ದಳಪತಿ ದರ್ಬಾರ್..ತಮಿಳು ಮಣ್ಣಿನ ಹೊಸ ಅಧಿಪತಿ..!

120 ಶಾಸಕರ ಬೆಂಬಲದೊಂದಿಗೆ ಟಿವಿಕೆ ಸರ್ಕಾರ ರಚನೆ..!

Untitled design 2026 05 10T173406.800

ಬೆಳ್ಳಿತೆರೆಯ ‘ದಳಪತಿ’ ಈಗ ತಮಿಳು ನಾಡಿನ ‘ಅಧಿಪತಿ’. 118 ವಿಘ್ನಗಳು, ನೂರಾರು ಸವಾಲುಗಳ ನಡುವೆ ವಿಜಯ್ ಎಂಬ ಅಶ್ವಮೇಧ ಯಾಗ ಇಂದು ಸಿಎಂ ಗದ್ದುಗೆಯ ಮೇಲೆ ವಿಜಯ ಪತಾಕೆ ನೆಟ್ಟಿದೆ. ಆದರೆ, ಈ ಅದ್ಧೂರಿ ಪದಗ್ರಹಣ ಸಮಾರಂಭದಲ್ಲಿ ಹೈಲೈಟ್ ಆಗಿದ್ದು ಮಾತ್ರ ನಟಿ ತ್ರಿಶಾ ಕೃಷ್ಣನ್.  ವಿಜಯ್ ಪ್ರಮಾಣವಚನ ಸ್ವೀಕರಿಸುತ್ತಿದ್ದರೆ,  ಇಡೀ ಜಗತ್ತಿನ ಕಣ್ಣು ಮಾತ್ರ ತ್ರಿಶಾ ಮೇಲಿತ್ತು. ಹೇಗಿತ್ತು ಸಿಎಂ ವಿಜಯ್ ವಿಜಯೋತ್ಸವ.. ಅನ್ನೋದರ ಕಂಪ್ಲೀಟ್ ಸ್ಟೋರಿ ಇಲ್ಲಿದೆ ನೋಡಿ…

ತಮಿಳುನಾಡು ರಾಜಕೀಯದಲ್ಲಿ ಸರಿಸುಮಾರು 6 ದಶಕಗಳ ಕಾಲ ಆಳ್ವಿಕೆ ನಡೆಸಿದ್ದ ಡಿಎಂಕೆ ಮತ್ತು ಎಐಡಿಎಂಕೆ ಘಟಾನುಘಟಿಗಳ ಕೋಟೆಯನ್ನು ಧೂಳೀಪಟ ಮಾಡಿ,ಇವತ್ತು ‘ತಮಿಳಗ ವೆಟ್ರಿ ಕಳಗಂ’ ಸಾಮ್ರಾಜ್ಯ ಸ್ಥಾಪನೆಯಾಗಿದೆ. 118ಕ್ಕೂ ಹೆಚ್ಚು ರಾಜಕೀಯ ವಿಘ್ನಗಳು, ಚುನಾವಣಾ ಆಯೋಗದ ಕಿರಿಕಿರಿ, ವಿರೋಧ ಪಕ್ಷಗಳ ಟೀಕೆಗಳೆಲ್ಲವನ್ನೂ ಮೆಟ್ಟಿ ನಿಂತು ‘ತಮಿಳಗ ವೆಟ್ರಿ ಕಳಗಂ’ ಮುಖ್ಯಸ್ಥ ವಿಜಯ್ ಇಂದು ತಮಿಳುನಾಡಿನ 13ನೇ ಮುಖ್ಯಮಂತ್ರಿಯಾಗಿ ಪಟ್ಟಾಭಿಷೇಕ ಮಾಡಿಸಿಕೊಂಡಿದ್ದಾರೆ. ಈ ರೋಚಕ ಗೆಲುವಿನ ಬೆನ್ನಲ್ಲೇ ಚೆನ್ನೈ ಇವತ್ತು ಅಕ್ಷರಶಃ ಕೇಸರಿ-ಬಿಳಿ-ಹಸಿರು ಬಾವುಟಗಳ ಬಣ್ಣದಲ್ಲಿ ಮಿಂದೆದ್ದಿದೆ.

