ವಿನೋದ್ ರಾಜ್ ಸಾಮಾಜಿಕ ಬದ್ಧತೆಗೆ ಜನ ಬಹುಪರಾಕ್

Untitled design 2025 05 24t185940.279

ತಾಯಿಯಂತೆ ಮಕ್ಕಳು ಅನ್ನೋ ಮಾತು ಅಕ್ಷರಶಃ ಸತ್ಯ. ಅಭಿನೇತ್ರಿ ಲೀಲಾವತಿ ನಿಧನದ ನಂತರವೂ ಸಹ ಅವ್ರ ಆಶಯಗಳನ್ನ ನೆರವೇರಿಸುವುದರಲ್ಲೇ ಸಾರ್ಥಕ ಜೀವನ ಕಂಡುಕೊಳ್ತಿರೋ ನಟ ವಿನೋದ್ ರಾಜ್‌ಗೆ ನಾವೆಲ್ಲಾ ಒಂದು ಹ್ಯಾಟ್ಸಾಫ್ ಹೇಳಲೇಬೇಕು. ಹೌದು.. ಜನಪ್ರತಿನಿಧಿಗಳಿಗಿಲ್ಲದ ಊರ ಉಸಾಬರಿಯನ್ನ ವಿನೋದ್ ರಾಜ್ ನೋಡ್ತಿರೋದು ನೋಡಿದ್ರೆ ಶಹಬ್ಬಾಸ್ ಅಂತೀರಾ

ನೆಲಮಂಗಲದ ಬಳಿಯೊಂದು ಸುಂದರ ತೋಟ, ತೋಟದ ಮಧ್ಯೆ ಒಂದು ಬಂಗಲೆ. ಸಾಲದು ಅಂತ ಚೆನ್ನೈನ ಟಿ ನಗರ್‌‌ನಲ್ಲೊಂದು ಮನೆ, ತೋಟ, ಲಕ್ಷಾಂತರ ಬಾಡಿಗೆ ಬರೋ ಕಟ್ಟಡಗಳು. ಇರುವಲ್ಲಿಗೇ ಎಲ್ಲವೂ ಬರುತ್ತವೆ. ಕಾಲಲ್ಲಿ ತೋರಿಸಿದ್ರೆ ಕೈಯಲ್ಲಿ ಮಾಡುವಂತಹ ಹತ್ತಾರು ಆಳುಗಳು. ಕೂತು ತಿಂದರೂ ಎರಡು ಜನರೇಷನ್‌ಗೆ ಆಗುವಷ್ಟು ಆಸ್ತಿಯಿದೆ. ಆದ್ರೆ ಅದ್ಯಾವುದೂ ಮಾಡದೆ, ಸುಂದರ ಹಾಗೂ ಸರಳ ಜೀವನಕ್ಕೆ ಅಣಿಯಾಗಿದ್ದಾರೆ ದಿವಂಗತ ಅಭಿನೇತ್ರಿ ಲೀಲಾವತಿಯ ಮುದ್ದಿನ ಮಗ ವಿನೋದ್ ರಾಜ್.

ಅಮ್ಮನಂತೆ ತಾನೂ ಭಾವುಕ ಜೀವ. ತಾನು, ತನ್ನ ಕುಟುಂಬ ಅನ್ನೋದಕ್ಕಿಂತ ಹೆಚ್ಚಾಗಿ, ತನ್ನ ಜೊತೆಗಿರುವವರು ಹಾಗೂ ಸುತ್ತಮುತ್ತಲಿನ ಜನರೇ ತನ್ನವರು ಅಂತ ಬದುಕ್ತಿರೋ ವ್ಯಕ್ತಿತ್ವ ವಿನೋದ್ ರಾಜ್‌ರದ್ದು. ಅದಕ್ಕೆ ಕಾರಣ ಲೀಲಾವತಿಯ ಬದುಕು, ಬವಣೆ, ಅಸಹಾಯಕರಿಗಾಗಿ ಮಿಡಿದ ಆಕೆಯ ಮನ. ತಾಯಿಯ ಮಡಿಲಲ್ಲೇ ಬೆಳೆದ ವಿನೋದ್ ರಾಜ್ ಕೂಡ, ಅಮ್ಮನಂತೆ ತಾನೂ ಬದುಕುತ್ತಾ, ಆದರ್ಶಮಯ ಜೀವನ ಸಾಗಿಸ್ತಿದ್ದಾರೆ.

