈ ದೇಶದಲ್ಲಿ ನಡೆಯುತ್ತಿದೆ. ಎಲ್ಲಾ ಸಮುದಾಯಗಳ ಮಹನೀಯರನ್ನು ಆಯಾ ಸಮುದಾಯಗಳಿಗೆ ಸೀಮಿತಗೊಳಿಸಿದರೆ ಭಾರತದ ಭಾಗ್ಯದ ಬಾಗಿಲನ್ನು ತೆರೆಯುವವರು ಯಾರು ಎಂದು ಚಿಂತಿಸಬೇಕು” ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ರಾಜಕೀಯ ಚಿಂತಕರು ಕವಿತಾ ರೆಡ್ಡಿ,ಡಾ.ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾಲಯದ ಕುಲಪತಿಗಳು ಪ್ರೊ.ಬಿ.ರಮೇಶ್, ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿಗಳು ಡಾ.ಜಯಕರ ಎಸ್.ಎಂ, ಕುಲಸಚಿವರು ಕೆ.ಟಿ. ಶಾಂತಲಾ, ಬೆಂವಿವಿ ಕುಲಸಚಿವರು(ಮೌಲ್ಯಮಾಪನ) ಪ್ರೊ.ಸಿ.ಎಸ್.ಕರಿಗಾರ್, ಬೆಂವಿವಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಶಿಕ್ಷಕೇತರ ನೌಕರರ ಸಂಘದ ಅಧ್ಯಕ್ಷರಾದ ಶಿವಪ್ಪ, ಸಿಂಡಿಕೇಟ್ ಸದಸ್ಯ ಡಿ. ಬಿ ಗಂಗರಾಜು, ವಿದ್ಯಾವಿಷಯಕ ಪರಿಷತ್ತಿನ ಸದಸ್ಯರು ಕೃಷ್ಣ ಉಪಸ್ಥಿತರಿದ್ದರು.

Exit mobile version