ಕನ್ನಡ ಚಿತ್ರರಂಗದ ರಾಕಿಂಗ್ ಸ್ಟಾರ್ ಯಶ್ ತಮ್ಮ ಹುಟ್ಟುಹಬ್ಬದ ಸಂಭ್ರಮದ ಸಂದರ್ಭದಲ್ಲಿ ಅಭಿಮಾನಿಗಳಿಗೆ ವಿಶೇಷವಾದ ಪತ್ರವನ್ನು ಬರೆದು ಹಂಚಿಕೊಂಡಿದ್ದಾರೆ. ವರ್ಷಗಳಿಂದ ತಮ್ಮನ್ನು ನೋಡಲು, ಭೇಟಿಯಾಗಲು ಕಾತುರದಿಂದ ಕಾಯುತ್ತಿರುವ ಅಭಿಮಾನಿಗಳ ಭಾವನೆಗಳನ್ನು ಅರಿತು, ಮನದಾಳದ ಮಾತುಗಳನ್ನು ಯಶ್ ವ್ಯಕ್ತಪಡಿಸಿದ್ದಾರೆ. ಈ ಪತ್ರ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳ ಮನಗೆದ್ದಿದೆ.
ಯಶ್, ಅಭಿಮಾನಿಗಳಿಗೆ ಸೋಶಿಯಲ್ ಮೀಡಿಯಾದ ಮೂಲಕ ಪತ್ರ ಬರೆದಿದ್ದಾರೆ. “ಕಳೆದ ಕೆಲವು ವರ್ಷಗಳಿಂದ ನೀವು ನನ್ನನ್ನು ನೇರವಾಗಿ ಭೇಟಿಯಾಗಲು ಎಷ್ಟು ಆತುರದಿಂದ ಕಾಯುತ್ತಿದ್ದೀರೋ ಎಂಬುದನ್ನು ನಾನು ಚೆನ್ನಾಗಿ ಅರಿತಿದ್ದೇನೆ” ಎಂದು ಆರಂಭಿಸಿರುವ ಯಶ್, ಅಭಿಮಾನಿಗಳ ಪ್ರೀತಿಗೆ ಗೌರವ ಸಲ್ಲಿಸಿದ್ದಾರೆ. “ನಿಮ್ಮನ್ನೆಲ್ಲಾ ನೋಡಬೇಕೆಂಬ ಆಸೆ ನನಗೂ ಇದೆ” ಎಂದಿದ್ದಾರೆ.
“ಈ ವರ್ಷ ನಿಮ್ಮ ಜೊತೆ ನನ್ನ ಹುಟ್ಟುಹಬ್ಬ ಆಚರಿಸಿಕೊಳ್ಳಬೇಕು ಎಂದು ಬಯಸಿದ್ದೆ. ಆದರೆ ಮಾರ್ಚ್ 19ರಂದು ಚಿತ್ರಮಂದಿರಗಳಲ್ಲಿ ನಿಮ್ಮ ಮುಂದೆ ಸಿನಿಮಾ ಸಿದ್ಧವಾಗಿರುವಂತೆ ಮಾಡುವುದಕ್ಕಾಗಿ, ಚಿತ್ರದ ಕೆಲಸವನ್ನು ಪೂರ್ಣಗೊಳಿಸುವುದರಲ್ಲಿ ನಾನು ತೊಡಗಿಸಿಕೊಂಡಿದ್ದೇನೆ” ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಯಶ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ‘ಟಾಕ್ಸಿಕ್’ ಈಗ ಅಂತಿಮ ಹಂತದಲ್ಲಿದ್ದು, ಅದಕ್ಕಾಗಿ ಅವರು ಸಂಪೂರ್ಣವಾಗಿ ಸಮಯವನ್ನು ಮೀಸಲಿಟ್ಟಿದ್ದಾರೆ. “ಟಾಕ್ಸಿಕ್ ಕೆಲಸದಿಂದ ನಿಮ್ಮನ್ನು ನೇರವಾಗಿ ಭೇಟಿಯಾಗಲು ಸಾಧ್ಯವಾಗುವುದಿಲ್ಲ” ಎಂದು ಹೇಳಿದ್ದಾರೆ.
“ನಾವು ಬಹಳ ದೊಡ್ಡ ರೀತಿಯಲ್ಲಿ, ಬಹಳ ಬೇಗನೇ ಭೇಟಿಯಾಗೋಣ”. ಅಲ್ಲಿವರೆಗೂ ನೀವು ಕಳುಹಿಸುವ ಪ್ರತಿಯೊಂದು ಶುಭಾಶಯವನ್ನೂ ನಾನು ವೈಯಕ್ತಿಕವಾಗಿ ನೋಡುತ್ತೇನೆ… ಮುಂದಿನ ದಿನಗಳಲ್ಲಿ ಅದ್ಧೂರಿಯಾಗಿ ಅಭಿಮಾನಿಗಳನ್ನು ಭೇಟಿ ಮಾಡುವ ಕನಸನ್ನು ಯಶ್ ಈ ಮೂಲಕ ಬಿಚ್ಚಿಟ್ಟಿದ್ದಾರೆ.
ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಕಳುಹಿಸುವ ಪ್ರತಿಯೊಂದು ಶುಭಾಶಯಕ್ಕೂ ಯಶ್ ಸ್ಪಂದಿಸಿದ್ದಾರೆ. “ಅಲ್ಲಿವರೆಗೂ ನೀವು ಕಳುಹಿಸುವ ಪ್ರತಿಯೊಂದು ಶುಭಾಶಯವನ್ನೂ ನಾನು ವೈಯಕ್ತಿಕವಾಗಿ ನೋಡುತ್ತೇನೆ. ನೀವು ನೀಡುವ ಪ್ರೀತಿಯ ಪ್ರತಿಯೊಂದು ಕ್ಷಣವನ್ನೂ ಮೌಲ್ಯವನ್ನಿಟ್ಟು ಕಾಪಾಡಿಕೊಳ್ಳುತ್ತೇನೆ” ಎಂದು ಹೇಳಿದ್ದಾರೆ…