ಅಮ್ಮನ ಅಗಲಿಕೆ ನಂತರ ಆಕೆಯ ಆಶಯಗಳನ್ನ ತಲೆ ಮೇಲೆ ಹೊತ್ತು, ಜವಾಬ್ದಾರಿಯನ್ನ ಸಮರ್ಪಕವಾಗಿ ನಿಭಾಯಿಸ್ತಿದ್ದಾರೆ. ಇಂದಿಗೂ ಕನ್ನಡ ಚಿತ್ರರಂಗದ ಅದೆಷ್ಟೋ ಮಂದಿ ಹಿರಿಯ ಕಲಾವಿದರಿಗೆ ಆರ್ಥಿಕ ಸಹಾಯ ಮಾಡ್ತಿದ್ದಾರೆ. ಅಮ್ಮನಿಗಾಗಿ ಸ್ವಂತ ದುಡ್ಡಿಂದ ಸ್ಮಾರಕ ನಿರ್ಮಿಸಿದ ವಿನೋದ್ ರಾಜ್, ಅದಾದ ಬಳಿಕ ಕೂಡ, ತನ್ನ ಸ್ವಂತ ಸಂಪಾದನೆಯಿಂದ ಕೃಷಿ ಮಾಡ್ತಾ ಖುಷ್ ಖುಷಿಯಾಗಿ ಬದುಕ್ತಿದ್ದಾರೆ. ಅಸಹಾಯಕರ ಕಷ್ಟಗಳಿಗೆ ಮಿಡಿಯುತ್ತಾ, ಸೋಲದೇವನಹಳ್ಳಿಯ ಸುತ್ತಮುತ್ತಲಿನ ಅದೆಷ್ಟೋ ಊರುಗಳ ರಸ್ತೆ ಕಾಮಗಾರಿ ಮಾಡಿಸಿದ್ದಾರೆ.

ಲಕ್ಷಾಂತರ ರೂಪಾಯಿ ಖರ್ಚು ಮಾಡಿ ರಸ್ತೆಗಳ ಗುಂಡಿಗಳನ್ನ ಮುಚ್ಚಿಸೋ ಕಾರ್ಯ ಮಾಡಿದ್ದಾರೆ. ದುಡ್ಡು ಕೊಟ್ಟು ಯಾರಿಗೋ ಹೇಳಿ ಕೈ ತೊಳೆದುಕೊಳ್ತಿಲ್ಲ. ಸ್ವತಃ ಅವರೇ ನಿಂತು, ಸಿಮೆಂಟ್ ಕಾಂಕ್ರಿಟ್‌‌ನ ಮಿಕ್ಸ್ ಮಾಡಿಸಿ, ಟ್ರ್ಯಾಕ್ಟರ್‌‌ಗಳ ಮೂಲಕ ರೋಡ್‌‌‌ಗಳಿಗೆ ಹಾಕಿಸಿ, ಅದನ್ನ ಜೆಸಿಬಿ ಹಾಗೂ ರೋಲರ್ ಮೂಲಕ ಸಮತಟ್ಟು ಮಾಡಿಸ್ತಿದ್ದಾರೆ. ಮಳೆಯಿಂದ ಹೈರಾಣಾಗಿರೋ ಗ್ರೇಟರ್ ಬೆಂಗಳೂರು, ಸದ್ಯ ವಾಟರ್ ಬೆಂಗಳೂರಾಗಿ ಬದಲಾಗಿದೆ. 500, 1000 ರೂಪಾಯಿಗೆ ವೋಟ್ ಕೇಳಿ ಗೆದ್ದ ಜನಪ್ರತಿನಿಧಿಗಳು ಆರಾಮಾಗಿ ತಮ್ಮ ಬಂಗಲೆಗಳಲ್ಲಿ ಹಾಯಾಗಿ ಕೂತಿದ್ದಾರೆ. ಆದ್ರೆ ವಿನೋದ್ ರಾಜ್ ಮಾತ್ರ ರಸ್ತೆಗಿಳಿದು, ಯಾವುದೇ ಅಪೇಕ್ಷೆ ಇಲ್ಲದೆ ನಿಸ್ವಾರ್ಥವಾಗಿ ಸಾಮಾಜಿಕ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.

ವಿನೋದ್ ರಾಜ್‌ರ ಈ ಸಾಮಾಜಿಕ ಕಳಕಳಿಗೆ ಇಡೀ ಕರುನಾಡು ಶಹಬ್ಬಾಸ್ ಅಂತಿದೆ. ಇದಲ್ಲವೇ ಸಾರ್ಥಕ ಜೀವನ. ಇದಲ್ಲವೇ ಅರ್ಥಪೂರ್ಣ ಜೀವನ. ಒಂದ್ಕಡೆ ಜನ ವಿನೋದ್ ರಾಜ್‌ ಅವ್ರಿಗೆ ಭೇಷ್ ಅಂತಿದ್ರೆ, ಮತ್ತೊಂದ್ಕಡೆ ಜನಪ್ರತಿನಿಧಿಗಳಿಗೆ ಛೀಕಾರ ಹಾಕ್ತಿದ್ದಾರೆ. ಆ್ಯಕ್ಚುಲಿ ವಿನೋದ್ ರಾಜ್ ಅಂಥವ್ರು ರಾಜಕಾರಣಕ್ಕೆ ಬಂದ್ರೆ ಜನಸೇವೆ ಮಾಡ್ತಾರೆ. ವೈಯಕ್ತಿಕ ಹಿತಾಸಕ್ತಿಗಾಗಿ ರಾಜಕೀಯ ಮಾಡೋರು ಜನಸೇವೆ ಮಾಡೋಕೆ ಸಾಧ್ಯವೇ..? ನೀವೇ ಯೋಚಿಸಿ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

Exit mobile version