ನಟ ಧನ್ವೀರ್ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಿದ ವಿಜಯಲಕ್ಷ್ಮಿ

Untitled Design 2026 11 02T130430.511

ಬೆಂಗಳೂರು: ನಟ ದರ್ಶನ್ ಕುಟುಂಬಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿದ್ದ ವಾಕ್ಸಮರ ಇದೀಗ ನ್ಯಾಯಾಲಯದ ಅಂಗಳ ತಲುಪಿದೆ. ನಟ ಧನ್ವೀರ್ ವಿರುದ್ಧ ದರ್ಶನ್ ಪತ್ನಿ ವಿಜಯಲಕ್ಷ್ಮಿ ದರ್ಶನ್ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.

ಧನ್ವೀರ್ ನೀಡಿರುವ ಹೇಳಿಕೆಗಳಿಂದ ತಮ್ಮ ಗೌರವ ಮತ್ತು ಪ್ರತಿಷ್ಠೆಗೆ ಧಕ್ಕೆಯಾಗಿದೆ ಎಂದು ಆರೋಪಿಸಿರುವ ವಿಜಯಲಕ್ಷ್ಮಿ, ಬೆಂಗಳೂರಿನ ನ್ಯಾಯಾಲಯದಲ್ಲಿ ಖಾಸಗಿ ಅಪರಾಧ ದೂರು ಸಲ್ಲಿಸಿದ್ದಾರೆ. ಅಕ್ಟೋಬರ್ 31, 2026ರಂದು ಈ ದೂರು ಸಲ್ಲಿಕೆಯಾಗಿದ್ದು, ಪ್ರಕರಣದ ಮುಂದಿನ ವಿಚಾರಣೆಯನ್ನು ನವೆಂಬರ್ 30ಕ್ಕೆ ನ್ಯಾಯಾಲಯ ನಿಗದಿಪಡಿಸಿದೆ.

ನಟ ದರ್ಶನ್ ಅವರ ಕುಟುಂಬಕ್ಕೆ ಸಂಬಂಧಿಸಿದ ವಿಚಾರಗಳು ಇತ್ತೀಚಿನ ದಿನಗಳಲ್ಲಿ ಸಿನಿಮಾ ವಲಯ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದವು. ಈ ನಡುವೆ ನಟ ಧನ್ವೀರ್ ವಿರುದ್ಧ ವಿಜಯಲಕ್ಷ್ಮಿ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ.

ಧನ್ವೀರ್ ವಿರುದ್ಧ ಕ್ರಿಮಿನಲ್ ಮಾನನಷ್ಟ ದೂರು

ಬೆಂಗಳೂರಿನ 37ನೇ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ (CCH-37)ದಲ್ಲಿ ವಿಜಯಲಕ್ಷ್ಮಿ ಖಾಸಗಿ ಅಪರಾಧ ದೂರು ದಾಖಲಿಸಿದ್ದಾರೆ. ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS) ಸೆಕ್ಷನ್ 222 ಮತ್ತು 210ರ ಅಡಿಯಲ್ಲಿ ಈ ದೂರು ಸಲ್ಲಿಸಲಾಗಿದೆ ಎಂದು ದೂರಿನ ದಾಖಲೆಗಳಲ್ಲಿ ಉಲ್ಲೇಖಿಸಲಾಗಿದೆ.

ನಟ ಧನ್ವೀರ್ ತಮ್ಮ ವಿರುದ್ಧ ಮಾನಹಾನಿಕರ ಹೇಳಿಕೆಗಳನ್ನು ನೀಡಿದ್ದಾರೆ ಎಂಬುದು ವಿಜಯಲಕ್ಷ್ಮಿ ಅವರ ಪ್ರಮುಖ ಆರೋಪವಾಗಿದೆ. ಧ್ವನಿಮುದ್ರಿಕೆಗಳು, ವಿವಿಧ ದಾಖಲೆಗಳ ಪ್ರತಿಗಳು ಹಾಗೂ ಮಾಧ್ಯಮಗಳಲ್ಲಿ ಪ್ರಸಾರವಾದ ಹೇಳಿಕೆಗಳ ಮೂಲಕ ತಮ್ಮ ಘನತೆ ಮತ್ತು ಗೌರವಕ್ಕೆ ಧಕ್ಕೆಯಾಗಿದೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

ಈ ಸಂಬಂಧ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 356(2)ರ ಅಡಿಯಲ್ಲಿ ಧನ್ವೀರ್ ವಿರುದ್ಧ ಕಾನೂನು ಕ್ರಮ ಕೈಗೊಂಡು ಶಿಕ್ಷೆ ವಿಧಿಸುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.

