ರಾಕಿಂಗ್ ಸ್ಟಾರ್ ಯಶ್‌ಗೆ ಒಂಥರಾ ಬ್ಯಾಡ್ ಟೈಂ. ಧುರಂಧರ್-2 ಜೊತೆ ಕ್ಲ್ಯಾಶ್ ಬೇಡ ಅಂತ ಟಾಕ್ಸಿಕ್ ಪೋಸ್ಟ್‌ಪೋನ್ ಮಾಡಿಕೊಂಡಿದ್ದ ಹೆಮ್ಮೆಯ ಕನ್ನಡಿಗನಿಗೆ ಮತ್ತೊಂದು ಆಘಾತ ಎದುರಾಗ್ತಿದೆ. ಈ ಬಾರಿ ಟ್ರಬಲ್ ಕೊಡ್ತಿರೋದು ಬೇರಾರೂ ಅಲ್ಲ ಸೂಪರ್ ಸ್ಟಾರ್ ರಜನೀಕಾಂತ್.
ಇರಾನ್-ಇಸ್ರೇಲ್ ವಾರ್ ಹಿನ್ನೆಲೆ ಇದೇ ಮಾರ್ಚ್ 19ಕ್ಕೆ ರಿಲೀಸ್ ಆಗಬೇಕಿದ್ದ ಟಾಕ್ಸಿಕ್ ಸಿನಿಮಾ, ಜೂನ್ 4ನೇ ತಾರೀಖಿಗೆ ಮುಂದೂಡಲ್ಪಟ್ಟಿತ್ತು. ಇದು ರಾಕಿಂಗ್ ಸ್ಟಾರ್ ಯಶ್ ಕರಿಯರ್‌ನ ಬಹು ದೊಡ್ಡ ಹಾಗೂ ಬಹು ನಿರೀಕ್ಷಿತ ಸಿನಿಮಾ ಆಗಿದ್ದು, ಸಹಜವಾಗಿಯೇ ನಿರೀಕ್ಷೆ ಗರಿಗೆದರಿದೆ. ಲೇಟ್ ಆದ್ರೂ ಲೇಟೆಸ್ಟ್ ಆಗಿ ಬರ್ತಾರೆ ರಾಕಿಭಾಯ್ ಅನ್ನೋ ಭರವಸೆಯಲ್ಲಿದ್ದ ಚಿತ್ರಪ್ರೇಮಿಗಳಿಗೆ ಈಗ ಮತ್ತೊಂದು ಶಾಕ್ ಎದುರಾಗಿದೆ.
ಯಶ್ ಟಾಕ್ಸಿಕ್‌ಗೆ ಮತ್ತೆ ಆಘಾತ.. ತಲೈವಾ ಜೈಲರ್-2 ಕ್ಲ್ಯಾಶ್
ಜೂನ್ 4ಕ್ಕೆ ಟಾಕ್ಸಿಕ್.. ಜೂನ್ 12ಕ್ಕೆ ಜೈಲರ್-2 ರಿಲೀಸ್ ಫಿಕ್ಸ್
ಈ ಬಾರಿ ಟಾಕ್ಸಿಕ್‌ಗೆ ಆಘಾತ ನೀಡಿರೋದು ಬೇರಾರೂ ಅಲ್ಲ ತಲೈವಾ, ಸೂಪರ್ ಸ್ಟಾರ್ ರಜನೀಕಾಂತ್. ಬ್ಲಾಕ್ ಬಸ್ಟರ್ ಹಿಟ್ ಜೈಲರ್ ಸಿನಿಮಾದ ಸೀಕ್ವೆಲ್ ಜೈಲರ್-2 ಕೂಡ ಟಾಕ್ಸಿಕ್ ವೇಳೆಯೇ ತೆರೆಗೆ ಬರ್ತಿದೆ. ಜೂನ್ 4ಕ್ಕೆ ಟಾಕ್ಸಿಕ್ ರಿಲೀಸ್ ಆದ್ರೆ, ಅದೇ ಜೂನ್ 12ಕ್ಕೆ ಜೈಲರ್-2 ಬರಲಿದೆ. ಅಲ್ಲಿಗೆ ಎರಡೂ ಸಿನಿಮಾಗಳ ಅಂತರ ಜಸ್ಟ್ ಒಂದೇ ಒಂದು ವಾರ.