ನೆಹರು ಮೈದಾನದ ಆ ವೇದಿಕೆ ಇವತ್ತು ಸಿನಿಮಾ ಸೆಟ್‌ನಂತೆ ಕಂಗೊಳಿಸುತ್ತಿತ್ತು. ಕೈಯಲ್ಲಿ ಪೇಪರ್ ಹಿಡಿದು ತಡಕಾಡುವ ನಾಯಕರ ನಡುವೆ, ಯಾವುದೇ ಪೇಪರ್ ನೋಡದೆ ನೇರವಾಗಿ ವೇದಿಕೆದತ್ತ ನಡೆದು ಬಂದ ವಿಜಯ್, “ಸಿ. ಜೋಸೆಫ್ ವಿಜಯ್ ಎಂಬ ನಾನು…” ಎಂದು ಗಂಭೀರ ಧ್ವನಿಯಲ್ಲಿ ಸಂವಿಧಾನದ ಮೇಲೆ ಪ್ರಮಾಣ ಮಾಡಿದಾಗ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ಅಭಿಮಾನಿಗಳ ಶಿಳ್ಳೆ, ಚಪ್ಪಾಳೆ ಮುಗಿಲು ಮುಟ್ಟಿತ್ತು. ತಮ್ಮದೇ ಸಿನಿಮಾ ಶೈಲಿಯಲ್ಲಿ ಪ್ರಮಾಣವಚನ ಸ್ವೀಕರಿಸಿದ ವಿಜಯ್ ಅವರ ಆ ಗಂಭೀರ ನೋಟ, ಆ ಕಂಚಿನ ಕಂಠದ ಧ್ವನಿ ಮೈದಾನದ ಅಣು ಅಣುವಿನಲ್ಲೂ ಕಂಪನ ಸೃಷ್ಟಿಸಿತ್ತು. 120 ಶಾಸಕರ ಬೆಂಬಲದೊಂದಿಗೆ ‘ದಳಪತಿ’ ಈಗ ಅಧಿಕೃತವಾಗಿ ತಮಿಳುನಾಡಿನ ಅಧಿಪತಿ.

ವೇದಿಕೆಯ ಮೇಲೆ ವಿಜಯ್ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸುತ್ತಿದ್ದರೆ, ಕ್ಯಾಮೆರಾಗಳು ತಿರುಗಿದ್ದು ಮಾತ್ರ ನಟಿ ತ್ರಿಶಾ ಕೃಷ್ಣನ್ ಕಡೆಗೆ. ಹೌದು, ಈ ಐತಿಹಾಸಿಕ ಸಮಾರಂಭದ ಅತಿ ದೊಡ್ಡ ಹೈಲೈಟ್ ಅಂದ್ರೆ ಅದು ತ್ರಿಶಾ. ಮೊದಲಿನಿಂದಲೂ ವಿಜಯ್ ಹಾಗೂ ತ್ರಿಶಾ ಸ್ನೇಹದ ಬಗ್ಗೆ ಹತ್ತಾರು ಗುಸುಗುಸು ಸುದ್ದಿಗಳು ಹರಿದಾಡುತ್ತಿದ್ದವು. ಅವೆಲ್ಲವನ್ನೂ ಲೆಕ್ಕಿಸದೆ ತ್ರಿಶಾ ಇವತ್ತು ದಳಪತಿಯ ಪಟ್ಟಾಭಿಷೇಕಕ್ಕೆ ಸಾಕ್ಷಿಯಾಗಿದ್ದು ವಿಶೇಷವಾಗಿತ್ತು.

