ನನ್ನಂತಹ ಪ್ರಭಾವಿಗೇ ಈ ಸ್ಥಿತಿಯಾದರೆ ಹೊಸಬರ ಕಥೆಯೇನು..! ಚಿತ್ರಮಂದಿರ ಮಾಫಿಯಾ ವಿರುದ್ಧ ಝೈದ್ ಖಾನ್ ಕಿಡಿ

Untitled design 2026 01 04T202254.389

ದಾವಣಗೆರೆ: ಕರ್ನಾಟಕದ ಚಿತ್ರರಂಗದಲ್ಲಿ ಒಳಗೊಳಗೆ ಮಡುಗಟ್ಟಿದ್ದ ‘ಚಿತ್ರಮಂದಿರಗಳ ಮಾಫಿಯಾ’ (Theater Mafia) ಇದೀಗ ಬಹಿರಂಗವಾಗಿ ಚರ್ಚೆಗೆ ಬಂದಿದೆ. ಹಣವಿದ್ದವರು ಮತ್ತು ಪ್ರಭಾವಿಗಳು ಚಿತ್ರಮಂದಿರಗಳನ್ನು ಮೊದಲೇ ಬುಕ್ ಮಾಡಿ ಇರಿಸಿಕೊಳ್ಳುವ ಮೂಲಕ ಸಣ್ಣ ಸಿನಿಮಾಗಳ ಕುತ್ತಿಗೆ ಹಿಸುಕುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ. ಈ ಗಂಭೀರ ವಿಚಾರದ ಬಗ್ಗೆ ಸ್ವತಃ ಸಚಿವ ಜಮೀರ್ ಅಹ್ಮದ್ ಅವರ ಪುತ್ರ, ನಟ ಝೈದ್ ಖಾನ್ (Zaid Khan) ಅಸಮಾಧಾನ ಹೊರಹಾಕಿದ್ದಾರೆ.

ನಾನು ಕೂಡ ಈ ಮಾಫಿಯಾದ ಸಂತ್ರಸ್ತ

ತಮ್ಮ ಮುಂಬರುವ ಸಿನಿಮಾ ‘ಕಲ್ಟ್’ (Cult) ಪ್ರಚಾರಕ್ಕಾಗಿ ದಾವಣಗೆರೆಗೆ ಆಗಮಿಸಿದ್ದ ಝೈದ್ ಖಾನ್, ಸುದ್ದಿಗೋಷ್ಠಿಯಲ್ಲಿ ಚಿತ್ರಮಂದಿರಗಳ ಹಂಚಿಕೆಯಲ್ಲಿ ನಡೆಯುತ್ತಿರುವ ಅನ್ಯಾಯದ ಬಗ್ಗೆ ಮಾತನಾಡಿದ್ದಾರೆ. ನನಗೆ ಸಚಿವರ ಮಗ ಎಂಬ ಪ್ರಭಾವಿ ಹಿನ್ನೆಲೆ ಇದೆ, ಹಣದ ಬಲವೂ ಇದೆ. ಹೀಗಿದ್ದರೂ ನಾನು ಚಿತ್ರಮಂದಿರ ಸಿಗದೆ ಪರದಾಡಿದ್ದೇನೆ. ಅಂದಮೇಲೆ ಯಾವುದೇ ಹಿನ್ನೆಲೆ ಇಲ್ಲದೆ ಸಿನಿಮಾ ಮಾಡುವ ಹೊಸಬರ ಪರಿಸ್ಥಿತಿ ಎಷ್ಟು ದಾರುಣವಾಗಿರಬೇಡ ? ಎಂದು ಪ್ರಶ್ನಿಸಿದರು.

