ತಮಿಳುನಾಡು ಸಿಎಂ ವಿಜಯ್ ವಿಚ್ಛೇದನ ಪ್ರಕರಣ: ವಿಚಾರಣೆ ಮುಂದೂಡಿದ ಕೋರ್ಟ್

1

ತಮಿಳುನಾಡು ಮುಖ್ಯಮಂತ್ರಿ ಹಾಗೂ ಖ್ಯಾತ ನಟ ದಳಪತಿ ವಿಜಯ್ ಮತ್ತು ಅವರ ಪತ್ನಿ ಸಂಗೀತಾ ಸ್ವರ್ಣಲಿಂಗಂ ನಡುವಿನ ವಿಚ್ಛೇದನ ಪ್ರಕರಣದ ವಿಚಾರಣೆಯನ್ನು ಚೆಂಗಲ್ಪಟ್ಟು ಮಹಿಳಾ ನ್ಯಾಯಾಲಯವು ಆಗಸ್ಟ್ 7ಕ್ಕೆ ಮುಂದೂಡಿದೆ. ಜೂನ್ 15ರಂದು ನ್ಯಾಯಾಲಯದ ಸೂಚನೆಯಂತೆ ಇಬ್ಬರೂ ಖುದ್ದಾಗಿ ಹಾಜರಾಗಿದ್ದರು. ಆದರೆ ಯಾವುದೇ ಸಂಧಾನ ಸಾಧ್ಯವಾಗದೆ ವಿಚಾರಣೆ ಮುಂದೂಡಲ್ಪಟ್ಟಿದೆ. 

ಇದಕ್ಕೂ ಮುನ್ನ ಏಪ್ರಿಲ್ 2೦ರಂದು ನಡೆದಿದ್ದ ಮೊದಲ ವಿಚಾರಣೆಗೆ ವಿಜಯ್ ಮತ್ತು ಸಂಗೀತಾ ಇಬ್ಬರೂ ಗೈರಾಗಿದ್ದರು. ಕೇವಲ ಅವರ ಪರ ವಕೀಲರು ಮಾತ್ರ ಹಾಜರಾಗಿದ್ದರು. ಸೆಲೆಬ್ರಿಟಿಗಳಾಗಿರುವುದರಿಂದ ಭದ್ರತೆ ಸಮಸ್ಯೆಗಳನ್ನು ಉಲ್ಲೇಖಿಸಿ ಆನ್‌ಲೈನ್ ಮೂಲಕ ಹಾಜರಾಗಲು ಇಬ್ಬರ ಪರ ವಕೀಲರು ಅನುಮತಿ ಕೋರಿದ್ದರು. ಆದರೆ ನ್ಯಾಯಾಲಯವು ಈ ಮನವಿಯನ್ನು ತಿರಸ್ಕರಿಸಿ, ಜೂನ್ 15ರ ವಿಚಾರಣೆಗೆ ಇಬ್ಬರೂ ಖುದ್ದಾಗಿ ನ್ಯಾಯಾಲಯಕ್ಕೆ ಹಾಜರಿರಬೇಕು ಎಂದು ಆದೇಶ ನೀಡಿತ್ತು. ಅದರಂತೆ ಇಂದು  ಇಬ್ಬರೂ ಹಾಜರಾಗಿದ್ದರು. ಮುಂದಿನ ವಿಚಾರಣೆ ಆಗಸ್ಟ್. 7 ರಂದು ನಡೆಯಲಿದೆ.

ವಿಜಯ್ ಪತ್ನಿ ಸಂಗೀತಾ ಫೆಬ್ರವರಿಯಲ್ಲಿ ಸಲ್ಲಿಸಿದ್ದ ವಿಚ್ಛೇದನ ಅರ್ಜಿಯ ಹಿನ್ನೆಲೆಯಲ್ಲಿ ಈ ಕಾನೂನು ಪ್ರಕ್ರಿಯೆಗಳು ನಡೆಯುತ್ತಿದ್ದು, ಅರ್ಜಿಯಲ್ಲಿ ಅವರು ವಿಜಯ್ ಅವರಿಗೆ ವಿವಾಹೇತರ ಸಂಬಂಧವಿದೆ ಎಂದು ಆರೋಪಿಸಿದ್ದರು.‌ 2021ರ ಏಪ್ರಿಲ್ ನಲ್ಲಿ ವಿಜಯ್ ಅವರು ಸಹ ನಟಿಯೊಬ್ಬರೊಂದಿಗೆ ಸಂಬಂಧ ಹೊಂದಿರುವುದು ತಿಳಿದುಬಂದಿತ್ತು. ಆ ನಟಿಯ ಹೆಸರನ್ನು ಅರ್ಜಿಯಲ್ಲಿ ಬಹಿರಂಗಪಡಿಸದಿದ್ದರೂ, ಸಾಮಾಜಿಕ ಮಾಧ್ಯಮಗಳಲ್ಲಿ ತ್ರಿಶಾ ಕೃಷ್ಣನ್ ಎಂಬ ಹೆಸರು ಚರ್ಚೆಯಾಗುತ್ತಿದೆ. ವಿಜಯ್ ಮತ್ತು ಸಂಗೀತಾ 1998ರಲ್ಲಿ ಯುಕೆನಲ್ಲಿ ಕಾನೂನುಬದ್ಧವಾಗಿ ವಿವಾಹ ನೋಂದಣಿ ಮಾಡಿಕೊಂಡಿದ್ದರು. ನಂತರ 1999ರಲ್ಲಿ ಚೆನ್ನೈನಲ್ಲಿ ಸಾಂಪ್ರದಾಯಿಕವಾಗಿ ವಿವಾಹವಾಗಿದ್ದರು.

ಇನ್ನೊಂದೆಡೆ ವಿಜಯ್ ಅವರ ‘ತಮಿಳಗ ವೆಟ್ರಿ ಕಳಗಂ’ ಪಕ್ಷವು ಈಗ ತಮಿಳುನಾಡಿನಲ್ಲಿ ಹೊಸ ಸಂಚಲನ ಮಾಡಿದೆ. ಕಳೆದ 60 ವರ್ಷಗಳಿಂದ ತಮಿಳುನಾಡನ್ನು ಆಳುತ್ತಿದ್ದ DMK ಮತ್ತು AIADMK ಎಂಬ ಎರಡು ಪ್ರಮುಖ ದ್ರಾವಿಡ ಪಕ್ಷಗಳ ವಿರುದ್ಧ ಐತಿಹಾಸಿಕ ಜಯ ಸಾಧಿಸಿದೆ. ಈ ಗೆಲುವಿನ ಹಿನ್ನೆಲೆಯಲ್ಲಿ ನಟ ವಿಜಯ್ ಅವರು ಮೇ 10 ರಂದು ತಮಿಳುನಾಡಿನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ಈ ಸಂದರ್ಭದಲ್ಲೇ ದಾಂಪತ್ಯ ಜೀವನದ ಕಾರಣಕ್ಕಾಗಿ ಕೋರ್ಟ್‌ಗೆ ಹೋಗಬೇಕಾದ ಅನಿವಾರ್ಯತೆ ಎದುರಾಗಿದೆ.

Exit mobile version