ಸಂಪ್ರದಾಯಬದ್ಧ ಕಾಂಜೀವರಂ ರೇಷ್ಮೆ ಸೀರೆಯಲ್ಲಿ ತ್ರಿಶಾ ಪಾರಂಪರಿಕ ಲುಕ್‌ನಲ್ಲಿ ಕಂಗೊಳಿಸಿದರು. ಸೀರೆ ಧರಿಸಿ ಮೈದಾನಕ್ಕೆ ಎಂಟ್ರಿ ಕೊಡುತ್ತಿದ್ದಂತೆ ಅಭಿಮಾನಿಗಳ ಕಿರುಚಾಟ ವಿಜಯ್ ಅವರಿಗಿಂತ ತ್ರಿಶಾಗೆ ಹೆಚ್ಚಿತ್ತು ಎನ್ನಬಹುದು. ಪ್ರತಿಯೊಂದು ಕ್ಯಾಮರಾ ಆಂಗಲ್ ಕೂಡ ಪದೇ ಪದೇ ತ್ರಿಶಾ ಅವರ ರಿಯಾಕ್ಷನ್ ಸೆರೆಹಿಡಿಯಲು ಹಾತೊರೆಯುತ್ತಿತ್ತು. ಇದು ಪದಗ್ರಹಣವೋ ಅಥವಾ ಸಿನಿಮಾ ಅವಾರ್ಡ್ ಫಂಕ್ಷನ್ ಎನ್ನುವಂತಿತ್ತು ಅಲ್ಲಿನ ವಾತಾವರಣ ಸೃಷ್ಟಿಯಾಗಿತ್ತು.

ಅಂದಹಾಗೆ ರಾಜಕೀಯವಾಗಿ ಈ ಸಮಾರಂಭ ಅತ್ಯಂತ ಮಹತ್ವ ಪಡೆದುಕೊಂಡಿದ್ದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಉಪಸ್ಥಿತಿಯಿಂದ. ವಿಜಯ್ ಜೊತೆ ರಾಹುಲ್ ಆಪ್ತವಾಗಿ ಮಾತನಾಡಿದ್ದು ಮತ್ತು ಶುಭ ಹಾರೈಸಿದ್ದು ರಾಷ್ಟ್ರೀಯ ಮಟ್ಟದಲ್ಲಿ ಟಿವಿಕೆ ಪಕ್ಷವು ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳಲಿದೆಯೇ ಎಂಬ ಕುತೂಹಲ ಮೂಡಿಸಿದೆ. ಇದು ತಮಿಳುನಾಡಿನ ಭವಿಷ್ಯದ ರಾಜಕೀಯ ಸಮೀಕರಣಗಳನ್ನು ಬದಲಿಸುವ ಮುನ್ಸೂಚನೆಯಾಗಿದೆ.

ವಿಜಯ್ ಅವರೊಂದಿಗೆ 9 ಮಂದಿ ಶಾಸಕರು ಸಚಿವರಾಗಿ ಅಧಿಕಾರ ಸ್ವೀಕರಿಸಿದರು. ಇದರಲ್ಲಿ ಅನುಭವಿಗಳು ಮತ್ತು ಯುವ ಮುಖಗಳ ಮಿಶ್ರಣವಿದೆ. ಸಿನಿಮಾ ರಂಗದ ಕೆಲವು ಪರಿಚಿತ ಮುಖಗಳು ಕೂಡ ಈ ತಂಡದಲ್ಲಿರುವುದು ವಿಶೇಷ. ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಬಜೆಟ್ ನೀಡುವುದಾಗಿ ವಿಜಯ್ ಮೊದಲ ಕ್ಯಾಬಿನೆಟ್ ನಿರ್ಧಾರ ಪ್ರಕಟಿಸುವ ಭರವಸೆ ನೀಡಿದ್ದಾರೆ.

