ರಾಮಾಯಣ ಭಾರತೀಯ ಚಿತ್ರರಂಗದ ದುಬಾರಿ ಸಿನಿಮಾ. ಇದರ ಬಜೆಟ್ ಬರೋಬ್ಬರಿ 4 ಸಾವಿರ ಕೋಟಿ ಅಂದ್ರೆ ನೀವು ನಂಬಲೇಬೇಕು. ಬಜೆಟ್ ಕೇಳಿ ಸುಸ್ತಾದ ಕೆಲ ನೆಟ್ಟಿಗರು ಕೊಂಕು ಮಾತಾಡ್ತಿದ್ರು. ಅಂಥವ್ರಿಗೆ ಟ್ರೈಲರ್ ಮೂಲಕ ಉತ್ತರ ನೀಡಿದೆ ಟೀಂ. ಅಷ್ಟೇ ಅಲ್ಲ.. ಆಡಿಯೋ ರೈಟ್ಸ್ ಮಾಡಿರೋ ದಾಖಲೆ ಜೊತೆ ಪ್ರಮೋಷನಲ್ ಬಜೆಟ್ ಕೇಳಿದ್ರೆ ಶಾಕ್ ಆಗೋದು ಮಾತ್ರ ಗ್ಯಾರಂಟಿ.
4 ಸಾವಿರ ಕೋಟಿ ಬಜೆಟ್ ಏತಕ್ಕಾಗಿ..? ಟ್ರೈಲರ್‌ನಲ್ಲಿ ಉತ್ತರ
ರಾಮನ ಯುಗದ ಆರಂಭ.. ಯಶ್ ಐತಿಹಾಸಿಕ ದಾಖಲೆ..!!
ರಾಮಾಯಣ ಸಿನಿಮಾಗಾಗಿ ಚಿತ್ರತಂಡ ಖರ್ಚು ಮಾಡಿರೋ ಬಜೆಟ್ ಕೇಳಿದ್ರೆ ಶಾಕ್ ಆಗ್ತೀರಾ. ಹೌದು.. ಎರಡು ಭಾಗಗಳ ರಾಮಾಯಣ ಚಿತ್ರಕ್ಕಾಗಿ ಸುಮಾರು 3500 ರಿಂದ 4 ಸಾವಿರ ಕೋಟಿ ರೂಪಾಯಿ ಹಣವನ್ನ ವ್ಯಯಿಸುವ ಮೂಲಕ ಬೆಳ್ಳಿತೆರೆಗೆ ತರ್ತಿದ್ದಾರೆ ನಿರ್ಮಾಪಕರು. ನಮ್ಮ ರಾಕಿಂಗ್ ಸ್ಟಾರ್ ಯಶ್ ಕೂಡ ನಿರ್ಮಾಪಕ ನಮಿತ್ ಮಲ್ಹೋತ್ರಾ ಜೊತೆಗೂಡಿ ಹೂಡಿಕೆ ಮಾಡಿದ್ದು, ಸಹ ನಿರ್ಮಾಪಕರಾಗಿ ತಮ್ಮ ಸಿನಿಮೋತ್ಸಾಹವನ್ನ ತೋರಿದ್ದಾರೆ.
ಇನ್ನೂ ಸಾಕಷ್ಟು ಮಂದಿ ಈ ಚಿತ್ರದ ಬಜೆಟ್ ಬಗ್ಗೆ ಚಕಾರ ಎತ್ತಿದ್ದರು. ಕಾರಣ ನಮ್ಮ ಇಂಡಿಯನ್ ಸಿನಿಮಾವೊಂದಕ್ಕಾಗಿ ಇಷ್ಟು ದೊಡ್ಡ ಮೊತ್ತದ ಹಣ ವ್ಯಯಿಸೋ ಅವಶ್ಯಕತೆ ಆದ್ರೂ ಏನಿದೆ ಅನ್ನೋ ಮಾತುಗಳು ಕೇಳಿ ಬಂದಿತ್ತು. ಆದ್ರೆ 4 ಕೋಟಿ ರೂಪಾಯಿ ಹಣ ಏತಕ್ಕಾಗಿ ಖರ್ಚು ಮಾಡಿದ್ದಾರೆ ಅನ್ನೋದಕ್ಕೆ ಉತ್ತರವಾಗಿ ಹೊರಹೊಮ್ಮಿದೆ 4 ನಿಮಿಷದ ಟ್ರೈಲರ್ ಗುಚ್ಚ. ಪ್ರತಿ ಫ್ರೇಮ್ ಕೂಡ ಸಖತ್ ರಿಚ್ & ಲ್ಯಾವಿಶ್ ಆಗಿದ್ದು, ಹುಬ್ಬೇರಿಸಿ, ದಿಟ್ಟಸಿ ನೋಡುವಂತಿದೆ.
