ಪ್ರಧಾನಿ ಮೋದಿ ಉದ್ಘಾಟಿಸಿದ್ದ ಮುಂಬೈನ ವೇವ್ಸ್ ಸಮ್ಮಿಟ್

ಖಾನ್, ಕರಣ್, ದೀಪಿಕಾ 3-ಇಡಿಯಟ್ಸ್..ಬಾಬು ಬ್ಲಾಸ್ಟ್ !

Web (2)

ಮುಂಬೈನಲ್ಲಿ ನಡೆಯುತ್ತಿರೋ ವೇವ್ಸ್ ಸಮ್ಮಿಟ್‌ಗೆ ಪ್ರಧಾನಿ ಮೋದಿ ಚಾಲನೆ ನೀಡಿದ್ರು. ನಂತರ ಕಿಂಗ್ ಖಾನ್ ಶಾರೂಖ್, ದೀಪಿಕಾ ಪಡುಕೋಣೆ ಹಾಗೂ ಕರಣ್ ಜೋಹರ್ ಕಾರ್ಯಕ್ರಮವೊಂದನ್ನ ನಡೆಸಿಕೊಟ್ಟರು. ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರೋ ಮುತ್ತಿನಹಾರ ಡೈರೆಕ್ಟರ್ ರಾಜೇಂದ್ರ ಸಿಂಗ್ ಬಾಬು, ಆ ಮೂವರನ್ನ ತ್ರೀ ಇಡಿಯಟ್ಸ್ ಎಂದಿದ್ದಾರೆ. ಅಷ್ಟೇ ಅಲ್ಲ, ಕರಣ್ ಜೋಹರ್‌ನ ಜೋಕರ್ ಅಂತಲೂ ಕಾಲೆಳೆದಿದ್ದಾರೆ.

ಮುಂಬೈನಲ್ಲಿ ಕೇಂದ್ರ ಸರ್ಕಾರದಿಂದ ಇಂಟರ್‌‌ನ್ಯಾಷನಲ್ ಲೆವೆಲ್‌‌ನಲ್ಲಿ ವೇವ್ಸ್ ಸಮ್ಮಿಟ್ ಆಯೋಜನೆಗೊಂಡಿದೆ. ನಾಲ್ಕು ದಿನಗಳ ಕಾಲ ನಡೆಯಲಿರೋ ಚಿತ್ರೋದ್ಯಮದ ಕುರಿತ ಈ ಶೃಂಗಸಭೆಗೆ ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ಚಾಲನೆ ನೀಡಿದ್ರು. ನಂತರ ಹಾಲಿವುಡ್ ಸೇರಿದಂತೆ ವಿಶ್ವದ ಮೂಲೆ ಮೂಲೆಗಳಿಂದ ಆಗಮಿಸಿದ್ದಂತಹ ಚಿತ್ರರಂಗದ ತಂತ್ರಜ್ಞರು ಹಾಗೂ ಕಲಾವಿದರನ್ನ ಉದ್ದೇಶಿಸಿ, ಮೋದಿ ಭಾಷಣ ಕೂಡ ಮಾಡಿದ್ರು.

ಪ್ರತಿ ಚಿತ್ರರಂಗಕ್ಕೂ ಸ್ವತಃ ವಾರ್ತಾ ಮತ್ತು ಪ್ರಸಾರ ಸಚಿವಾಲಯದಿಂದಲೇ ಖುದ್ದು ಆಹ್ವಾನ ನೀಡಿದ್ದು, ಈ ಸಮ್ಮಿಟ್‌ಗೆ ನಮ್ಮ ಕನ್ನಡ ಚಿತ್ರರಂಗವನ್ನು ಅಷ್ಟಾಗಿ ಪರಿಗಣನೆಗೆ ತೆಗೆದುಕೊಂಡಂತಿಲ್ಲ. ಚಿರಂಜೀವಿ, ನಾಗಾರ್ಜುನ, ರಜನೀಕಾಂತ್, ಕಮಲ್ ಹಾಸನ್, ಮೋಹನ್‌ಲಾಲ್, ಅಮಿತಾಬ್ ಬಚ್ಚನ್, ಶಾರೂಖ್ ಖಾನ್, ದೀಪಿಕಾ ಪಡುಕೋಣೆ, ಅಲ್ಲು ಅರ್ಜುನ್, ಅಕ್ಷಯ್ ಕುಮಾರ್, ಶಾಹಿದ್ ಕಪೂರ್, ವಿಕ್ಕಿ ಕೌಶಲ್ ಅಂತಹ ನಟ, ನಟಿಯರುಗಳಿಗೆ ಆಹ್ವಾನ ನೀಡಿರೋ I&B ಮಿನಿಸ್ಟರಿ, ಕನ್ನಡ ಚಿತ್ರರಂಗದ ಸ್ಟಾರ್‌‌ಗಳನ್ನ ಕಡೆಗಣಿಸಿದೆ.

