ಬೆಂಗಳೂರು: ಬಹುಕೋಟಿ ರೂಪಾಯಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಂಸದ ಡಿ.ಕೆ. ಸುರೇಶ್‌ಗೆ ಜಾರಿ ನಿರ್ದೇಶನಾಲಯ (ಇ.ಡಿ.) ಸಮನ್ಸ್ ಜಾರಿ ಮಾಡಿದೆ. ಗುರುವಾರ (ಜೂನ್ 19) ವಿಚಾರಣೆಗೆ ಹಾಜರಾಗುವಂತೆ ಸುರೇಶ್‌ಗೆ ನೋಟಿಸ್ ನೀಡಲಾಗಿದ್ದು, ಆರ್ಥಿಕ ವ್ಯವಹಾರಗಳ ಕುರಿತು ಮಾಹಿತಿ ನೀಡಲು ಸೂಚಿಸಲಾಗಿದೆ.
ಈ ಪ್ರಕರಣದಲ್ಲಿ ಡಿ.ಕೆ. ಸುರೇಶ್‌ರ ತಂಗಿ ಎಂದು ಹೇಳಿಕೊಂಡಿದ್ದ ಐಶ್ವರ್ಯಾ ಗೌಡ ಈಗಾಗಲೇ ಬಹುಕೋಟಿ ವಂಚನೆ ಆರೋಪದಡಿ ಜೈಲು ಸೇರಿದ್ದಾಳೆ. ಐಶ್ವರ್ಯಾ ಗೌಡ, ತನ್ನನ್ನು ಡಿ.ಕೆ. ಶಿವಕುಮಾರ್‌ರ ಕುಟುಂಬದ ಸದಸ್ಯೆ ಎಂದು ಬಿಂಬಿಸಿಕೊಂಡು, ಹಲವರಿಗೆ ಆರ್ಥಿಕ ವಂಚನೆಗೆ ಒಳಪಡಿಸಿದ್ದಾಳೆ ಎಂಬ ಆರೋಪವಿದೆ.
ಡಿ.ಕೆ. ಸುರೇಶ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, “ನನಗೆ ಇ.ಡಿ. ಸಮನ್ಸ್ ಬಂದಿರುವುದು ನಿಜ. ಗುರುವಾರ ವಿಚಾರಣೆಗೆ ಹಾಜರಾಗುತ್ತೇನೆ. ಕಾನೂನಿನ ಮುಂದೆ ಸತ್ಯವನ್ನು ಸಾಬೀತುಪಡಿಸುತ್ತೇನೆ,” ಎಂದು ಹೇಳಿದ್ದಾರೆ.
ಈ ಪ್ರಕರಣವು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದು, ಇ.ಡಿ. ತನಿಖೆಯ ಮುಂದಿನ ಹಂತದಲ್ಲಿ ಇನ್ನಷ್ಟು ವಿವರಗಳು ಬಹಿರಂಗವಾಗುವ ಸಾಧ್ಯತೆಯಿದೆ.