ಶ್ರೀರಾಮನ ಅಯೋಧ್ಯೆ, ರಾವಣನ ಲಂಕೆ, ಅದರ ನಡುವೆ ದಟ್ಟವಾದ ಕಾಡು, ಜಟಾಯು ಜೊತೆಗಿನ ಯುದ್ಧ, ಕ್ಲೈಮ್ಯಾಕ್ಸ್ ರಾಮ-ರಾವಣ ಕದನವನ್ನ ತೆರೆ ಮೇಲೆ ಕಟ್ಟೋದು ಅಷ್ಟು ಸುಲಭವಾದದ್ದಲ್ಲ. ಯಾಕಂದ್ರೆ ವಿಎಫ್‌ಎಕ್ಸ್ ವಿಶ್ಯುವಲ್ ಟ್ರೀಟ್ ನೀಡೋಕೆ ಸಾಕಷ್ಟು ಹಣ ಖರ್ಚು ಮಾಡಬೇಕಾಗುತ್ತೆ. ಒಂದು ಸೆಕೆಂಡ್ ದೃಶ್ಯಕ್ಕೆ 24 ಫ್ರೇಮ್‌ಗಳು ಇರಲಿದ್ದು, ಸ್ಪೆಷಲ್ ಎಫೆಕ್ಟ್ ತಂತ್ರಜ್ಞ ಆ 24 ಫ್ರೇಮ್‌ಗಳಿಗೂ ಸಹ ಕೆಲಸ ಮಾಡಬೇಕಾಗುತ್ತೆ. ಹೀಗೆ ಇಡೀ ಸಿನಿಮಾದಲ್ಲಿ ಸಾಕಷ್ಟು ಸಿಜಿ, ಸ್ಪೆಷಲ್ ಎಫೆಕ್ಟ್, ವಿಎಫ್‌ಎಕ್ಸ್ ದೃಶ್ಯಗಳಿರಲಿವೆ. ಅವುಗಳಿಗೆ ದೃಶ್ಯರೂಪ ನೀಡೋದು ತಮಾಷೆಯ ಮಾತಲ್ಲ. ಹಾಗಾಗಿ ಟ್ರೈಲರ್ ಸದ್ಯ ಈ ಹಿಂದೆ ಆಡಿಕೊಂಡಿದ್ದವ್ರ ಬಾಯಿ ಬಂದ್ ಮಾಡಿಸಿದೆ.
75ಕೋಟಿ ಆಡಿಯೋ ರೈಟ್ಸ್.. ಪುಷ್ಪ-ಧುರಂಧರ್ ಧೂಳೀಪಟ
ಮ್ಯೂಸಿಕ್‌ಗಾಗಿ ಅತಿಹೆಚ್ಚು ಬೆಲೆ ಪಡೆದ ಇಂಡಿಯನ್ ಮೂವಿ
ಭಾರತೀಯ ಚಿತ್ರರಂಗದಲ್ಲಿ ರಾಮಾಯಣ ಸಿನಿಮಾ ಒಂದು ಸಾರ್ವಕಾಲಿಕ ದಾಖಲೆ ಬರೆದಿದೆ. ಅದೇನಪ್ಪಾ ಅಂದ್ರೆ, ರಾಮಾಯಣ ಚಿತ್ರದ ಆಡಿಯೋ ಹಕ್ಕುಗಳ ಮಾರಾಟ. ಯೆಸ್.. ಬರೋಬ್ಬರಿ 75 ಕೋಟಿ ರೂಪಾಯಿ ದಾಖಲೆ ಮೊತ್ತಕ್ಕೆ ಮ್ಯೂಸಿಕ್ ರೈಟ್ಸ್ ಸೋಲ್ಡ್ ಔಟ್ ಆಗಿದೆ. ಇದು ನಮ್ಮ ಭಾರತೀಯ ಚಿತ್ರರಂಗದಲ್ಲೇ ಅತಿಹೆಚ್ಚು ಮೊತ್ತಕ್ಕೆ ಆಡಿಯೋ ಹಕ್ಕುಗಳು ಬಿಕರಿಗೊಂಡ ಮೊದಲ ಸಿನಿಮಾ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. ಅದ್ರ ಕಂಪ್ಲೀಟ್ ಕ್ರೆಡಿಟ್ ಸಂಯೋಜಕರಾದ ಹ್ಯಾನ್ಸ್ ಜಿಮ್ಮರ್ ಹಾಗೂ ಎ. ಆರ್. ರೆಹಮಾನ್‌ಗೆ ಸಲ್ಲಲಿದೆ.
