ಬಹುನಿರೀಕ್ಷಿತ ನಟ ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈಗಾಗಲೇ ಚಿತ್ರದ ಪ್ರಚಾರ ಕಾರ್ಯಗಳು ಭರ್ಜರಿಯಾಗಿ ನಡೆಯುತ್ತಿದ್ದು, ಅಭಿಮಾನಿಗಳಲ್ಲಿ ಸಿನಿಮಾ ಕುರಿತ ನಿರೀಕ್ಷೆ ಹೆಚ್ಚಾಗಿದೆ. ಬಹುಭಾಷೆಗಳಲ್ಲಿ ವಿಶ್ವಾದ್ಯಂತ ತೆರೆಗೆ ಬರಲಿರುವ ಈ ಚಿತ್ರಕ್ಕೆ ಇದೀಗ ಸೆನ್ಸಾರ್ ಪ್ರಕ್ರಿಯೆಯೂ ಪೂರ್ಣಗೊಂಡಿದೆ. ಇದರೊಂದಿಗೆ ಸಿನಿಮಾದ ಪ್ರಮಾಣಪತ್ರ ಹಾಗೂ ಅವಧಿ ಸೇರಿದಂತೆ ಹಲವು ಕುತೂಹಲಕಾರಿ ಮಾಹಿತಿಗಳು ಬಹಿರಂಗವಾಗಿವೆ.
ಯಶ್, ರುಕ್ಮಿಣಿ ವಸಂತ್ ಸೇರಿದಂತೆ ಹಲವು ಪ್ರಮುಖ ಕಲಾವಿದರು ನಟಿಸಿರುವ ‘ಟಾಕ್ಸಿಕ್’ ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ ‘ಎ’ ಪ್ರಮಾಣಪತ್ರ ನೀಡಲಾಗಿದೆ. ಅಂದರೆ, 18 ವರ್ಷ ಮೇಲ್ಪಟ್ಟ ವಯಸ್ಕರು ಮಾತ್ರ ಈ ಸಿನಿಮಾವನ್ನು ಚಿತ್ರಮಂದಿರದಲ್ಲಿ ವೀಕ್ಷಿಸಬಹುದಾಗಿದೆ. ಸೆನ್ಸಾರ್ ಪ್ರಮಾಣಪತ್ರದ ಪ್ರತಿ ಲಭ್ಯವಾಗಿದ್ದು, ಅದರಲ್ಲಿರುವ ಮಾಹಿತಿಯಂತೆ ಸಿನಿಮಾದ ಅವಧಿಯೂ ಸಾಕಷ್ಟು ದೀರ್ಘವಾಗಿದೆ.
3 ಗಂಟೆ 14 ನಿಮಿಷಗಳ ‘ಟಾಕ್ಸಿಕ್’
‘ಟಾಕ್ಸಿಕ್’ ಸಿನಿಮಾದ ಟ್ರೇಲರ್ ಗಮನಿಸಿದರೆ ಚಿತ್ರದಲ್ಲಿ ದೊಡ್ಡ ಕಥಾಹಂದರವಿರುವುದು ಸ್ಪಷ್ಟವಾಗುತ್ತದೆ. ಈ ಕಥೆಯನ್ನು ತೆರೆಮೇಲೆ ಹೇಳಲು ನಿರ್ದೇಶಕಿ ಗೀತು ಮೋಹನ್‌ದಾಸ್ ಅವರು ಬರೋಬ್ಬರಿ 194.12 ನಿಮಿಷಗಳ ಅವಧಿಯನ್ನು ಬಳಸಿಕೊಂಡಿದ್ದಾರೆ. ಅಂದರೆ, ಸಿನಿಮಾದ ಒಟ್ಟು ಅವಧಿ ಸುಮಾರು 3 ಗಂಟೆ 14 ನಿಮಿಷಗಳಾಗಿದೆ.
