ರಾಜಕೀಯಕ್ಕಾಗಿ ತಂದೆ-ತಾಯಿ ಮೇಲೆಯೇ ದೂರು ನೀಡಿದ್ದ ವಿಜಯ್!

BeFunky collage (14)

ತಮಿಳುನಾಡು ರಾಜಕೀಯದಲ್ಲಿ ದಳಪತಿ ವಿಜಯ್ ಅವರ ಟಿವಿಕೆ ಪಕ್ಷ 108 ಸೀಟುಗಳ ಭರ್ಜರಿ ಜಯ ಸಾಧಿಸಿದ್ದು, ಸಿಎಂ ಪಟ್ಟಕ್ಕೆ ಕೇವಲ ಕೆಲವು ಸೀಟುಗಳ ಅಂತರವಿದೆ. ಪಕ್ಷ ಕಟ್ಟಿ ಕೇವಲ ಎರಡು ವರ್ಷಗಳಲ್ಲಿ ಈ ಸಾಧನೆ ಅಭಿಮಾನಿಗಳಲ್ಲಿ ಭಾರೀ ಖುಷಿ ತಂದಿದೆ. ಆದರೆ ಆರು ವರ್ಷಗಳ ಹಿಂದೆ ಇದೇ ವಿಜಯ್ ಅವರು ತಮ್ಮ ಸ್ವಂತ ತಂದೆ-ತಾಯಿಯ ವಿರುದ್ಧ ನ್ಯಾಯಾಲಯಕ್ಕೆ ಹೋಗಿದ್ದ ಘಟನೆ ಈಗ ಮತ್ತೆ ಚರ್ಚೆಗೆ ಬಂದಿದೆ.

ವಿಜಯ್ ಅವರ ತಂದೆ ಎಸ್.ಎ. ಚಂದ್ರಶೇಖರ್ ತಮಿಳು ಚಿತ್ರರಂಗದ ಪ್ರಖ್ಯಾತ ನಿರ್ದೇಶಕ, ನಿರ್ಮಾಪಕ ಮತ್ತು ನಟ. ಮಗ ವಿಜಯ್ ಸ್ಟಾರ್ ಆಗುವಲ್ಲಿ ತಂದೆಯ ಪಾತ್ರ ಬಹಳ ದೊಡ್ಡದು. 2020ರಲ್ಲಿ ಎಸ್.ಎ. ಚಂದ್ರಶೇಖರ್ ಅವರು ‘ಆಲ್ ಇಂಡಿಯಾ ದಳಪತಿ ವಿಜಯ್ ಮಕ್ಕಳ್ ಇಯಕ್ಕಂ’ ಎಂಬ ರಾಜಕೀಯ ಪಕ್ಷವನ್ನು ನೋಂದಣಿ ಮಾಡಿಸಿದ್ದರು. ಈ ಪಕ್ಷದಲ್ಲಿ ವಿಜಯ್ ಅವರ ತಾಯಿ ಶೋಭಾ ಚಂದ್ರಶೇಖರ್ ಸಹ ಆಫೀಸ್ ಬೇರರ್ ಆಗಿದ್ದರು.

ಆದರೆ ಇದು ವಿಜಯ್ ಅವರಿಗೆ ಸರಿ ಬರಲಿಲ್ಲ. ಬಹಿರಂಗ ಪ್ರಕಟಣೆ ಹೊರಡಿಸಿದ ವಿಜಯ್, ತಮ್ಮ ತಂದೆ ಕಟ್ಟಿದ ಪಕ್ಷಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದರು. ನಂತರ ಚೆನ್ನೈ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ, ತಮ್ಮ ಹೆಸರು ಮತ್ತು ಚಿತ್ರವನ್ನು ಪಕ್ಷದಲ್ಲಿ ಬಳಸದಂತೆ ಆದೇಶ ಕೊಡುವಂತೆ ಮನವಿ ಮಾಡಿದ್ದರು. ನ್ಯಾಯಾಲಯವೂ ವಿಜಯ್ ಪರವಾಗಿ ತೀರ್ಪು ನೀಡಿತ್ತು. ಇದರ ನಂತರ ಎಸ್.ಎ. ಚಂದ್ರಶೇಖರ್ ಅವರು ಅಪಿಡವಿಟ್ ಸಲ್ಲಿಸಿ, ವಿಜಯ್ ಅವರ ಹೆಸರು ಮತ್ತು ಚಿತ್ರ ಬಳಸುವುದಿಲ್ಲ ಎಂದು ಭರವಸೆ ನೀಡಿದ್ದರು. 2021ರಲ್ಲಿ ಆ ಪಕ್ಷವನ್ನು ರದ್ದುಗೊಳಿಸಲಾಗಿತ್ತು.

ಈಗಿನ ಸ್ಥಿತಿ ಆರು ವರ್ಷಗಳ ನಂತರ ವಿಜಯ್ ಸ್ವತಃ ತಮ್ಮದೇ ಪಕ್ಷವನ್ನು ಕಟ್ಟಿ ಅದ್ಭುತ ಯಶಸ್ಸು ಸಾಧಿಸಿದ್ದಾರೆ. TVKಗೆ ಈಗ ಕೇವಲ 5 ಸೀಟುಗಳ ಅಗತ್ಯವಿದೆ. ಸಿಎಂ ಪಟ್ಟಕ್ಕೆ ತುಂಬಾ ಹತ್ತಿರ ಬಂದಿರುವ ವಿಜಯ್ ಅವರ ರಾಜಕೀಯ ಯಾತ್ರೆಯಲ್ಲಿ ಈ ಹಳೆಯ ಘಟನೆ ಈಗ ಮತ್ತೆ ಸುದ್ದಿಯಾಗುತ್ತಿದೆ.

Exit mobile version