ಬೆಂಗಳೂರು: ಸಾಹಸ ಸಿಂಹ, ಕನ್ನಡ ಚಿತ್ರರಂಗದ ದಿಗ್ಗಜ ನಟ ಡಾ. ವಿಷ್ಣುವರ್ಧನ್ ಅವರ 75ನೇ ಜನ್ಮದಿನದ ಸಂಭ್ರಮ ಇಂದು ರಾಜ್ಯದಾದ್ಯಂತ ಆಚರಿಸಲು ನಿರ್ಧರಿಸಲಾಗಿದೆ. ವಿಷ್ಣುದಾದಾ ಎಂದೇ ಪ್ರಸಿದ್ಧರಾದ ಅವರ ಹುಟ್ಟುಹಬ್ಬವನ್ನು ಅಭಿಮಾನಿಗಳು ವಿಶೇಷವಾಗಿ ಸ್ಮರಿಸುತ್ತಿದ್ದಾರೆ. ಆದರೆ, ಈ ಬಾರಿ ಸಂಭ್ರಮಕ್ಕೆ ಸ್ವಲ್ಪ ಬ್ರೇಕ್ ಬಿದ್ದಿದೆ.
ಬೆಂಗಳೂರಿನ ಅಭಿಮಾನ್ ಸ್ಟುಡಿಯೋದಲ್ಲಿ ಆಚರಣೆಗೆ ಕೋರ್ಟ್ ಅನುಮತಿ ನೀಡದ ಹಿನ್ನೆಲೆಯಲ್ಲಿ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಇದರ ಹೊರತಾಗಿ, ವಿಷ್ಣು ಸೇವಾ ಸಮಿತಿ ಮತ್ತು ವಿಷ್ಣು ಸೇನಾ ಸಮಿತಿಯ ನೇತೃತ್ವದಲ್ಲಿ ಹಲವು ಕಡೆಗಳಲ್ಲಿ ಸಂಭ್ರಮಾಚರಣೆ ನಡೆಸಲು ನಿರ್ಧರಿಸಲಾಗಿದೆ.
ಅಭಿಮಾನ್ ಸ್ಟುಡಿಯೋದಲ್ಲಿ ಸಂಭ್ರಮಾಚರಣೆಗೆ ಬ್ರೇಕ್ ಬಿದ್ದಿದೆ. ಈ ಸ್ಟುಡಿಯೋದಲ್ಲಿ ವಿಷ್ಣುವರ್ಧನ್ ಅವರ ಸ್ಮಾರಕವಿದ್ದು, ಅಭಿಮಾನಿಗಳು ಹುಟ್ಟುಹಬ್ಬವನ್ನು ಅಲ್ಲಿ ಸೆಲೆಬ್ರೇಟ್ ಮಾಡಲು ಕಾಯುತ್ತಿದ್ದರು. ಆದರೆ, ಕೋರ್ಟ್ ಅನುಮತಿ ನೀಡದ ಕಾರಣ ಅವಕಾಶ ಸಿಗಲಿಲ್ಲ. ವಿಷ್ಣುವರ್ಧನ್ ಪುಣ್ಯಭೂಮಿ ಟ್ರಸ್ಟ್ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿತ್ತು, ಆದರೆ ವಿಚಾರಣೆಯನ್ನು ನವೆಂಬರ್ 4ಕ್ಕೆ ಮುಂದೂಡಲಾಗಿದೆ. ಇದರಿಂದ ಅಭಿಮಾನಿಗಳು ಬೇಸರಗೊಂಡಿದ್ದಾರೆ. “ಅಭಿಮಾನ್ ಸ್ಟುಡಿಯೋದಲ್ಲಿ ನೋ ಎಂಟ್ರಿ. ಪುಣ್ಯಭೂಮಿಯಲ್ಲಿ ಅವಕಾಶ ನೀಡದಿದ್ದುದು ನೋವುಂಟುಮಾಡಿದೆ,” ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಸ್ಟುಡಿಯೋದಲ್ಲಿ ಪೊಲೀಸ್ ಬಿಗಿ ಭದ್ರತೆಯಿದ್ದು, 20ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ.
ಇತ್ತೀಚೆಗೆ ನಟಿ ಭಾರತಿ ವಿಷ್ಣುವರ್ಧನ್ ಮತ್ತು ಅವರ ಅಳಿಯ ನಟ ಅನಿರುದ್ಧ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದರು. ಅಭಿಮಾನ್ ಸ್ಟುಡಿಯೋದಲ್ಲಿ 10 ಗುಂಟೆ ಜಾಗವನ್ನು ವಿಷ್ಣುವರ್ಧನ್ ಸ್ಮಾರಕಕ್ಕಾಗಿ ಮೀಸಲಿಡುವಂತೆ ಮನವಿ ಮಾಡಿದ್ದರು. ಆದರೆ, ಮೈಸೂರಿನಲ್ಲಿ ಸ್ಮಾರಕ ನಿರ್ಮಾಣದ ಹಿನ್ನೆಲೆಯಲ್ಲಿ ಅಭಿಮಾನ್ ಸ್ಟುಡಿಯೋದ ಸಮಾಧಿಯನ್ನು ತೆರವುಗೊಳಿಸಲಾಗಿತ್ತು. ಬೆಂಗಳೂರಿನ ಕೆಂಗೇರಿ ರಿಂಗ್ ರೋಡ್‌ನಲ್ಲಿರುವ ಸಮಾಧಿಯನ್ನು ನೆಲಸಮಗೊಳಿಸಲಾಗಿತ್ತು. ಇದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಅಭಿಮಾನಿಗಳು ಪ್ರತಿಭಟನೆ ನಡೆಸಿ, ಸಮಾಧಿಯನ್ನು ಮರುಸ್ಥಾಪಿಸಬೇಕು ಎಂದು ಆಗ್ರಹಿಸಿದ್ದರು.
