ನೆಲಮಂಗಲದ ಅದ್ಧೂರಿ ರಿಸೆಪ್ಷನ್‌ಗೆ ಅತಿಥಿಗಳ ಬದಲು ಖಾಕಿ ಎಂಟ್ರಿ, ಮದುವೆ ಕ್ಯಾನ್ಸಲ್ ಆಗಿದ್ದೇಕೆ!

BeFunky collage (79)

ಬೆಂಗಳೂರಿನ ನೆಲಮಂಗಲದಲ್ಲಿ ನಡೆಯುತ್ತಿದ್ದ ಬಾಲ್ಯ ವಿವಾಹಕ್ಕೆ ಕೊನೆಗೂ ಬ್ರೇಕ್ ಬಿದ್ದಿದೆ. ರಾತ್ರಿ ಅದ್ಧೂರಿಯಾಗಿ ಆಯೋಜಿಸಲಾಗಿದ್ದ ರಿಸೆಪ್ಷನ್‌ಗೆ ಅತಿಥಿಗಳ ಬದಲು ಮಕ್ಕಳ ರಕ್ಷಣಾ ಇಲಾಖೆ ಅಧಿಕಾರಿಗಳು ಖಾಕಿ ಎಂಟ್ರಿ ನೀಡಿ ಕುಟುಂಬಸ್ಥರಿಗೆ ಬಿಗ್ ಶಾಕ್ ನೀಡಿದ್ದಾರೆ.

ಘಟನೆಯ ವಿವರ: ನೆಲಮಂಗಲ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ಖಾಸಗಿ ಕಲ್ಯಾಣ ಮಂಟಪದಲ್ಲಿ 17 ವರ್ಷದ ಬಾಲಕಿಯನ್ನು ಬಲವಂತವಾಗಿ ಮದುವೆ ಮಾಡುವ ಯತ್ನ ನಡೆಯುತ್ತಿತ್ತು. ಸಹಾಯವಾಣಿ 1098ಗೆ ದೂರು ಬಂದ ತಕ್ಷಣ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಅನಿತಾ ಲಕ್ಷ್ಮಿ ನೇತೃತ್ವದ ತಂಡ ಮಂಟಪಕ್ಕೆ ಭೇಟಿ ನೀಡಿ ಮದುವೆಗೆ ತಡೆ ಹಾಕಿದೆ.

ಅಧಿಕಾರಿಗಳು ಬಾಲಕಿಯನ್ನು ತಕ್ಷಣವೇ ಸಖಿ ಒನ್ ಸ್ಟಾಪ್ ಸೆಂಟರ್ಗೆ ರವಾನಿಸಿದ್ದಾರೆ. ಪೊಲೀಸ್ ಸಹಾಯದೊಂದಿಗೆ ನಡೆದ ಈ ಕಾರ್ಯಾಚರಣೆಯಲ್ಲಿ ಬಾಲ್ಯ ವಿವಾಹಕ್ಕೆ ಯತ್ನಿಸಿದ ಕುಟುಂಬಸ್ಥರನ್ನು ತರಾಟೆಗೆ ತೆಗೆದುಕೊಳ್ಳಲಾಗಿದೆ.

ಬಾಲ್ಯ ವಿವಾಹ ನಿಷೇಧ ಕಾನೂನು ಇದ್ದರೂ ಇನ್ನೂ ಕೆಲವು ಕುಟುಂಬಗಳು ಇಂತಹ ಅಪರಾಧಕ್ಕೆ ಮುಂದಾಗುತ್ತಿರುವುದು ಆತಂಕಕಾರಿಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಮಕ್ಕಳ ರಕ್ಷಣೆಗಾಗಿ ಸಹಾಯವಾಣಿ 1098ಗೆ ಯಾರಾದರೂ ದೂರು ನೀಡಬಹುದು ಎಂದು ಮನವಿ ಮಾಡಲಾಗಿದೆ.

ಈ ಘಟನೆಯು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಬಾಲ್ಯ ವಿವಾಹ ತಡೆಯುವಲ್ಲಿ ಅಧಿಕಾರಿಗಳು ತೋರಿದ ತ್ವರಿತ ಕ್ರಮಕ್ಕೆ ಉದಾಹರಣೆಯಾಗಿದೆ.

Exit mobile version