‘ಮೊಬೈಲ್ ಬಿಡಿ-ಪುಸ್ತಕ ಓದಿ’: ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಸಿಎಂ ಕರೆ

1 (6)

79ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಬೆಂಗಳೂರಿನ ಮಾಣೆಕ್ ಷಾ ಪರೇಡ್ ಮೈದಾನದಲ್ಲಿ, ಧ್ವಜಾರೋಹಣ ನೆರವೇರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕರ್ನಾಟಕದ ಜನತೆಯನ್ನುದ್ದೇಶಿಸಿ ಭಾಷಣ ಮಾಡಿದರು. ದೇಶ ನಿರ್ಮಾಣದಲ್ಲಿ ಉತ್ಪಾದಕ ವರ್ಗ ಮತ್ತು ರಕ್ಷಣೆಯಲ್ಲಿ ಸೈನಿಕರ ಕೊಡುಗೆಯನ್ನು ಶ್ಲಾಘಿಸಿದ ಅವರು, ಮಕ್ಕಳ ಸಮಸ್ಯೆಗಳು, ಗ್ಯಾರಂಟಿ ಯೋಜನೆಗಳು, ಜಾತಿ ಗಣತಿ, ಮತ್ತು ಪಹಲ್ಗಾಂ ದಾಳಿಯನ್ನು ಪ್ರಸ್ತಾಪಿಸಿದರು.

ಮೊಬೈಲ್ ಬಿಡಿಪುಸ್ತಕ ಹಿಡಿ

“ಹೊಸ ತಲೆಮಾರಿನ ಮಕ್ಕಳು ಮೊಬೈಲ್ ಫೋನ್ ಮತ್ತು ಇಂಟರ್ನೆಟ್‌ನ ಭರಾಟೆಯಲ್ಲಿ ಖಿನ್ನತೆ, ಆತಂಕ, ಸಿಟ್ಟು, ಮತ್ತು ದ್ವೇಷದಂತಹ ಭಾವನೆಗಳಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಸಾಮಾಜಿಕ ಸಮಸ್ಯೆಯನ್ನು ಎದುರಿಸಲು ‘ಮೊಬೈಲ್ ಬಿಡಿ-ಪುಸ್ತಕ ಹಿಡಿ ಮತ್ತು ‘ಓದು ಕರ್ನಾಟಕ’ ಕಾರ್ಯಕ್ರಮವನ್ನು ಆರಂಭಿಸಿದ್ದೇವೆ” ಎಂದು ಸಿದ್ದರಾಮಯ್ಯ ಘೋಷಿಸಿದರು.

ಈ ಕಾರ್ಯಕ್ರಮವು ಯುವ ಜನರಲ್ಲಿ ಓದುವ ಅಭ್ಯಾಸವನ್ನು ಬೆಳೆಸಿ, ತಂತ್ರಜ್ಞಾನದ ದುರುಪಯೋಗವನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ ಎಂದು ತಿಳಿಸಿದರು.

ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಶ್ಲಾಘಿಸಿದ ಸಿಎಂ, ಕರ್ನಾಟಕವು ತಲಾದಾಯದಲ್ಲಿ, ದೇಶದಲ್ಲಿ ಮೊದಲ ಸ್ಥಾನದಲ್ಲಿದೆ ಎಂದರು. “2013-14ರಲ್ಲಿ 1,01,858 ರೂ. ಆಗಿದ್ದ ತಲಾದಾಯವು 2024-25ರ ವೇಳೆಗೆ 2,04,605 ರೂ.ಗೆ ಏರಿದೆ. ಕಳೆದ 10 ವರ್ಷಗಳಲ್ಲಿ ಪ್ರಗತಿಯನ್ನು ಸಾಧಿಸಿದ್ದೇವೆ,” ಎಂದು ಅವರು ಹೇಳಿದರು. ಈ ಯೋಜನೆಗಳು ಜನರ ಜೀವನವನ್ನು ಬದಲಾಯಿಸುವ ಆಲೋಚನೆಗಳು ಮತ್ತು ಆವಿಷ್ಕಾರಗಳನ್ನು ಸೃಷ್ಟಿಸಿವೆ ಎಂದು ಅವರು ಒತ್ತಿ ಹೇಳಿದರು.

ಪ್ರಾದೇಶಿಕ ಅಸಮಾನತೆಯನ್ನು ತೊಡೆದುಹಾಕಲು ಶ್ರಮಿಸುತ್ತಿರುವ ಸರ್ಕಾರವು ಪ್ರೊ.ಗೋವಿಂದರಾವ್ ಅಧ್ಯಕ್ಷತೆಯ ಸಮಿತಿಯ ವರದಿಯನ್ನು ಶೀಘ್ರದಲ್ಲಿ ಅನುಷ್ಠಾನಗೊಳಿಸಲಿದೆ ಎಂದು ಸಿದ್ದರಾಮಯ್ಯ ಭರವಸೆ ನೀಡಿದರು. ಜಾತಿ ಗಣತಿ ಮತ್ತು ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯ ಅಗತ್ಯವನ್ನು ಒತ್ತಿಹೇಳಿದ ಅವರು, ಸಾಮಾಜಿಕ ನ್ಯಾಯವನ್ನು ಒದಗಿಸುವ ಗುರಿಯನ್ನು ಹೇಳಿದರು.