ದುರಂಧರ್ ದಿ ರಿವೆಂಜ್ ಸಿನಿಮಾದ ಕ್ಲ್ಯಾಶ್‌ನಿಂದ ಪಾರಾಗಿದ್ದ ಟಾಕ್ಸಿಕ್, ಇದೀಗ ಜೈಲರ್-2 ಜೊತೆ ಥಿಯೇಟರ್ ಹಾಗೂ ಬಾಕ್ಸ್ ಆಫೀಸ್ ದಂಗಲ್‌ಗೆ ಮುನ್ನುಡಿ ಬರೆಯಲಿದೆ. ಅಂದಹಾಗೆ ಜೈಲರ್-2 ಬರೀ ರಜನೀಕಾಂತ್ ಸಿನಿಮಾ ಮಾತ್ರವಲ್ಲ. ಪಕ್ಕಾ ಪ್ಯಾನ್ ಇಂಡಿಯಾ ಮೂವಿ. ಯಾಕಂದ್ರೆ ಜೈಲರ್ ಸೀಕ್ವೆಲ್‌ನಲ್ಲಿ ನಮ್ಮ ಶಿವರಾಜ್‌ಕುಮಾರ್, ಮಲಯಾಳಂನ ಮೋಹನ್‌ಲಾಲ್, ಬಾಲಿವುಡ್‌ನ ಕಿಂಗ್ ಖಾನ್ ಶಾರೂಖ್ ಕೂಡ ಬಣ್ಣ ಹಚ್ಚಿದ್ದಾರೆ.
ಥಿಯೇಟರ್ ಜೊತೆ ಬಾಕ್ಸ್ ಆಫೀಸ್ ದಂಗಲ್‌ಗೆ ಮುನ್ನುಡಿ
ಇಂಡಿಯಾ, ಮಲೇಷಿಯಾದಲ್ಲಿ ಟಾಕ್ಸಿಕ್‌ಗೆ ಭಾರೀ ಹೊಡೆತ
ಆಗಸ್ಟ್‌ನಲ್ಲಿ ತೆರೆಗೆ ಬರೋದಾಗಿ ಅನೌನ್ಸ್ ಮಾಡಿದ್ದ ಜೈಲರ್-2 ಟೀಂ, ದಿಢೀರ್ ಅಂತ ಜೂನ್ 12ಕ್ಕೆ ರಿಲೀಸ್ ಡೇಟ್‌ನ ಪ್ರೀ-ಪೋನ್ ಮಾಡಿಕೊಂಡಿರೋದು ಅಚ್ಚರಿ. ಒಂದು ವೇಳೆ ಜೂನ್ 12ಕ್ಕೆ ಜೈಲರ್-2 ಬಂದ್ರೆ ಸೌತ್ ಸೇರಿದಂತೆ ಇಂಡಿಯಾದಲ್ಲಿ ಟಾಕ್ಸಿಕ್‌ಗೆ ಒಂದು ವಾರವಷ್ಟೇ ಒಳ್ಳೆಯ ಥಿಯೇಟರ್ ಸೆಟಪ್ ಸಿಗೋಕೆ ಸಾಧ್ಯ. ಮಲೇಷಿಯಾ ಸೇರಿದಂತೆ ಸಾಕಷ್ಟು ವಿದೇಶಗಳಲ್ಲಿ ರಜನೀಕಾಂತ್‌ಗೆ ದೊಡ್ಡ ಫ್ಯಾನ್ ಫಾಲೋಯಿಂಗ್ ಇರೋದ್ರಿಂದ ಅಲ್ಲೆಲ್ಲಾ ಯಶ್ ಟಾಕ್ಸಿಕ್‌ಗೆ ಒಳ್ಳೆಯ ಸೆಂಟರ್‌ಗಳು ಸಿಗೋದು ಮಾತ್ರ ಕಷ್ಟ.
ಲಿರಿಕಲ್ ವಿಡಿಯೋ ಅಥ್ವಾ ವಿಡಿಯೋ ಸಾಂಗ್ ಬದಲಿಗೆ ತಬಾಹಿ ಸಾಂಗ್ ಜಸ್ಟ್ ಆಡಿಯೋ ಹೊರಬಂದಿದ್ದು ಟಾಕ್ಸಿಕ್‌ಗೆ ದೊಡ್ಡ ಹಿನ್ನಡೆ ಆಗಿದೆ. ಅಷ್ಟೇ ಅಲ್ಲ ವಿಎಫ್‌ಎಕ್ಸ್ ಹಾಗೂ ಸೌಂಡ್ ಕ್ವಾಲಿಟಿ ಕೂಡ ನಿರೀಕ್ಷಿತ ಮಟ್ಟಕ್ಕಿಲ್ಲ ಅನ್ನೋದು ಇಂಟರ್ನಲ್ ಸ್ಕ್ರೀನಿಂಗ್‌ನಿಂದ ಯಶ್ & ಟೀಂಗೆ ದೃಢವಾಗಿದೆ. ಹೀಗಾಗಿ ಸದ್ಯ ಟಾಕ್ಸಿಕ್ ಟ್ರೇಡ್ ಇಳಿಮುಖವಾಗಿದ್ದು, ಜೈಲರ್-2 ಕೂಡ ಅದೇ ಸಂದರ್ಭಕ್ಕೆ ಬರ್ತಿರೋದು ಅಕ್ಷರಶಃ ಶಾಕಿಂಗ್ ನ್ಯೂಸ್.