ಆದಾಗ್ಯೂ ಕೂಡ ಖ್ಯಾತ ಹಿರಿಯ ನಿರ್ದೇಶಕ ಎಸ್‌.ವಿ. ರಾಜೇಂದ್ರ ಸಿಂಗ್ ಬಾಬು, ಫಿಲ್ಮ್ ಚೇಂಬರ್ ಅಧ್ಯಕ್ಷ ನರಸಿಂಹಲು, ನಟ ಜಗ್ಗೇಶ್, ಶಿಲ್ಪಾ ಶ್ರೀನಿವಾಸ್, ನಿರ್ಮಾಪಕ ಶ್ರೀನಿವಾಸ್ ಸೇರಿದಂತೆ ಒಂದಷ್ಟು ಮಂದಿ ಕನ್ನಡದ ಫಿಲ್ಮ್ ಮೇಕರ್ಸ್‌ ಭಾಗಿಯಾಗಿದ್ದಾರೆ. ಬಾಲಿವುಡ್ ಮಂದಿ ನಮ್ಮ ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿದಂತಹ ಕಲಾವಿದರುಗಳಾದ ಯಶ್, ರಿಷಬ್ ಶೆಟ್ಟಿ, ಹೊಂಬಾಳೆ ಫಿಲಂಸ್ ನ ವಿಜಯ್ ಕಿರಗಂದೂರು, ಪ್ರಶಾಂತ್ ನೀಲ್ ಗೆ ಆಹ್ವಾನ ನೀಡಬೇಕಿತ್ತು. ಆದ್ರೆ ವೇವ್ಸ್ ಆಯೋಜಕರು ಅದರಲ್ಲಿ ಎಡವಿದ್ದಾರೆ.

