ವಿಜಯಲಕ್ಷ್ಮಿ v/s ಧನ್ವೀರ್ ಫೈಟ್‌: ನ.12ರಂದು ವಿಚಾರಣೆಗೆ ಹಾಜರಾಗಲು ನಟನಿಗೆ ನೋಟಿಸ್!

Untitled design (17)

ನಟ ದರ್ಶನ್‌ ಪತ್ನಿ ವಿಜಯಲಕ್ಷ್ಮಿ ಮತ್ತು ನಟ ಧನ್ವೀರ್ ನಡುವಿನ ಜಟಾಪಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ಬೆಳವಣಿಗೆ ನಡೆದಿದೆ. ವಿಚಾರಣೆಗೆ ಹಾಜರಾಗಲು ಹೆಚ್ಚಿನ ಕಾಲಾವಕಾಶ ಕೋರಿ ಧನ್ವೀರ್ ಸಲ್ಲಿಸಿದ್ದ ಮನವಿಯನ್ನು ಪೊಲೀಸರು ಪುರಸ್ಕರಿಸಿದ್ದಾರೆ. ಹೀಗಾಗಿ ನವೆಂಬರ್ 12ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ಧನ್ವೀರ್‌ಗೆ ಪೊಲೀಸರು ಎರಡನೇ ನೋಟಿಸ್ ನೀಡಿದ್ದಾರೆ.

ವಿಜಯಲಕ್ಷ್ಮಿ ಮತ್ತು ಧನ್ವೀರ್ ನಡುವಿನ ವಿವಾದಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ಈ ಹಿಂದೆ ನೋಟಿಸ್ ನೀಡಿದ್ದರು. ಆದರೆ ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ನಿಗದಿತ ದಿನಾಂಕದಂದು ವಿಚಾರಣೆಗೆ ಹಾಜರಾಗಲು ಸಾಧ್ಯವಾಗುವುದಿಲ್ಲ ಎಂದು ಧನ್ವೀರ್ ಪೊಲೀಸರಿಗೆ ಪತ್ರ ಬರೆದಿದ್ದರು. ಹಬ್ಬದ ಕಾರಣದಿಂದಾಗಿ ಹೆಚ್ಚಿನ ಕಾಲಾವಕಾಶ ನೀಡುವಂತೆ ಮನವಿ ಮಾಡಿಕೊಂಡಿದ್ದರು.

ಧನ್ವೀರ್ ಅವರ ಮನವಿಯನ್ನು ಪರಿಗಣಿಸಿದ ಪೊಲೀಸರು ವಿಚಾರಣೆಗೆ ಹಾಜರಾಗಲು ಹೆಚ್ಚುವರಿ ಸಮಯ ನೀಡಿದ್ದಾರೆ. ಅದರಂತೆ ನವೆಂಬರ್ 11ರ ಬದಲಿಗೆ ನವೆಂಬರ್ 12ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ. ಈ ಮೂಲಕ ಧನ್ವೀರ್‌ಗೆ ಎರಡನೇ ನೋಟಿಸ್ ಜಾರಿ ಮಾಡಲಾಗಿದೆ.

ಜೈಲಿನ ವಿಡಿಯೋ ವೈರಲ್ ಪ್ರಕರಣದಲ್ಲೂ ಧನ್ವೀರ್‌ಗೆ ಸಂಕಷ್ಟ!

ಇನ್ನು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಕೈದಿಗಳಿಗೆ ರಾಜಾತಿಥ್ಯ ನೀಡಿದ ಆರೋಪಕ್ಕೆ ಸಂಬಂಧಿಸಿದ ವಿಡಿಯೋ ವೈರಲ್ ಪ್ರಕರಣದಲ್ಲೂ ನಟ ಧನ್ವೀರ್‌ಗೆ ಸಂಕಷ್ಟ ಎದುರಾಗಿದೆ. ಈ ವಿಡಿಯೋ ವೈರಲ್ ಮಾಡುವಲ್ಲಿ ಧನ್ವೀರ್ ಅವರ ಮೊಬೈಲ್ ಫೋನ್ ಬಳಕೆಯಾಗಿದೆ ಎಂಬುದಕ್ಕೆ ಮಹತ್ವದ ಸಾಕ್ಷ್ಯ ಲಭ್ಯವಾಗಿದೆ ಎನ್ನಲಾಗಿದೆ.

ಈ ಪ್ರಕರಣದ ತನಿಖೆ ನಡೆಸುತ್ತಿರುವ ಸಿಸಿಬಿ ಪೊಲೀಸರು ಈ ಹಿಂದೆ ಧನ್ವೀರ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಈ ವೇಳೆ ಅವರ ಮೊಬೈಲ್ ಫೋನ್ ಅನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಿದ್ದರು. ಆದರೆ ಪ್ರಾಥಮಿಕ ಪರಿಶೀಲನೆಯ ಸಂದರ್ಭದಲ್ಲಿ ಮೊಬೈಲ್‌ನಲ್ಲಿ ಯಾವುದೇ ವಿಡಿಯೋಗಳು ಪತ್ತೆಯಾಗಿರಲಿಲ್ಲ. ಹೀಗಾಗಿ ಅಳಿಸಲಾದ ಡೇಟಾವನ್ನು ಮರುಪಡೆಯಲು ಮೊಬೈಲ್ ಫೋನ್ ಅನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (FSL) ಕಳುಹಿಸಲಾಗಿತ್ತು.

ಇದೀಗ ಮೊಬೈಲ್‌ನಿಂದ ಅಳಿಸಲಾದ ಮಾಹಿತಿಯನ್ನು ಮರುಪಡೆಯುವ ಪ್ರಕ್ರಿಯೆಯ ವರದಿ ಸಿಸಿಬಿ ಪೊಲೀಸರ ಕೈ ಸೇರಿದೆ. ಈ ವರದಿಯಲ್ಲಿ ಧನ್ವೀರ್ ಅವರ ಮೊಬೈಲ್‌ನಿಂದಲೇ ಜೈಲಿನ ವಿಡಿಯೋ ವೈರಲ್ ಆಗಿರುವುದಕ್ಕೆ ಸಂಬಂಧಿಸಿದ ಸಾಕ್ಷ್ಯಗಳು ಲಭ್ಯವಾಗಿವೆ ಎಂದು ಹೇಳಲಾಗಿದೆ.

ಈ ಬೆಳವಣಿಗೆಯಿಂದ ತನಿಖೆಗೆ ಮತ್ತಷ್ಟು ವೇಗ ಸಿಕ್ಕಿದ್ದು, ಮೊಬೈಲ್ ರಿಟ್ರೀವ್ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿ ಬಂಧನ ವಾರಂಟ್ ಪಡೆಯಲು ಪೊಲೀಸರು ಮುಂದಾಗಿದ್ದಾರೆ ಎನ್ನಲಾಗಿದೆ.

ಒಂದೆಡೆ ವಿಜಯಲಕ್ಷ್ಮಿ ಪ್ರಕರಣದ ವಿಚಾರಣೆಗೆ ಎರಡನೇ ನೋಟಿಸ್, ಮತ್ತೊಂದೆಡೆ ಜೈಲಿನ ವಿಡಿಯೋ ವೈರಲ್ ಪ್ರಕರಣದ ತನಿಖೆ. ಹೀಗೆ ನಟ ಧನ್ವೀರ್‌ಗೆ ಸದ್ಯ ಎರಡು ವಿಚಾರಗಳು ಸಂಕಷ್ಟ ತಂದೊಡ್ಡಿವೆ.

Exit mobile version