ವಿಜಯ್ ಮತ್ತು ತ್ರಿಶಾ ಸಂಬಂಧದ ಬಗ್ಗೆ ಹರಿದಾಡುತ್ತಿದ್ದ ಸುದ್ದಿಗಳು ಈಗ ಮತ್ತಷ್ಟು ವೇಗ ಪಡೆದುಕೊಂಡಿವೆ. ವಿಜಯ್ ಅವರ ಸಿಎಂ ಪಟ್ಟಾಭಿಷೇಕದಂತಹ ಐತಿಹಾಸಿಕ ಕ್ಷಣದಲ್ಲಿ ತ್ರಿಶಾ ಇಷ್ಟೊಂದು ಸಕ್ರಿಯವಾಗಿ ಭಾಗವಹಿಸಿದ್ದು ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ತ್ರಿಶಾ ಮುಂದಿನ ದಿನಗಳಲ್ಲಿ ಟಿವಿಕೆ ಪಕ್ಷ ಸೇರಿ ಸಕ್ರಿಯ ರಾಜಕಾರಣಕ್ಕೆ ಬರುತ್ತಾರಾ ಎಂಬ ಗುಸುಗುಸು ಕೂಡ ಈಗ ಜೋರಾಗಿದೆ.

ಅಧಿಕಾರ ಸ್ವೀಕರಿಸಿದ ಕೂಡಲೇ ಮಾತನಾಡಿದ ವಿಜಯ್, “ನಾನು ಕೇವಲ ಸಿಎಂ ಅಲ್ಲ, ನಿಮ್ಮ ಮನೆಯ ಮಗ” ಎನ್ನುವ ಮೂಲಕ ಜನರನ್ನು ಭಾವನಾತ್ಮಕವಾಗಿ ಸೆಳೆದರು. ತಮಿಳುನಾಡಿನಲ್ಲಿ ದಶಕಗಳಿಂದ ಬೇರೂರಿರುವ ಭ್ರಷ್ಟಾಚಾರವನ್ನು ಕಿತ್ತೊಗೆಯುವುದೇ ನನ್ನ ಮೊದಲ  ಗುರಿ ಎಂದು ದಳಪತಿ ಘೋಷಿಸಿದರು.

ಒಟ್ಟಿನಲ್ಲಿ, ವಿಜಯ್ ಅವರ ಈ  ವಿಜಯೋತ್ಸವಕ್ಕೆ ತ್ರಿಶಾ ಅವರ ಗ್ಲಾಮರ್ ಸಾಟಿಯಿಲ್ಲದ ಮೆರುಗು ನೀಡಿದೆ. ಆದರೆ ಈಗ ವಿಜಯ್ ಮುಂದಿರುವುದು ಕೇವಲ ಸಿನಿಮಾ ಸ್ಕ್ರಿಪ್ಟ್ ಅಲ್ಲ, ಜನರ ನೈಜ ಸಮಸ್ಯೆಗಳ ಬೆಟ್ಟ. ವಿಜಯ್ ಅವರ ರಾಜಾಧಿರಾಜ ಸ್ಟೈಲ್ ಪದಗ್ರಹಣ ಮತ್ತು ಅಭಿಮಾನಿಗಳ ಅಭೂತಪೂರ್ವ ಬೆಂಬಲ ತಮಿಳುನಾಡು ರಾಜಕೀಯದಲ್ಲಿ ಹೊಸ ಪರ್ವ ಆರಂಭಿಸಿದೆ. ಸಿನಿಮಾ ತೆರೆಯ ಮೇಲಿನ ನಾಯಕ ಈಗ ನಿಜ ಜೀವನದ ಹೀರೋ ಆಗಿ ಯಾವ ರೀತಿ ರಾಜ್ಯದಲ್ಲಿ ಬದಲಾವಣೆ ತರುತ್ತಾರೆ ಅನ್ನೋದನ್ನು ನೋಡಲು ಇಡೀ ಭಾರತವೇ ಕಾತರದಿಂದ ಕಾಯುತ್ತಿದೆ.

ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್

Exit mobile version