ತಮಿಳು ನೆಲದಲ್ಲಿ MGR, ತಲೈವಾ, ದಳಪತಿನ ನೆನೆದ ಯಶ್

ಯಶ್

ಈ ಹಿಂದೆ ವರ್ಲ್ಡ್ ಈಸ್ ಮೈ ಟೆರಿಟರಿ ಅಂತ ಹೇಳಿ.. ನಾನು ಇಂಡಿಯಾಗೆ ಸಿಇಓ ಅಂತಲೂ ಹೇಳಿದ್ರು ರಾಕಿಭಾಯ್ ಯಶ್. ಅಂದು ಹೆಮ್ಮೆಯ ಕನ್ನಡಿಗ ಯಶ್ ಹೇಳಿದ ಆ ಮಾತುಗಳು ಇಂದು ಅಕ್ಷರಶಃ ಸತ್ಯ ಅನಿಸ್ತಿವೆ. ದೇಶದ ಮೂಲೆ ಮೂಲೆಯಲ್ಲಿ ಟೀಂ ಟಾಕ್ಸಿಕ್‌ಗೆ ಅಭೂತಪೂರ್ವ ಸ್ವಾಗತ ಸಿಗ್ತಿದೆ. ಹಾಗಾದ್ರೆ ಟಾಕ್ಸಿಕ್ ತಮಿಳು ಪ್ರೀ-ರಿಲೀಸ್ ಇವೆಂಟ್ ಹೇಗಾಯ್ತು..? ತಮಿಳರ ದಿಲ್ ದೋಚಿದ್ಹೇಗೆ ಯಶ್..? ಹೈಲೈಟ್ಸ್ ಏನು ಅನ್ನೋದನ್ನ ನೀವೇ ಒಮ್ಮೆ ಕಣ್ತುಂಬಿಕೊಳ್ಳಿ.

ಟಾಕ್ಸಿಕ್‌.. ಟಾಕ್ಸಿಕ್.. ಟಾಕ್ಸಿಕ್.. ನಿತ್ಯ, ನಿರಂತರವಾಗಿ ಸಾಗುತ್ತಲೇ ಇದೆ ಹೆಮ್ಮೆಯ ಕನ್ನಡಿಗ, ರಾಕಿಂಗ್ ಸ್ಟಾರ್ ಯಶ್‌ ದಂಡಯಾತ್ರೆ. ಯೆಸ್.. ದಿ ವೆಯ್ಟ್ ಈಸ್ ಓವರ್. ಟಾಕ್ಸಿಕ್ ವರ್ಲ್ಡ್‌ಗೆ ನಿಮ್ಮನ್ನ ಕರೆದುಕೊಂಡು ಹೋಗಲು ರಾಕಿಂಗ್ ರಾಯ ತುದಿಗಾಲಲ್ಲಿ ನಿಂತಿದ್ದಾರೆ. ಚಂದನವನದ ಗಲ್ಲಿಗಳಿಂದ ಶುರುವಾದ ಟಾಕ್ಸಿಕ್ ಪ್ರಚಾರ ಕಾರ್ಯಗಳು ಸದ್ಯ ಹಾಲಿವುಡ್ ವೇದಿಕೆಗಳ ತನಕ ತಲುಪಿದ್ದಾಗಿದೆ. ಅದ್ರಲ್ಲೂ ಪ್ಯಾನ್ ಇಂಡಿಯಾ ಲೆವೆಲ್‌‌ನಲ್ಲಿ ಸಾಲು ಸಾಲು ಇವೆಂಟ್ಸ್ ನಡೆಯುತ್ತಿವೆ. ಅದ್ರಲ್ಲಿ ಇತ್ತೀಚೆಗೆ ನಡೆದ ಚೆನ್ನೈನ ತಮಿಳು ಪ್ರೀ-ರಿಲೀಸ್ ಇವೆಂಟ್ ಕೂಡ ಒಂದು.

ಜವಹರಲಾಲ್ ನೆಹರು ಇಂಡೋರ್ ಸ್ಟೇಡಿಯಂನಲ್ಲಿ ನಡೆದ ಟಾಕ್ಸಿಕ್ ಇವೆಂಟ್ ಸಿಕ್ಕಪಟ್ಟೆ ರಂಗೇರಿತ್ತು. ಎಲ್ಲೆಡೆಯಂತೆ ಅಲ್ಲಿಯೂ ಯಶ್ ಗುಂಗು ದೊಡ್ಡ ಮಟ್ಟಕ್ಕೆ ಇತ್ತು. ಬ್ಯೂಟಿಫುಲ್ ಇವೆನಿಂಗ್ ನಡೆದ ಕಲರ್‌ಫುಲ್ ಕಾರ್ಯಕ್ರಮದಲ್ಲಿ ಯಶ್ ಎಂಟ್ರಿ ಹೊಸ ಹುರುಪು ಹುಮ್ಮಸ್ಸಿನಿಂದ ಕೂಡಿತ್ತು. ಅಲ್ಲಿ ನೆರೆದಿತ್ತ ಸಾವಿರಾರು ಮಂದಿ ತಮಿಳು ಚಿತ್ರಪ್ರೇಮಿಗಳು ನಮ್ಮ ರಾಕಿಂಗ್ ಸ್ಟಾರ್ ಯಶ್ ಸ್ವ್ಯಾಗ್, ಸ್ಟೈಲು, ಮ್ಯಾನರಿಸಂ ಕಂಡು ಪುಳಕಿತರಾದರು.

