‘ಸಿಗ್ಮಾ’ ಸಿನಿಮಾ ರಿಲೀಸ್ ಮುಂದೂಡಿಕೆ: ಹೊಸ ರಿಲೀಸ್ ಡೇಟ್ ಘೋಷಣೆ

Untitled design 2026 08 20T175145.968

ತಮಿಳು ಚಿತ್ರರಂಗದ ಖ್ಯಾತ ನಟ ಹಾಗೂ ತಮಿಳುನಾಡು ಮುಖ್ಯಮಂತ್ರಿ ವಿಜಯ್ ಪುತ್ರ ಜೇಸನ್ ಸಂಜಯ್ ನಿರ್ದೇಶನದ ಚೊಚ್ಚಲ ಸಿನಿಮಾ ‘ಸಿಗ್ಮಾ’ ಬಿಡುಗಡೆ ದಿನಾಂಕ ಮತ್ತೊಮ್ಮೆ ಬದಲಾಗಿದೆ. ಮೊದಲಿಗೆ ಜುಲೈ 31ರಂದು ಚಿತ್ರಮಂದಿರಗಳಿಗೆ ಬರಬೇಕಿದ್ದ ಸಿನಿಮಾ ಕಾರಣಾಂತರಗಳಿಂದ ಮುಂದೂಡಿಕೆಯಾಗಿತ್ತು. ಇದೀಗ ಚಿತ್ರತಂಡ ಹೊಸ ಬಿಡುಗಡೆ ದಿನಾಂಕವನ್ನು ಅಧಿಕೃತವಾಗಿ ಘೋಷಿಸಿದ್ದು, ವಿಜಯ್ ಅಭಿಮಾನಿಗಳು ಹಾಗೂ ಸಿನಿಪ್ರೇಕ್ಷಕರ ಕುತೂಹಲ ಮತ್ತಷ್ಟು ಹೆಚ್ಚಾಗಿದೆ.

ಚಿತ್ರದ ನಿರ್ಮಾಣ ಸಂಸ್ಥೆಯಾದ ಲೈಕಾ ಪ್ರೊಡಕ್ಷನ್ಸ್ ಆಗಸ್ಟ್ 20ರಂದು ಹೊಸ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಸಿನಿಮಾದ ರಿಲೀಸ್ ದಿನಾಂಕವನ್ನು ಘೋಷಿಸಿದೆ. ಅದರಂತೆ, ‘ಸಿಗ್ಮಾ’ ಸಿನಿಮಾ ಅಕ್ಟೋಬರ್ 2ರಂದು ಗಾಂಧಿ ಜಯಂತಿ ಪ್ರಯುಕ್ತ ವಿಶ್ವದಾದ್ಯಂತ ತೆರೆಗೆ ಬರಲಿದೆ.

ಜೇಸನ್ ಸಂಜಯ್ ಕೂಡ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಸಿನಿಮಾದ ಹೊಸ ಬಿಡುಗಡೆಯ ದಿನಾಂಕವನ್ನು ಹಂಚಿಕೊಂಡಿದ್ದಾರೆ. ಅಕ್ಟೋಬರ್ 2ರಂದು ರೋಚಕ ಕಳ್ಳತನದ ಕಥಾಹಂದರ ಹೊಂದಿರುವ ಸಿನಿಮಾ ಪ್ರೇಕ್ಷಕರನ್ನು ರಂಜಿಸಲಿದೆ ಎಂಬ ಭರವಸೆಯನ್ನು  ವ್ಯಕ್ತಪಡಿಸಿದ್ದಾರೆ.

ಆ್ಯಕ್ಷನ್-ಥ್ರಿಲ್ಲರ್ ಕಥೆ

‘ಸಿಗ್ಮಾ’ ಸಿನಿಮಾದಲ್ಲಿ ನಟ ಸಂದೀಪ್ ಕಿಶನ್ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರವು ಆ್ಯಕ್ಷನ್ ಹಾಗೂ ಥ್ರಿಲ್ಲರ್ ಅಂಶಗಳಿಂದ ಕೂಡಿದ್ದು, ಕಳ್ಳತನದ ಸುತ್ತ ನಡೆಯುವ ರೋಚಕ ಕಥೆಯನ್ನು ಒಳಗೊಂಡಿದೆ ಎನ್ನಲಾಗಿದೆ. ಹೀಗಾಗಿ ಸಿನಿಮಾ ಹೇಗಿರಲಿದೆ ಎಂಬ ಕುತೂಹಲ ಈಗಾಗಲೇ ಸಿನಿಪ್ರೇಕ್ಷಕರಲ್ಲಿ ಮೂಡಿದೆ.

