ದೆಹಲಿ (ಏ.25): ಭಾರತ ಮತ್ತು ಪಾಕಿಸ್ತಾನ ನಡುವೆ ಸಂಭವಿಸುತ್ತಿರುವ ಗಡಿ ಸಂಘರ್ಷಗಳು, ಉಗ್ರ ದಾಳಿ ಘಟನೆಗಳು ದೇಶಾದದ್ಯಾಂತ ಸುದ್ದಿಯಾಗಿವೆ. ಈ ಹಿನ್ನೆಲೆಯಲ್ಲಿ, ಪಾಕಿಸ್ತಾನಕ್ಕೆ ಸೇರಿದ ನಟ-ನಟಿಯರಿಗೆ ಭಾರತದಲ್ಲಿ ಅವಕಾಶ ನೀಡುವುದು ಚರ್ಚೆಯ ವಿಷಯವಾಗಿದೆ. ಇತ್ತೀಚೆಗೆ ಇದೇ ವಿವಾದದಲ್ಲಿ ಸಿಲುಕಿರುವುದು ‘ಅಬಿರ್ ಗುಲಾಲ್’ ಎಂಬ ಹೊಸ ಹಿಂದಿ ಸಿನಿಮಾ. ಫಾವದ್ ಖಾನ್ ಮತ್ತು ವಾಣಿ ಕಪೂರ್ ಅಭಿನಯದ ಈ ಸಿನಿಮಾ ಬಿಡುಗಡೆಗೂ ಮುನ್ನವೇ ಸಂಕಷ್ಟ ಎದುರಿಸುತ್ತಿದೆ.
ಪೆಹಲ್ಗಾಮ್ ದಾಳಿ ನಂತರ ಎದುರಾದ ಪ್ರತಿರೋಧ
ಪೆಹಲ್ಗಾಮ್‌ನಲ್ಲಿ ನಡೆದ ಭಯಾನಕ ಉಗ್ರ ದಾಳಿಯಲ್ಲಿ 26ಕ್ಕೂ ಹೆಚ್ಚು ಮಂದಿ ಬಲಿಯಾದರು. ಈ ದಾಳಿಯ ಹಿಂದೆ ಪಾಕಿಸ್ತಾನ ಮೂಲದ ಉಗ್ರ ಸಂಘಟನೆಗಳ ಕೈವಾಡವಿರುವುದಾಗಿ ಭಾರತೀಯ ಅಧಿಕಾರಿಗಳು ಹೇಳಿದ್ರು. ಇದೇ ಸಂದರ್ಭದಲ್ಲಿ ಪಾಕಿಸ್ತಾನ ನಟ ಫಾವದ್ ಖಾನ್ ಅಭಿನಯಿಸಿರುವ ‘ಅಬಿರ್ ಗುಲಾಲ್’ ಸಿನಿಮಾದ ಹಾಡುಗಳು ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿದ್ದವು. ಇದರಿಂದ ಸಾರ್ವಜನಿಕರ ಕೋಪ ಇನ್ನಷ್ಟು ತೀವ್ರಗೊಂಡಿದೆ.
ಸಿನಿಮಾ ವಿರುದ್ಧ ಆಕ್ರೋಶ ವ್ಯಕ್ತವಾಗಿದ್ದು, “ಪಾಕಿಸ್ತಾನದಿಂದ ಬಂದ ನಟನ ರೊಮ್ಯಾಂಟಿಕ್ ಹಾಡುಗಳನ್ನು ನಾವು ನೋಡಬೇಕು ಎಂಬುದು ನ್ಯಾಯವೇ? ಉಗ್ರರ ದಾಳಿಯಲ್ಲಿ ತಮ್ಮ ಆಪ್ತರನ್ನು ಕಳೆದುಕೊಂಡ ಕುಟುಂಬಗಳ ನೋವಿಗೆ ಸ್ಪಂದಿಸಬೇಕಾದ ಸಮಯದಲ್ಲಿಯೇ, ಇಂತಹ ಚಿತ್ರಗಳು ಬಿಡುಗಡೆ ಆಗುವುದು ಸೂಕ್ತವೇ?” ಎಂಬ ಪ್ರಶ್ನೆಗಳು ಸೋಶಿಯಲ್ ಮೀಡಿಯಾದಲ್ಲಿ ಕೇಳಿಬರುತ್ತಿವೆ.
ಯೂಟ್ಯೂಬ್ ನಿಂದ ಹಾಡುಗಳನ್ನು ಡಿಲೀಟ್
ಅಬಿರ್ ಗುಲಾಲ್ ಚಿತ್ರದ ‘ಖುದಾಯ ಇಷ್ಕ್’ ಮತ್ತು ‘ಅಂಗ್ರೆಜಿ ರಂಗ್ರಸಿಯಾ’ ಎಂಬ ಎರಡು ಹಾಡುಗಳು ಈ ತಿಂಗಳ ಆರಂಭದಲ್ಲಿ ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿದ್ದವು. ಆದರೆ ಎಪ್ರಿಲ್ 25ರಂದು ಈ ಎರಡೂ ಹಾಡುಗಳನ್ನು ಚಿತ್ರತಂಡವು ಯೂಟ್ಯೂಬ್‌ನಿಂದ ತೆಗೆದು ಹಾಕಿದೆ. ಏಪ್ರಿಲ್ 23ರಂದು ಬಿಡುಗಡೆಯಾಗಬೇಕಿದ್ದ ‘ಟೈನ್ ಟೈನ್’ ಹಾಡೂ ದಾಳಿಯ ನಂತರ ಮುಂದೂಡಲಾಗಿದೆ.
ಈ ಎಲ್ಲಾ ಬೆಳವಣಿಗೆಯು ಸಿನಿಮಾಗೆ ಕಪ್ಪು ಬುತ್ತಿ ತಂದಿದ್ದು, ಹಲವಾರು ಸಿನಿಮಾ ಸಂಘಟನೆಗಳು ಮತ್ತು ನಿರ್ದೇಶಕರ ಸಂಘವು ‘ಅಬಿರ್ ಗುಲಾಲ್’ ಬಿಡುಗಡೆಗೆ ವಿರೋಧ ವ್ಯಕ್ತಪಡಿಸಿವೆ.
ಫಾವದ್ ಖಾನ್ ಪ್ರತಿಕ್ರಿಯೆ
ಪೆಹಲ್ಗಾಮ್ ದಾಳಿಯನ್ನು ಖಂಡಿಸಿರುವ ಫಾವದ್ ಖಾನ್, ತನ್ನ ಸೋಶಿಯಲ್ ಮೀಡಿಯಾದಲ್ಲಿ ಸಂತಾಪ ಸೂಚಿಸಿದ್ದಾರೆ. ಆದರೆ ಹಿಂದಿನ ಕೆಲ ಸಂದರ್ಭಗಳಲ್ಲಿ ಭಾರತವನ್ನು ಬಿಟ್ಟುಕೊಂಡು ಪಾಕಿಸ್ತಾನವನ್ನು ಬೆಂಬಲಿಸಿದ್ದ ಅವರ ಹಳೆಯ ನಿಲುವು ಮತ್ತೆ ಚರ್ಚೆಗೆ ಬಂದಿದೆ. “ಈ ಬಾರಿ ಸಿನಿಮಾ ಬಿಡುಗಡೆಯ ಅಗತ್ಯವಿದ್ದರಿಂದ ಅವರು ಕಣ್ಣೀರು ಸುರಿಸುತ್ತಿದ್ದಾರೆ” ಎಂಬ ಟೀಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