ಸಾಮಾನ್ಯವಾಗಿ ಇತ್ತೀಚಿನ ಸಿನಿಮಾಗಳ ಅವಧಿ ಎರಡೂವರೆ ಗಂಟೆಯ ಆಸುಪಾಸಿನಲ್ಲಿರುವಾಗ, ‘ಟಾಕ್ಸಿಕ್’ ಮೂರು ಗಂಟೆಗೂ ಹೆಚ್ಚು ಅವಧಿಯನ್ನು ಹೊಂದಿರುವುದು ವಿಶೇಷವಾಗಿದೆ. ಇಷ್ಟು ದೀರ್ಘ ಸಮಯ ಪ್ರೇಕ್ಷಕರನ್ನು ಸಿನಿಮಾ ಯಾವ ರೀತಿಯಲ್ಲಿ ಹಿಡಿದಿಟ್ಟುಕೊಳ್ಳಲಿದೆ ಎಂಬ ಕುತೂಹಲ ಅಭಿಮಾನಿಗಳಲ್ಲಿದೆ.
ಮಕ್ಕಳಿಗೆ ‘ಟಾಕ್ಸಿಕ್’ ನೋಡಲು ಸಾಧ್ಯವಿಲ್ಲ
ಯಶ್ ಸಿನಿಮಾಗಳಿಗೆ ಕುಟುಂಬ ಸಮೇತ ಬರುವ ಪ್ರೇಕ್ಷಕರ ಸಂಖ್ಯೆ ದೊಡ್ಡದಿದೆ. ಆದರೆ ‘ಟಾಕ್ಸಿಕ್’ ಚಿತ್ರಕ್ಕೆ ‘ಎ’ ಪ್ರಮಾಣಪತ್ರ ಸಿಕ್ಕಿರುವುದರಿಂದ ಮಕ್ಕಳಿಗೆ ಈ ಸಿನಿಮಾವನ್ನು ಚಿತ್ರಮಂದಿರದಲ್ಲಿ ವೀಕ್ಷಿಸಲು ಅವಕಾಶ ಇರುವುದಿಲ್ಲ. ಚಿತ್ರದಲ್ಲಿ ಹಿಂಸಾತ್ಮಕ ದೃಶ್ಯಗಳು, ಅಶ್ಲೀಲ ಭಾಷೆಯ ಬಳಕೆ ಹಾಗೂ ವಯಸ್ಕರಿಗೆ ಸಂಬಂಧಿಸಿದ ದೃಶ್ಯಗಳಿರುವ ಹಿನ್ನೆಲೆಯಲ್ಲಿ ಸೆನ್ಸಾರ್ ಮಂಡಳಿ ‘ಎ’ ಪ್ರಮಾಣಪತ್ರ ನೀಡಿದೆ ಎನ್ನಲಾಗಿದೆ.
ಹೀಗಾಗಿ ಯಶ್ ಅಭಿಮಾನಿಗಳಲ್ಲಿ ಮಕ್ಕಳನ್ನು ಒಳಗೊಂಡ ಕುಟುಂಬಗಳು ಸಿನಿಮಾ ವೀಕ್ಷಣೆಗೆ ತೆರಳುವ ಮುನ್ನ ಈ ನಿಯಮವನ್ನು ಗಮನದಲ್ಲಿಟ್ಟುಕೊಳ್ಳಬೇಕಾಗಿದೆ. ವಯಸ್ಕ ಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡೇ ಚಿತ್ರವನ್ನು ರೂಪಿಸಲಾಗಿದೆ ಎಂಬುದು ಇದರಿಂದ ಮತ್ತೊಮ್ಮೆ ಸ್ಪಷ್ಟವಾಗಿದೆ.
‘ಟಾಕ್ಸಿಕ್’ ಚಿತ್ರದ ಟೈಟಲ್ ಘೋಷಣೆಯಾದಾಗಲೇ ಸಿನಿಮಾದ ಸ್ವರೂಪದ ಬಗ್ಗೆ ಕುತೂಹಲ ಮೂಡಿತ್ತು. ಚಿತ್ರದ ಶೀರ್ಷಿಕೆಯೊಂದಿಗೆ ಪ್ರಕಟಿಸಲಾದ ‘ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ಎಂಬ ಟ್ಯಾಗ್‌ಲೈನ್ ಕೂಡ ಗಮನ ಸೆಳೆದಿತ್ತು. ಇದರ ಮೂಲಕವೇ ಈ ಸಿನಿಮಾ ಮಕ್ಕಳಿಗಿಂತ ವಯಸ್ಕ ಪ್ರೇಕ್ಷಕರನ್ನು ಗುರಿಯಾಗಿಸಿಕೊಂಡಿದೆ ಎಂಬ ಸುಳಿವು ಸಿಕ್ಕಿತ್ತು.