ಹಾಲಿವುಡ್ ಸೇರಿದಂತೆ ಬೇರೆ ಬೇರೆ ದೇಶಗಳಿಂದ ಆಗಮಿಸಿರೋ ಸಿನಿಮಾ ಕಲಾವಿದರು, ನಿರ್ದೇಶಕ, ನಿರ್ಮಾಪಕ ಹಾಗೂ ತಂತ್ರಜ್ಞರ ಮುಂದೆ ವೇವ್ಸ್ ಸಮ್ಮಿಟ್‌‌ನಲ್ಲಿ ಒಂದು ಸಂವಾದ ನಡೆದಿದೆ. ಅದರಲ್ಲಿ ಬಾಲಿವುಡ್‌‌ನ ಕಿಂಗ್ ಖಾನ್ ಶಾರೂಖ್, ಖ್ಯಾತ ನಟಿ ದೀಪಿಕಾ ಪಡುಕೋಣೆ ಹಾಗೂ ಬಿಟೌನ್‌‌ನ ತನ್ನ ಕಪಿಮುಷ್ಠಿಯಲ್ಲಿ ಇಟ್ಟುಕೊಂಡಿರೋ ಕರಣ್ ಜೋಹರ್ ಮೂವರೂ ವೇದಿಕೆ ಹಂಚಿಕೊಂಡು, ಸಂವಾದ ನಡೆಸಿದ್ದಾರೆ. ಈ ಬಗ್ಗೆ ಅಸಮಾಧಾನ ಹೊರಹಾಕಿರೋ ನಮ್ಮ ಮುತ್ತಿನಹಾರ, ಅಂತ, ಮುಂಗಾರಿನ ಮಿಂಚು ಸಿನಿಮಾಗಳ ಖ್ಯಾತಿಯ ಹಿರಿಯ ನಿರ್ದೇಶಕ ರಾಜೇಂದ್ರಸಿಂಗ್ ಬಾಬು, ಕಿಡಿ ಕಾರಿದ್ದಾರೆ. ಅಲ್ಲಿ ನಡೆದದ್ದನ್ನು ಬಹಳ ಖಾರವಾಗಿ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ವೇವ್ಸ್ ಒಂದು ಅದ್ಭುತ ಪರಿಕಲ್ಪನೆ. ಇಂದು ಶಾರೂಖ್ ಖಾನ್, ದೀಪಿಕಾ ಪಡುಕೋಣೆ ಹಾಗೂ ಕರಣ್ ಜೋಕರ್ ಕಾರ್ಯಕ್ರಮ ವಿಫಲವಾಗಿದೆ. ಇಡೀ ವಿಶ್ವ ಭಾರತೀಯ ಚಿತ್ರರಂಗ ಹೇಗೆ ನಡೆಯಲಿದೆ..? ಮುಂದಿನ ಚಿತ್ರರಂಗದ ಭವಿಷ್ಯ ಏನು ಅನ್ನೋದನ್ನ ತಿಳಿಯಬಯಸಿದೆ. ಆದ್ರೆ ಯಾರೂ ಈ 3- ಇಡಿಯಟ್ಸ್ ಆಟೋಬಯೋಗ್ರಫಿ ತಿಳಿಯೋಕೆ ಬಂದಿಲ್ಲ. ಆಯೋಜಕರು ಜಾಗತಿಕ ಕಾರ್ಯಕ್ರಮಗಳನ್ನ, ಅಂತಾರಾಷ್ಟ್ರೀಯ ಮಟ್ಟದ ಇವೆಂಟ್‌‌ಗಳನ್ನ ಅವಲೋಕಿಸಬೇಕಿದೆ. ಆದ್ರೆ ಈ 3-ಇಡಿಯಟ್ಸ್‌‌ ತಮಾಷೆಯನ್ನಲ್ಲ.

ಹೀಗಂತ ಆಯೋಜಕರು ಹಾಗೂ ಸಂವಾದದಲ್ಲಿ ತಮ್ಮಗಳ ಬಗ್ಗೆ ತಾವೇ ಬೊಗಳೆ ಬಿಡ್ತಿದ್ದ ಮೂವರ ಬಗ್ಗೆ ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ. ರಾಜೇಂದ್ರ ಸಿಂಗ್ ಬಾಬು ಅವರ ಮಾತು ಅಕ್ಷರಶಃ ಸತ್ಯ. ಅದು ತಾಂತ್ರಿಕ ಅಂಶಗಳ ಕುರಿತು ಚರ್ಚೆ ಆಗಬೇಕಾದ ವೇದಿಕೆ. ಅಲ್ಲಿ ಇವ್ರ ಬಗ್ಗೆ ಇವರೇ ಬೊಬ್ಬೆ ಹೊಡೆದುಕೊಳ್ಳೋಕೆ ಕೂರಿಸಿ ಎಲ್ಲರ ಮುಂದೆ ಆ ಸಮ್ಮಿಟ್‌ಗಿರೋ ಮೌಲ್ಯವನ್ನು ಕುಗ್ಗಿಸೋ ಕಾರ್ಯ ಮಾಡಬಾರದಿತ್ತು. ಸೋ.. ಇನ್ನೂ ಎರಡು ದಿನಗಳ ಕಾಲ ಈ ಸಮ್ಮಿಟ್‌‌ನಲ್ಲಿ ಏನೆಲ್ಲಾ ಆಗುತ್ತೆ ಅನ್ನೋದು ಕಾದು ನೋಡಬೇಕಿದೆ.

Exit mobile version