ವೇದಿಕೆಗೆ ಬಂದ ಯಶ್.. ತಮಿಳು ನೆಲದಲ್ಲಿದ್ರೂ ಸಹ ಕನ್ನಡದಿಂದಲೇ ಮಾತು ಶುರು ಮಾಡಿದ್ದು ಹೆಮ್ಮೆಯ ವಿಷಯ. ನನಗೆ ಏನು ಮಾತಾಡ್ಬೇಕೋ ನಿಜಕ್ಕೂ ಗೊತ್ತಾಗ್ತಿಲ್ಲ. ನನ್ನ ರಕ್ತದಲ್ಲಿ ರಕ್ತದಂತೆ ಬೆರೆತು ಹೋದ ಜನರೇ ಅಂತ ಎಂಜಿಆರ್, ನನಗೆ ಬದುಕು ಕೊಟ್ಟ ಜನರೇ ಅಂತ ತಲೈವಾ ರಜನಿಕಾಂತ್ ಹಾಗೂ ನನ್ನ ಹೃದಯದಲ್ಲಿ ನೆಲೆಸಿರೋ ಜನರೇ ಅಂತ ಸಿಎಂ ದಳಪತಿ ವಿಜಯ್ ಸರ್ ಈಗಾಗ್ಲೇ ನಿಮ್ಮ ಬಗ್ಗೆ ಹೇಳಿಬಿಟ್ಟಿದ್ದಾರೆ. ಆದ್ರೆ ನನ್ನ ದತ್ತು ಪಡೆದ ತಮಿಳು ಜನರೇ ಅಂತ ನಾನು ನಿಮ್ಮನ್ನ ಕರೆಯಲು ಬಯಸುತ್ತೇನೆ ಅಂತ ಲೆಜೆಂಡ್‌‌ಗಳನ್ನ ನೆನೆಯೋ ಮೂಲಕ ತಮ್ಮ ಮನದಾಳವನ್ನ ಬಿಚ್ಚಿಡಲು ಮುಂದಾದ್ರು ಯಶ್.

ರಾಕಿಭಾಯ್‌‌ ಓಪನಿಂಗ್ ಮಾತುಗಳಿಗೆ ಎಂಜಿಆರ್‌‌ನಿಂದ ಹಿಡಿದು, ತಲೈವಾ, ವಿಜಯ್ ಫ್ಯಾನ್ಸ್ ತನಕ ಎಲ್ಲರೂ ಫಿದಾ ಆಗಿಬಿಟ್ಟರು. ಅಷ್ಟೇ ಅಲ್ಲ.. ಪರಭಾಷೆಯಿಂದ ಬಂದ ಮಾಸ್ ಹೀರೋನ ನೀವು ಒಪ್ಪಿಕೊಂಡು, ಅಪ್ಪಿಕೊಂಡಿದ್ದೀರಿ. ಕೆಜಿಎಫ್ ಸಿನಿಮಾದ ಸಮಯದಲ್ಲಿ ನನಗೆ ನೀವು ನೀಡಿದ ಬೆಂಬಲ ಮರೆಯಲಾಗದ್ದು ಅಂತ ಆ ದಿನಗಳನ್ನ ನೆನೆದರು ಯಶ್. ಅಲ್ಲದೆ, ಟ್ಯಾಲೆಂಟ್ ಇರೋ ಯಾವುದೇ ಸ್ಟಾರ್ ಬಂದ್ರೂ ಕೈ ಹಿಡಿದಿದ್ದೀರಿ. ಅದು ತಮಿಳುಗರ ದೊಡ್ಡ ಗುಣ ಅಂತೆಲ್ಲಾ ಕೊಂಡಾಡಿದ್ರು ಯಶ್.