ಅಂದಹಾಗೆ ಇಲ್ಲಿಯ ತನಕ ಅತಿಹೆಚ್ಚು ಆಡಿಯೋ ಹಕ್ಕುಗಳು ಮಾರಾಟಗೊಂಡ ಸಿನಿಮಾಗಳ ಲಿಸ್ಟ್‌ನಲ್ಲಿ ಅಗ್ರಸ್ಥಾನದಲ್ಲಿ ಅಲ್ಲು ಅರ್ಜುನ್ ಪುಷ್ಪ-2 ಹಾಗೂ ರಣ್‌ವೀರ್ ಸಿಂಗ್ ನಟನೆಯ ಧುರಂಧರ್-2 ಚಿತ್ರಗಳಿದ್ದವು. 65 ಕೋಟಿಗೆ ಪುಷ್ಪ-2, 58 ಕೋಟಿಗೆ ಧುರಂಧರ್-2 ಸಿನಿಮಾಗಳ ಆಡಿಯೋ ಸೇಲ್ ಆಗಿತ್ತು. ಇದೀಗ ಅವುಗಳನ್ನ ಮೀರಿದ ಬ್ಯುಸಿನೆಸ್.. ಅಂದ್ರೆ 75 ಕೋಟಿ ರೂಪಾಯಿಗಳೊಂದಿಗೆ ಅಗ್ರಸ್ಥಾನಕ್ಕೇರಿದೆ ರಾಮಾಯಣ ಸಿನಿಮಾ ಅನ್ನೋದು ಹೆಮ್ಮೆಯ ವಿಷಯ.
375 ಕೋಟಿ ಪ್ರಮೋಷನಲ್ ಬಜೆಟ್.. ಇಂಡಿಯಾಗೇ ನಂ.1
ಗ್ಲೋಬಲ್ ಮಾರ್ಕೆಟ್ & ಗ್ಲೋಬಲ್ ಆಡಿಯೆನ್ಸ್ ಟಾರ್ಗೆಟ್
ಹಾಲಿವುಡ್, ಕೊರಿಯನ್, ಜಪಾನ್, ಚೈನೀಸ್ ಚಿತ್ರರಂಗಗಳು ಕೂಡ ನಮ್ಮ ಭಾರತ ಸಿನಿ ಜಗತ್ತಿನತ್ತ ತಿರುಗಿ ನೋಡುವಂತಹ ಸಿನಿಮಾ ಮಾಡಿದೆ ಟೀಂ ರಾಮಾಯಣ. ಹೀಗಿರುವಾಗ ಆ ಸಿನಿಮಾನ ಗ್ಲೋಬಲ್ ಆಡಿಯೆನ್ಸ್‌ಗೆ ರೀಚ್ ಮಾಡಿಸೋಕೆ ಚಿತ್ರತಂಡ ಸಾಕಷ್ಟು ದೊಡ್ಡ ಮಟ್ಟದ ಪ್ರಮೋಷನ್ಸ್ ಮಾಡಬೇಕಾಗುತ್ತೆ. ಗ್ಲೋಬಲ್ ಮಾರ್ಕೆಟ್ ಹಾಗೂ ಗ್ಲೋಬಲ್ ಆಡಿಯೆನ್ಸ್‌ನೇ ಟಾರ್ಗೆಟ್ ಮಾಡಿರೋ ಟೀಂ, ಅದಕ್ಕಾಗಿ ಸುಮಾರು 375 ಕೋಟಿ ಪ್ರಮೋಷನಲ್ ಬಜೆಟ್ ಪ್ರತ್ಯೇಕವಾಗಿ ತೆಗೆದಿಟ್ಟಿದೆಯಂತೆ.
