ಜನಗಣತಿ ಕಾರ್ಯಕ್ಕೆ ಆಸ್ಪತ್ರೆ ಸಿಬ್ಬಂದಿ ಬಳಕೆ: ಆನೇಕಲ್‌ನಲ್ಲಿ ರೋಗಿಗಳ ತೀವ್ರ ಪರದಾಟ

BeFunky collage (90)

ಸರ್ಕಾರಿ ಆಸ್ಪತ್ರೆಗಳಲ್ಲಿ ಈಗಾಗಲೇ ವೈದ್ಯಕೀಯ ಸಿಬ್ಬಂದಿ ಕೊರತೆ ಇರುವಾಗ, ಜನಗಣತಿ ಕಾರ್ಯಕ್ಕಾಗಿ ವೈದ್ಯರು, ಸ್ಕ್ಯಾನಿಂಗ್ ಟೆಕ್ನಿಷಿಯನ್, ಎಕ್ಸ್‌ರೇ ಟೆಕ್ನಿಷಿಯನ್ ಸೇರಿದಂತೆ ಪ್ರಮುಖ ಸಿಬ್ಬಂದಿಯನ್ನು ಬಳಸುತ್ತಿರುವುದು ರೋಗಿಗಳಿಗೆ ದೊಡ್ಡ ಸಂಕಷ್ಟ ತಂದೊಡ್ಡಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ ಸರ್ಕಾರಿ ಆಸ್ಪತ್ರೆಯಲ್ಲಿ ಈ ಸಮಸ್ಯೆ ತೀವ್ರ ರೂಪ ತಾಳಿದೆ.

ಬೆಳಗ್ಗೆ 8 ಗಂಟೆಯಿಂದಲೇ ಚಿಕಿತ್ಸೆಗಾಗಿ ಬಂದ ರೋಗಿಗಳು, ವಿಶೇಷವಾಗಿ ಮಹಿಳೆಯರು, ಪುಟ್ಟ ಮಕ್ಕಳು ಮತ್ತು ವೃದ್ಧರು ತೀವ್ರ ಪರದಾಟಕ್ಕೊಳಗಾಗಿದ್ದಾರೆ. ಆಸ್ಪತ್ರೆಯ ಹೊರ ರೋಗಿ (OPD) ಮತ್ತು ಒಳ ರೋಗಿ (IPD) ವಿಭಾಗಗಳು ನೆಪಕ್ಕೆ ಮಾತ್ರ ತೆರೆದಿವೆ ಎಂಬ ಆರೋಪಗಳಿವೆ. ಸ್ಕ್ಯಾನಿಂಗ್, ಎಕ್ಸ್‌ರೇ ಮತ್ತು ಇತರ ಪ್ರಮುಖ ವೈದ್ಯಕೀಯ ಸೇವೆಗಳು ಸಂಪೂರ್ಣವಾಗಿ ಬಂದ್ ಆಗಿವೆ.

ರೋಗಿಗಳ ಆಕ್ರೋಶ :

ರೋಗಿಗಳು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸುತ್ತಾ, “ಜನಗಣತಿಗೆ ಸಿಬ್ಬಂದಿಯನ್ನು ಕಳುಹಿಸಿ ನಮ್ಮ ಪ್ರಾಣಕ್ಕೆ ಗಂಡಾಂತರ ಉಂಟುಮಾಡುತ್ತಿದ್ದಾರೆಯೇ?” ಎಂದು ಪ್ರಶ್ನಿಸಿದ್ದಾರೆ. ಬೆಂಗಳೂರು ನಗರ ಜಿಲ್ಲಾಧಿಕಾರಿಗಳ ನಡೆಗೆ ರೋಗಿಗಳು ತೀವ್ರ ಆಕ್ರೋಶ ಹೊರಹಾಕಿದ್ದಾರೆ. “ಜಿಲ್ಲಾಧಿಕಾರಿಗೆ ಸಾರ್ವಜನಿಕರ ಪ್ರಾಣಕ್ಕಿಂತ ಜನಗಣತಿ ಮುಖ್ಯವಾಯಿತೇ?” ಎಂಬ ಪ್ರಶ್ನೆಗಳು ಎದ್ದಿವೆ.

ಆಸ್ಪತ್ರೆಗೆ ಬಂದ ರೋಗಿಗಳು “ಬೀಗ ಹಾಕಿ ಮನೆಗೆ ಹೋಗಿ” ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಚಿಕಿತ್ಸೆ ಸಿಗದೆ ಅನೇಕರು ನಿರಾಶೆಯಿಂದ ಮರಳುತ್ತಿದ್ದಾರೆ.

ಏನಿದು ಸಮಸ್ಯೆ?

ಈ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಸರ್ಕಾರಿ ಆರೋಗ್ಯ ವ್ಯವಸ್ಥೆಯ ಸ್ಥಿತಿ ಬಗ್ಗೆ ಮತ್ತೊಮ್ಮೆ ಪ್ರಶ್ನೆಗಳನ್ನು ಎತ್ತಿದೆ. ಈಗಾಗಲೇ ಸಿಬ್ಬಂದಿ ಕೊರತೆ ಎದುರಿಸುತ್ತಿರುವ ಆಸ್ಪತ್ರೆಗಳಿಂದಲೇ ಜನಗಣತಿ ಕಾರ್ಯಕ್ಕೆ ಸಿಬ್ಬಂದಿಯನ್ನು ಕಳುಹಿಸುವುದು ಸರಿಯೇ ಎಂಬ ವಿವಾದ ಉಂಟಾಗಿದೆ.

Exit mobile version