ನೀವು ಬೇರೆ ಭಾಷೆಯ ನಟ ಅಂತ ಭೇದ ಭಾವ ಮಾಡದೆ.. ಪ್ರತಿಭೆ ಇರೋರಿಗೆ ಸಾಥ್ ನೀಡಿದ್ದೀರಿ. ನಿಮ್ಮ ಆ ಪ್ರೀತಿಗೆ ನಾನು ಆಭಾರಿ ಆಗಿದ್ದೇನೆ. ನನಗೇ ಅಲ್ಲ.. ನಾವು ಎಲ್ಲರನ್ನ ಗೌರವಿಸಬೇಕು. ಭವಿಷ್ಯಕ್ಕಾಗಿ ನಾವೆಲ್ಲಾ ಒಂದಾಗ್ಬೇಕು ಅಂತ ಯೂತ್‌ಗೆ ಒನ್ಸ್ ಅಗೈನ್ ಕಿವಿ ಮಾತು ಹೇಳಿದ್ರು.

ನಮ್ಮ ನಿರ್ಮಾಪಕ ಕೆವಿಎನ್ ಸರ್‌‌ದು ಬರ್ತ್ ಡೇ ಇಂದು. ನಿಮಗೆ ಜನುಮ ದಿನದ ಶುಭಾಶಯಗಳು ಸರ್. ತಮಿಳು ಜನ ಬಗ್ಗೆ ನಾನೊಂದು ಮಾತು ಹೇಳ್ಬೇಕು. ಜನನಾಯಗನ್ ಲೀಕ್ ಆದಾಗ ನಿರ್ಮಾಪಕರಾಗಿ ಅವ್ರಿಗೆ ಎಷ್ಟು ಕಷ್ಟವಾಯ್ತು ಅನ್ನೋದು ನನಗೆ ತುಂಬಾ ಚೆನ್ನಾಗಿ ಗೊತ್ತು. ಎಲ್ಲರೂ ಇದು ಮುಗಿದೇ ಹೋಯ್ತು ಅಂದ್ಕೊಂಡ್ರು. ಆದ್ರೆ ತಮಿಳು ಜನ ಕೈ ಹಿಡಿದರು. ನನ್ನ ಕಡೆಯಿಂದ ಸಿನಿಮಾನ ಪ್ರೀತಿಸಿ, ಗೌರವಿಸಿದ, ಶ್ರಮವನ್ನ ಗುರ್ತಿಸಿದ ತಮಿಳು ಜನಕ್ಕೆ ಧನ್ಯವಾದ ಎಂದರು ಯಶ್.

ತಮಿಳು ರೈಟರ್ ಗಣೇಶ್ ಅವ್ರಿಗೆ ವಿಶೇಷ ಧನ್ಯವಾದ ಹೇಳಿದ ಯಶ್, ನಯನತಾರಾ ಪತಿ ಕಮ್ ಡೈರೆಕ್ಟರ್ ವಿಘ್ನೇಶ್ ಶಿವನ್‌‌ ಬಗ್ಗೆಯೂ ಮಾತನಾಡಿದ್ರು ರಾಕಿಂಗ್ ಸ್ಟಾರ್. ತಮಿಳು ಸಾಂಗ್ಸ್ ಬರೆದ ವಿಘ್ನೇಶ್ ಜೊತೆ ನಯನತಾರಾ ಕೂಡ ನನಗೆ ಸಿಕ್ಕಾಪಟ್ಟೆ ಫೇವರಿಟ್ ಎಂದರು.

ವೇದಿಕೆ ಮೇಲೆ ಲೈವ್ ಪರ್ಫಾಮ್ ಮಾಡಿದ ಡ್ಯಾನ್ಸ್ ಟೀಂಗೆ ಬೆನ್ನು ತಟ್ಟಿದ ಯಶ್, ಆ ಡ್ಯಾನ್ಸರ್‌ಗೆ ಫೋಟೋ ಕೂಡ ನೀಡಿದ್ದು ವಿಶೇಷ. ಇನ್ನೂ ಕೊನೆಯಲ್ಲಿ ಪುಟಾಣಿ ಸ್ಟಾರ್‌‌ಗಳು ರಜನಿ, ಕಮಲ್, ಅಜಿತ್ ಹಾಗೂ ದಳಪತಿ ವೇಷಗಳಲ್ಲಿ ಬಂದದ್ದು ಕಂಡು ಖುಷಿ ಪಟ್ಟರು. ನೀವು ಒಳ್ಳೆಯವರಾ ಅಥ್ವಾ ಕೆಟ್ಟವರಾ ಅಂತ ಕೇಳಿದ ಪ್ರಶ್ನೆಗೆ ಒಳ್ಳೆಯವರಿಗೆ ಒಳ್ಳೆಯವನು.. ಕೆಟ್ಟವರಿಗೆ ಕೆಟ್ಟವನು ಅಂತ ಯಶ್ ರಾಕಿಂಗ್ ಆನ್ಸರ್ ನೀಡಿದ್ರು.