375 ಕೋಟಿ ಪೈಕಿ ಸೋನಿ ಪಿಕ್ಚರ್ಸ್ ಎಂಟರ್‌ಟೈನ್ಮೆಂಟ್ ಬ್ಯಾನರ್ 235 ಕೋಟಿ ಹಾಗೂ ಚಿತ್ರದ ನಿರ್ಮಾಪಕರು 140 ಕೋಟಿ ಖರ್ಚು ಮಾಡ್ತಿದ್ದಾರಂತೆ. ಹೀಗೆ ಸಿನಿಮಾವೊಂದರ ಪ್ರಚಾರ ಕಾರ್ಯಗಳಿಗಾಗಿಯೇ 375 ಕೋಟಿ ಬೃಹತ್ ಮೊತ್ತ ಖರ್ಚು ಮಾಡ್ತಿರೋ ವಿಶ್ವದ ಮೊಟ್ಟ ಮೊದಲ ಸಿನಿಮಾ ಅನಿಸಿಕೊಂಡಿದೆ ರಾಮಾಯಣ. ಹಾಗಾಗಿ ಇದು ಎಲ್ಲಾ ಆ್ಯಂಗಲ್‌ನಿಂದ ನಂಬರ್ 1 ಆಗಿ ರಾರಾಜಿಸ್ತಿದೆ.
ದೀಪಾವಳಿಗೆ ಪಾರ್ಟ್-1.. 2027ರ ದೀಪಾವಳಿಗೆ ಪಾರ್ಟ್-2
ಈ ಬಾರಿ ದೀಪಾವಳಿಗೆ ರಾಮನ ಜೊತೆ ವಾಪಸ್ ಆಗಲ್ಲ ಸೀತೆ
ಮೊದಲೇ ಹೇಳಿದಂತೆ ರಾಮಾಯಣ ಚಿತ್ರ ಒಂದಲ್ಲ ಎರಡೆರಡು ಭಾಗಗಳಲ್ಲಿ ಬೆಳ್ಳಿತೆರೆ ಬೆಳಗಲಿದೆ. ಈ ಬಾರಿಯ ದೀಪಾವಳಿಗೆ ಮೊದಲ ಭಾಗ, ಮುಂದಿನ ವರ್ಷ ಅಂದ್ರೆ 2027ರ ದೀಪಾವಳಿ ಹಬ್ಬಕ್ಕೆ ಎರಡನೇ ಭಾಗ ಬಿಡುಗಡೆ ಆಗಲಿದೆ. ಈಗಾಗ್ಲೇ ಡೆಲ್ಲಿ ಭಾರತ್ ಮಂಟಪದಿಂದ ಹಿಡಿದು, ಅಮೆರಿಕಾದ ಸ್ಯಾನ್ ಡಿಯಾಗೋ ಕಾಮಿಕ್ ಕಾನ್, ಸಿನಿಮಾ ಕಾನ್ ವೇದಿಕೆಗಳ ತನಕ ರಾಮಾಯಣ ಚಿತ್ರ ತಮ್ಮ ಪಯಣವನ್ನ ಸಾಗಿಸಿದೆ. ಟ್ರೈಲರ್‌ನಂತೆ ಸಿನಿಮಾ ಕೂಡ ಸಿಕ್ಕಾಪಟ್ಟೆ ಥ್ರಿಲ್ಲಿಂಗ್ ಆಗಿರಲಿದ್ದು, ಹಾಡುಗಳ ಮೇಲೆ ನಿರೀಕ್ಷೆ ಹೆಚ್ಚಿದೆ.
ರಣ್‌ಬೀರ್ ಕಪೂರ್ ಹಾಗೂ ಯಶ್ ಮೊದಲ ಭಾಗದಲ್ಲಿ ಮುಖಾಮುಖಿ ಆಗಲ್ಲ ಅನ್ನೋದು ಚಿತ್ರತಂಡವೇ ಬಹಿರಂಗಪಡಿಸಿದೆ. ಹಾಗಾಗಿ ಈ ಬಾರಿಯ ದೀಪಾವಳಿಗೆ ರಾಮನಿಂದ ದೂರವಾಗಿ, ರಾವಣನ ರಾಜ್ಯದಲ್ಲಿ ಬಂಧಿಯಾಗಿರೋ ಸೀತೆ ಅಯೋಧ್ಯೆಗೆ ವಾಪಸ್ ಆಗಲ್ಲ. ಸೋ.. ಸೀತೆ ಮರಳಿ ಅಯೋಧ್ಯೆಗೆ ಬರೋದು ಮುಂದಿನ ವರ್ಷ ದೀಪಾವಳಿಗೆ ರಿಲೀಸ್ ಆಗ್ತಿರೋ ಪಾರ್ಟ್-2 ಚಿತ್ರದ ಕ್ಲೈಮ್ಯಾಕ್ಸ್‌ನಲ್ಲೇ ಅನ್ನೋದನ್ನ ಪ್ರೇಕ್ಷಕರು ಗಮನದಲ್ಲಿಟ್ಟುಕೊಳ್ಳಬೇಕಿದೆ.