ಬಳಿಕ ಟೀಸರ್ ಮತ್ತು ಟ್ರೇಲರ್ ಬಿಡುಗಡೆಯಾದಾಗ ಸಿನಿಮಾದಲ್ಲಿನ ಹಿಂಸಾತ್ಮಕ ಹಾಗೂ ಗಂಭೀರ ಅಂಶಗಳ ಬಗ್ಗೆ ಮತ್ತಷ್ಟು ಚರ್ಚೆ ನಡೆದಿತ್ತು. ಇದೀಗ ಸೆನ್ಸಾರ್ ಮಂಡಳಿಯಿಂದ ‘ಎ’ ಪ್ರಮಾಣಪತ್ರ ಸಿಕ್ಕಿರುವುದರಿಂದ ಸಿನಿಮಾದ ಸ್ವರೂಪದ ಕುರಿತು ಇದ್ದ ನಿರೀಕ್ಷೆ ಮತ್ತಷ್ಟು ಖಚಿತವಾಗಿದೆ.
ಆಗಸ್ಟ್ 21ರಿಂದ ಟಿಕೆಟ್ ಬುಕಿಂಗ್
ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಆಗಸ್ಟ್ 21ರಿಂದ ‘ಟಾಕ್ಸಿಕ್’ ಸಿನಿಮಾದ ಟಿಕೆಟ್ ಬುಕಿಂಗ್ ಆರಂಭವಾಗಲಿದೆ. ಈಗಾಗಲೇ ಸಿನಿಮಾದ ಟಿಕೆಟ್‌ಗಳಿಗೆ ಪ್ರೇಕ್ಷಕರಿಂದ ಭರ್ಜರಿ ಆಸಕ್ತಿ ವ್ಯಕ್ತವಾಗಿದ್ದು, ಮೊದಲ ದಿನವೇ ದೊಡ್ಡ ಮಟ್ಟದ ಕಲೆಕ್ಷನ್ ಆಗುವ ನಿರೀಕ್ಷೆ ಮೂಡಿದೆ.
‘ಟಾಕ್ಸಿಕ್’ ಚಿತ್ರದಲ್ಲಿ ಯಶ್ ಜೊತೆ ನಯನತಾರಾ, ಕಿಯಾರಾ ಅಡ್ವಾಣಿ, ರುಕ್ಮಿಣಿ ವಸಂತ್, ತಾರಾ ಸುತಾರಿಯಾ, ಹುಮಾ ಖುರೇಷಿ ಸೇರಿದಂತೆ ಹಲವು ಪ್ರಮುಖ ಕಲಾವಿದರು ನಟಿಸಿದ್ದಾರೆ. ಗೀತು ಮೋಹನ್‌ದಾಸ್ ನಿರ್ದೇಶನದ ಈ ಸಿನಿಮಾ ವಿಶ್ವಾದ್ಯಂತ ಆಗಸ್ಟ್ 26ರಂದು ತೆರೆಗೆ ಬರಲು ಸಜ್ಜಾಗಿದೆ. ಹೀಗಾಗಿ ದೀರ್ಘ ಅವಧಿ ಹಾಗೂ ‘ಎ’ ಪ್ರಮಾಣಪತ್ರದೊಂದಿಗೆ ಬರುತ್ತಿರುವ ‘ಟಾಕ್ಸಿಕ್’ ಪ್ರೇಕ್ಷಕರಿಗೆ ಯಾವ ರೀತಿಯ ಅನುಭವ ನೀಡಲಿದೆ ಎಂಬ ಕುತೂಹಲ ಈಗ ಮತ್ತಷ್ಟು ಹೆಚ್ಚಾಗಿದೆ.