ಕಾರ್ಯಕ್ರಮಕ್ಕೆ ಸಪೋರ್ಟ್ ಮಾಡಿದ್ದಕ್ಕೆ ತಮಿಳುನಾಡು ಪೊಲೀಸ್ ಹಾಗೂ ಸರ್ಕಾರದ ಧನ್ಯವಾದ ಅರ್ಪಿಸಿದ ಯಶ್, ಸಿಎಂ ದಳಪತಿ ವಿಜಯ್ ಕುರಿತು ಹೆಮ್ಮೆಯ ಮಾತುಗಳನ್ನಾಡಿದ್ರು. ಅವರು ಟ್ರೆಂಡ್ ಸೆಟ್ ಮಾಡಿದ್ದಾರೆ. ಅವ್ರಿಂದ ಕಲಿಯೋದು ಸಾಕಷ್ಟಿದೆ. ಶಿಸ್ತು, ಸಂಯಮದ ವ್ಯಕ್ತಿ ಅವರು. ಜನರಿಗಾಗಿ ದುಡಿಯುತ್ತಿದ್ದಾರೆ. ಜನಕ್ಕೆ ವಾಪಸ್ ಕೊಡೋದು ನಮ್ಮ ಜವಾಬ್ದಾರಿ. ಅದನ್ನ ಸಿಎಂ ವಿಜಯ್ ಕೊಡ್ತಿದ್ದಾರೆ.. ಆ ನಿಟ್ಟಿನಲ್ಲಿ ತಮಿಳುನಾಡು ಜನ ತುಂಬಾ ಲಕ್ಕಿ ಎಂದರು ಯಶ್.

ತಮಿಳು ಇವೆಂಟ್‌‌ನ ವೇದಿಕೆಯಲ್ಲಿ ನಿರೂಪಕರು ಕೇಳಿದ ಯಶ್ ರಾಜಕೀಯ ಎಂಟ್ರಿ ಕುರಿತ ಪ್ರಶ್ನೆಗೆ ರಾಕಿಂಗ್ ಆನ್ಸರ್ ನೀಡಿದ್ದಾರೆ ನಮ್ಮ ರಾಕಿಂಗ್ ಸ್ಟಾರ್. ಹೌದು.. ಕೆವಿಎನ್ ಜೊತೆ ಜನನಾಯಗನ್ ಸಿನಿಮಾ ಮಾಡಿದ ವಿಜಯ್ ಅವರು ಸಿನಿಮಾ ನಂತ್ರ ಸಿಎಂ ಆದ್ರು. ಸದ್ಯ ಯಶ್ ಅವರು ಟಾಕ್ಸಿಕ್ ಮಾಡ್ತಿದ್ದಾರೆ. ಇದು ರಿಲೀಸ್ ಬಳಿಕ ರಾಜಕಾರಣಕ್ಕೆ ಬರ್ತಾರಾ ಅಂತ ಪ್ರಶ್ನಿಸಿದ್ರು. ಅದಕ್ಕೆ ಸದ್ಯಕ್ಕೆ ಆ ತರ ಏನೂ ಇಲ್ಲ. ನಾನು ಚಿತ್ರರಂಗದಲ್ಲೇ ಸಾಕಷ್ಟು ಮಾಡೋದು ಇದೆ. ಜನ ಮುಂದಿನ ದಿನಗಳಲ್ಲಿ ನನ್ನ ಅವಶ್ಯಕತೆ ಇದೆ ಅಂತ ಬಯಸಿದ್ರೆ ಬರಲಿದ್ದೇನೆ ಅಂದಿದ್ದಾರೆ ಯಶ್.

ಒಟ್ಟಾರೆ ರಾಯ, ಟಿಕೆಟ್, ರೂಮಿ.. ಹೀಗೆ ಅವತಾರ ಪುರುಷನಾಗಿ ನಾನಾ ಅವತಾರಗಳಲ್ಲಿ  ಮಸ್ತ್ ಮನರಂಜನೆ ನೀಡಲು ಸಜ್ಜಾಗಿರೋ ಯಶ್ ದ್ರಾವಿಡರ ನೆಲದಲ್ಲಿ ತಮಿಳರ ಮನಸ್ಸು ಗೆದ್ದಿದ್ದು ಸುಳ್ಳಲ್ಲ. ತಮಿಳುನಾಡಿನಲ್ಲೂ ಸಹ ಆನ್‌ಲೈನ್ ಟಿಕೆಟ್ ಬುಕ್ಕಿಂಗ್ಸ್ ಜೋರಾಗಿ ನಡೆಯುತ್ತಿದ್ದು, ಬಾಕ್ಸ್ ಆಫೀಸ್ ರೂಲ್ ಮಾಡುವ ಇಂಡಿಯನ್ ಸಿನಿಮಾದ ಸಿಇಓ ಆಗಿ ರಾರಾಜಿಸಲಿದ್ದಾರೆ ರಾಕಿಂಗ್ ಸ್ಟಾರ್.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

 

Exit mobile version