ಆಡಿಯೋ, ದಾಖಲೆಗಳನ್ನು ಸಲ್ಲಿಸಲು ಸಿದ್ಧತೆ

ತಮ್ಮ ಆರೋಪಗಳಿಗೆ ಸಂಬಂಧಿಸಿದಂತೆ ಅಗತ್ಯ ಸಾಕ್ಷ್ಯಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲು ವಿಜಯಲಕ್ಷ್ಮಿ ಸಿದ್ಧರಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಎಲೆಕ್ಟ್ರಾನಿಕ್ ದಾಖಲೆಗಳು, ಆಡಿಯೋ ರೆಕಾರ್ಡಿಂಗ್‌ಗಳು ಹಾಗೂ ಇತರ ಸಂಬಂಧಿತ ಸಾಕ್ಷ್ಯಗಳನ್ನು ನ್ಯಾಯಾಲಯಕ್ಕೆ ಸಲ್ಲಿಸುವುದಾಗಿ ಅವರು ತಿಳಿಸಿದ್ದಾರೆ.

ತಮ್ಮ ವಿರುದ್ಧ ನಡೆದಿರುವ ಮಾನಹಾನಿಕರ ಹೇಳಿಕೆಗಳ ಕುರಿತು ನ್ಯಾಯಾಲಯ ಸೂಕ್ತ ವಿಚಾರಣೆ ನಡೆಸಬೇಕು ಎಂಬುದು ಅವರ ಮನವಿ ಮಾಡಿದ್ದಾರೆ. 

ಧನ್ವೀರ್‌ಗೆ ಸಮನ್ಸ್ ಜಾರಿಗೊಳಿಸಲು ಮನವಿ

ವಿಜಯಲಕ್ಷ್ಮಿ ಸಲ್ಲಿಸಿರುವ ಖಾಸಗಿ ದೂರನ್ನು ಕಾನೂನು ಪ್ರಕಾರ ಪರಿಗಣಿಸಿ ಮುಂದಿನ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿದೆ. BNSS ಸೆಕ್ಷನ್ 222(1)ರ ಅಡಿಯಲ್ಲಿ ನೊಂದ ವ್ಯಕ್ತಿಯ ಖಾಸಗಿ ದೂರಾಗಿ ಪ್ರಕರಣವನ್ನು ಪರಿಗಣಿಸಬೇಕು ಎಂದು ಕೋರಲಾಗಿದೆ.

ಇದರ ಜೊತೆಗೆ BNSS ಸೆಕ್ಷನ್ 223 ಹಾಗೂ ಸಂಬಂಧಿತ ಕಾನೂನು ವಿಧಿಗಳ ಅಡಿಯಲ್ಲಿ ಮುಂದಿನ ವಿಚಾರಣೆ ನಡೆಸುವಂತೆ ಮನವಿ ಮಾಡಲಾಗಿದೆ. 

ವಿಜಯಲಕ್ಷ್ಮಿ ಪರ ವಕೀಲರಿಂದ ದೂರು ಸಲ್ಲಿಕೆ

ವಿಜಯಲಕ್ಷ್ಮಿ ಪರವಾಗಿ ವಕೀಲರಾದ ವನಿತು ಆರ್. ಅವರ ಹೆಸರು ದೂರಿನ ದಾಖಲೆಗಳಲ್ಲಿ ಉಲ್ಲೇಖವಾಗಿದೆ. ಮತ್ತೊಂದೆಡೆ, ವಕೀಲ ರಂಗನಾಥ್ ರೆಡ್ಡಿ ಅವರ ಮೂಲಕವೂ ಕ್ರಿಮಿನಲ್ ಮಾನನಷ್ಟ ದೂರು ದಾಖಲಿಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ನ್ಯಾಯಾಲಯವು ಪ್ರಕರಣದ ಮುಂದಿನ ವಿಚಾರಣೆಯನ್ನು ನವೆಂಬರ್ 30, 2026ಕ್ಕೆ ನಿಗದಿಪಡಿಸಿದೆ.

Exit mobile version