ತಮ್ಮ ಮೊದಲ ಸಿನಿಮಾ ‘ಬನಾರಸ್’ ಬಿಡುಗಡೆಯ ಸಮಯದ ಅನುಭವ ಹಂಚಿಕೊಂಡ ಅವರು, ಆರಂಭದಲ್ಲಿ 100 ಚಿತ್ರಮಂದಿರಗಳು ಸಿಕ್ಕಿದ್ದವು, ಆದರೆ ಮಾಫಿಯಾದ ಕಾರಣದಿಂದ ಅದು 50ಕ್ಕೆ ಕುಸಿಯಿತು. ಸಿನಿಮಾ ಚೆನ್ನಾಗಿ ಓಡುತ್ತಿದ್ದರೂ ಥಿಯೇಟರ್‌ಗಳಿಂದ ಎತ್ತಂಗಡಿ ಮಾಡುವುದು ಸಣ್ಣ ಸಿನಿಮಾಗಳಿಗೆ ನೀಡುವ ದೊಡ್ಡ ಹೊಡೆತ ಎಂದರು.

‘ಕಲ್ಟ್’ ಸಿನಿಮಾ ಮತ್ತು ಥಿಯೇಟರ್ ಹಂಚಿಕೆ

ಝೈದ್ ಖಾನ್ ನಟನೆಯ ‘ಕಲ್ಟ್’ ಸಿನಿಮಾ ಜನವರಿ 23ರಂದು ತೆರೆಗೆ ಬರುತ್ತಿದೆ. ಅದೇ ದಿನ ನಟ ದುನಿಯಾ ವಿಜಯ್ ಅವರ ಸಿನಿಮಾವೂ ಬಿಡುಗಡೆಯಾಗುತ್ತಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಝೈದ್, ರಾಜ್ಯದಲ್ಲಿರುವ ಒಟ್ಟು ಚಿತ್ರಮಂದಿರಗಳಲ್ಲಿ ಶೇ. 60ರಷ್ಟು ದುನಿಯಾ ವಿಜಯ್ ಅವರಿಗೆ ಸಿಗಲಿವೆ, ನಮಗೆ ಶೇ. 40ರಷ್ಟು ಸಿಗಬಹುದು. ಉತ್ತಮ ಸ್ಪರ್ಧೆ ಇರಲಿ, ಆದರೆ ಮಾಫಿಯಾದಿಂದ ಹೊಸಬರಿಗೆ ಅನ್ಯಾಯವಾಗಬಾರದು ಎಂದು ಮನವಿ ಮಾಡಿದರು.

ಅನಿಲ್ ಕುಮಾರ್ ನಿರ್ದೇಶನದ ‘ಕಲ್ಟ್’ ಸಿನಿಮಾ ಯುವಕರನ್ನು ಕೇಂದ್ರೀಕರಿಸಿ ಸಿದ್ಧವಾಗಿದೆ. ಈ ಸಿನಿಮಾ ತೆಲುಗಿನ ‘ಅರ್ಜುನ್ ರೆಡ್ಡಿ’ ಅಥವಾ ‘ಅನಿಮಲ್’ ಮಾದರಿಯನ್ನ ಹೊಂದಿದೆ. ಪ್ರೀತಿಯಲ್ಲಿ ಮೋಸ ಹೋದ ಯುವಕರ ಕಥೆ ಇದರಲ್ಲಿದೆ ಎಂದು ಝೈದ್ ಖಾನ್ ವಿವರಿಸಿದರು. ಸಿನಿಮಾದಲ್ಲಿ ರಚಿತಾ ರಾಮ್ ಮತ್ತು ಮಲೈಕಾ ನಾಯಕಿಯರಾಗಿ ನಟಿಸಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಲೋಕಿ ಸಿನಿಮಾಸ್ ನಿರ್ಮಾಣ ಮಾಡಿರುವ ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಹಂಪಿ ಮತ್ತು ವಿಜಯನಗರದ ಸುಂದರ ತಾಣಗಳಲ್ಲಿ ಸಿನಿಮಾದ ಬಹುಭಾಗ ಚಿತ್ರೀಕರಣಗೊಂಡಿದೆ.

Exit mobile version