ಈ ವರ್ಷದ ಆರಂಭದಲ್ಲಿ ಸಿನಿಮಾದ ಮೊದಲ ಹಾಡು ‘ಸಿಗ್ಮಾ ಸ್ಟೈಲ್’ ಬಿಡುಗಡೆಯಾಗಿತ್ತು. ಖ್ಯಾತ ನಟ ದುಲ್ಕರ್ ಸಲ್ಮಾನ್ ಹಾಡನ್ನು ಬಿಡುಗಡೆ ಮಾಡಿ ಜೇಸನ್ ಸಂಜಯ್ ಸೇರಿದಂತೆ ಇಡೀ ಚಿತ್ರತಂಡಕ್ಕೆ ಶುಭ ಕೋರಿದ್ದರು. ಸಿನಿಮಾಕ್ಕೆ ಖ್ಯಾತ ಸಂಗೀತ ನಿರ್ದೇಶಕ ಎಸ್. ತಮನ್ ಸಂಗೀತ ಸಂಯೋಜಿಸಿದ್ದಾರೆ.

ನಿರ್ದೇಶನದ ಮೂಲಕ ಚಿತ್ರರಂಗಕ್ಕೆ ಎಂಟ್ರಿ

ಜೇಸನ್ ಸಂಜಯ್ ತಮ್ಮ ತಂದೆ ವಿಜಯ್ ಅವರಂತೆ ನಟನೆಯತ್ತ ಹೆಜ್ಜೆ ಹಾಕದೆ, ನಿರ್ದೇಶನ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಸಿನಿಮಾದ ನಿರ್ಮಾಣ ಮತ್ತು ಚಿತ್ರಕಥೆ ಬರವಣಿಗೆ ಕುರಿತು ಅಮೆರಿಕದಲ್ಲಿ ತರಬೇತಿ ಪಡೆದಿರುವ ಅವರು ಇದೀಗ ನಿರ್ದೇಶಕರಾಗಿ ತಮ್ಮ ಮೊದಲ ಸಿನಿಮಾ ಮೂಲಕ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.

ವಿಜಯ್ ಅವರ ಪುತ್ರ ನಿರ್ದೇಶಕರಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿರುವುದರಿಂದ ‘ಸಿಗ್ಮಾ’ ಸಿನಿಮಾ ತಮಿಳು ಚಿತ್ರರಂಗದಲ್ಲಿ ಸಾಕಷ್ಟು ಗಮನ ಸೆಳೆದಿದೆ. ಜೇಸನ್ ಸಂಜಯ್ ಅವರ ನಿರ್ದೇಶನ ಶೈಲಿ ಹೇಗಿರಲಿದೆ ಎಂಬುದನ್ನು ತಿಳಿದುಕೊಳ್ಳಲು ವಿಜಯ್ ಅಭಿಮಾನಿಗಳು ಮಾತ್ರವಲ್ಲದೆ, ಸಿನಿಪ್ರೇಕ್ಷಕರೂ ಕಾತರದಿಂದ ಕಾಯುತ್ತಿದ್ದಾರೆ.

ವಿಜಯ್ ಜೊತೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳದ ಜೇಸನ್

ಜೇಸನ್ ಸಂಜಯ್ ಅವರು ನಟ ವಿಜಯ್ ಮತ್ತು ಸಂಗೀತಾ ಸ್ವರ್ಣಲಿಂಗಂ ಅವರ ಪುತ್ರ. ಇತ್ತೀಚಿನ ವರ್ಷಗಳಲ್ಲಿ ಅವರು ವಿಜಯ್ ಜೊತೆ ಸಾರ್ವಜನಿಕವಾಗಿ ಹೆಚ್ಚಾಗಿ ಕಾಣಿಸಿಕೊಂಡಿಲ್ಲ ಎಂಬುದು ಕೂಡ ಚರ್ಚೆಗೆ ಕಾರಣವಾಗಿದೆ.

ವಿಜಯ್ ಅವರು ತಮಿಳುನಾಡು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಸಂದರ್ಭದಲ್ಲೂ ಜೇಸನ್ ಸಂಜಯ್ ಕಾರ್ಯಕ್ರಮಕ್ಕೆ ಹಾಜರಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ತಂದೆ-ಮಗನ ಸಂಬಂಧದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹಲವು ರೀತಿಯ ಚರ್ಚೆಗಳು ನಡೆದಿದ್ದವು.

ಆದರೆ ಇದೀಗ ಜೇಸನ್ ತಮ್ಮ ನಿರ್ದೇಶನದ ಮೊದಲ ಸಿನಿಮಾದ ಮೂಲಕ ಚಿತ್ರರಂಗದಲ್ಲಿ ಹೊಸ ಅಧ್ಯಾಯ ಆರಂಭಿಸುತ್ತಿದ್ದಾರೆ. ‘ಸಿಗ್ಮಾ’ ಅಕ್ಟೋಬರ್ 2ರಂದು ಬಿಡುಗಡೆಯಾಗಲಿರುವ ಹಿನ್ನೆಲೆಯಲ್ಲಿ ಸಿನಿಮಾ ಕುರಿತ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ.

Exit mobile version