“ಕರ್ನಾಟಕವನ್ನು ನಕ್ಸಲ್ ಮುಕ್ತ ರಾಜ್ಯವೆಂದು ಘೋಷಿಸಿದ್ದೇವೆ. ಇದೇ ರೀತಿ ಡ್ರಗ್ಸ್ ಮುಕ್ತ ರಾಜ್ಯವನ್ನಾಗಿಸಲು ಪ್ರತಿ ಪ್ರಜೆಯೂ ಯೋಧನಂತೆ ಕೆಲಸ ಮಾಡಬೇಕು,” ಎಂದು ಸಿಎಂ ಕರೆ ನೀಡಿದರು. ಸರ್ಕಾರವು ಈಗಾಗಲೇ ಈ ದಿಶೆಯಲ್ಲಿ ಸಕಲ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಅವರು ತಿಳಿಸಿದರು.

ಕೇಂದ್ರ ಸರ್ಕಾರವು ತೆರಿಗೆ ಹಂಚಿಕೆಯಲ್ಲಿ ನಿಷ್ಪಕ್ಷಪಾತವಾಗಿಲ್ಲ ಎಂದು ಆಕ್ಷೇಪಿಸಿದ ಸಿದ್ದರಾಮಯ್ಯ, ಐಟಿ, ಇಡಿ, ಸಿಬಿಐ ಮುಂತಾದ ಸಂಸ್ಥೆಗಳು ಪ್ರಜಾಪ್ರಭುತ್ವದ ಮೌಲ್ಯಗಳನ್ನು ರಕ್ಷಿಸುತ್ತಿಲ್ಲ ಎಂದು ವಿಷಾದಿಸಿದರು. ಯೂರಿಯಾ ಹಂಚಿಕೆಯ ಕೊರತೆಯನ್ನು ಸರಿಪಡಿಸಬೇಕೆಂದು ಒತ್ತಾಯಿಸಿದ ಅವರು, ಜವಾಬ್ದಾರಿಯುತ ನಾಗರಿಕರು ಧ್ವನಿಯೆತ್ತಬೇಕೆಂದು ಕರೆ ನೀಡಿದರು.

ಸ್ವಾತಂತ್ರ್ಯ ಹೋರಾಟದಲ್ಲಿ ಕರ್ನಾಟಕ

ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕರ್ನಾಟಕದ ಪಾತ್ರವನ್ನು ಸ್ಮರಿಸಿದ ಸಿಎಂ, ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ದೋಂಡಿಯಾ ವಾಘ, ಮೈಲಾರ ಮಹಾದೇವಪ್ಪ ಮುಂತಾದವರ ಕೊಡುಗೆಯನ್ನು ಕೊಂಡಾಡಿದರು. “ಕರ್ನಾಟಕವು ಬ್ರಿಟಿಷರ ವಿರುದ್ಧ ಮುಂಚೂಣಿಯಲ್ಲಿತ್ತು. ಲಕ್ಷಾಂತರ ಜನರು ಹೋರಾಟದಲ್ಲಿ ಭಾಗವಹಿಸಿದ್ದರು. ಸಾವಿರಾರು ಜನರು ಜೀವ ತ್ಯಾಗ ಮಾಡಿದ್ದಾರೆ,” ಎಂದು ಅವರು ಗೌರವ ಸಲ್ಲಿಸಿದರು. ಜಮ್ಮು-ಕಾಶ್ಮೀರದ ಪಹಲ್ಗಾಂ ದಾಳಿಯಲ್ಲಿ ಮಡಿದವರಿಗೂ ಶ್ರದ್ಧಾಂಜಲಿ ಅರ್ಪಿಸಿದರು.

“ಕರ್ನಾಟಕವನ್ನು ಸರ್ವ ಜನಾಂಗದ ಶಾಂತಿಯ ತೋಟವನ್ನಾಗಿ ಉಳಿಸಿಕೊಳ್ಳುವುದು ನಮ್ಮ ಜವಾಬ್ದಾರಿ. ಸಾಮಾಜಿಕ, ಆರ್ಥಿಕ, ರಾಜಕೀಯ ಸ್ವಾತಂತ್ರ್ಯವನ್ನು ರಕ್ಷಿಸಿ, ಸಮೃದ್ಧ ಕರ್ನಾಟಕದ ಮೂಲಕ ಸಶಕ್ತ ಭಾರತವನ್ನು ಕಟ್ಟೋಣ,” ಎಂದು ಸಿದ್ದರಾಮಯ್ಯ ಕರೆ ನೀಡಿದರು. ಸ್ವಾತಂತ್ರ್ಯ, ಸಂವಿಧಾನ, ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಜೀವಕ್ಕಿಂತ ಮಿಗಿಲಾಗಿ ರಕ್ಷಿಸುವ ಪ್ರತಿಜ್ಞೆಯೊಂದಿಗೆ ಈ ಸ್ವಾತಂತ್ರ್ಯೋತ್ಸವವನ್ನು ಅರ್ಥಪೂರ್ಣಗೊಳಿಸೋಣ ಎಂದು ಹೇಳಿದರು.

 

Exit mobile version