ಬೆಂಗಳೂರು: ಸ್ಯಾಂಡಲ್‌ವುಡ್ ನಟಿ ಕೃಷಿ ತಾಪಂಡ ಅವರ ನಿವಾಸದಲ್ಲಿ ಉದ್ಯಮಿ ವೈಶಾಖ್ (45) ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಜರಾಜೇಶ್ವರಿ ನಗರದಲ್ಲಿ ಬೆಳಕಿಗೆ ಬಂದಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ. ಮೃತಪಟ್ಟ ವ್ಯಕ್ತಿಯನ್ನು ವೈಶಾಖ್ (45) ಎಂದು ಗುರುತಿಸಲಾಗಿದೆ.
ಮೃತ ವೈಶಾಖ್, ನಟಿ ಕೃಷಿ ತಾಪಂಡ ಅವರ ಆಪ್ತ ಸ್ನೇಹಿತರಾಗಿದ್ದರು ಎಂದು ತಿಳಿದುಬಂದಿದೆ. ಅವರು ಆಗಾಗ ನಟಿಯ ನಿವಾಸಕ್ಕೆ ಭೇಟಿ ನೀಡುತ್ತಿದ್ದರು ಎನ್ನಲಾಗಿದೆ. ಜೂನ್ 24ರಂದು ಸಹ ವೈಶಾಖ್ ಅವರು ಕೃಷಿ ತಾಪಂಡ ಅವರ ಮನೆಗೆ ಬಂದಿದ್ದು, ಬಳಿಕ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಪತ್ತೆಯಾಗಿದೆ.
ಘಟನೆ ಸಂಭವಿಸಿದ ವೇಳೆ ಮನೆಯಲ್ಲಿ ಯಾರೂ ಇರಲಿಲ್ಲ ಎಂದು ತಿಳಿದುಬಂದಿದೆ. ವೈಶಾಖ್ ಅವರು ಏಕಾಏಕಿ ಈ ನಿರ್ಧಾರ ಕೈಗೊಂಡಿರುವುದಕ್ಕೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಆತ್ಮಹತ್ಯೆ ನಡೆದ ಸ್ಥಳದಲ್ಲಿ ಡೆತ್ ನೋಟ್ ಪತ್ತೆಯಾಯಿತೇ ಎಂಬ ವಿಚಾರದಲ್ಲೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಮಾಹಿತಿ ತಿಳಿಯುತ್ತಿದ್ದಂತೆ ಆರ್.ಆರ್ ನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.
ವೈಶಾಖ್ ಹೆಸರು ಈ ಹಿಂದೆ ಎವಿಆರ್ ಗ್ರೂಪ್ ಮಾಲೀಕರ ಪ್ರಕರಣದಲ್ಲಿಯೂ ಕೇಳಿಬಂದಿತ್ತು ಎನ್ನಲಾಗಿದೆ. ಆದರೆ ಅವರ ಆತ್ಮಹತ್ಯೆಗೆ ಆ ಪ್ರಕರಣದ ಸಂಬಂಧವಿದೆಯೇ ಅಥವಾ ವೈಯಕ್ತಿಕ ಕಾರಣಗಳಿವೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಪ್ರಸ್ತುತ ಆರ್.ಆರ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಕೊಳ್ಳಲು ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿಸಿದ್ದಾರೆ. ಉದ್ಯಮಿಯೊಬ್ಬರು ನಟಿಯ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ನಟಿ ಕೃಷಿ ತಾಪಂಡ ಅವರು ಸದ್ಯ ಮನೆಯಲ್ಲಿದ್ದಾರೆಯೇ ಅಥವಾ ಘಟನೆ ಸಂದರ್ಭ ಅವರು ಎಲ್ಲಿದ್ದರು ಎಂಬ ಮಾಹಿತಿ ಲಭ್ಯವಾಗಿಲ್ಲ. ಪೊಲೀಸರು ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದು, ಈ ದುರ್ಘಟನೆಯ ಹಿನ್ನೆಲೆಯ ಬಗ್ಗೆ ಶೋಧ ನಡೆಸಲಾಗುತ್ತಿದೆ.
ಘಟನೆಯು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದ್ದು, ವೈಶಾಕ್ ಆತ್ಮಹತ್ಯೆಗೆ ಕಾರಣವೇನು ಎಂಬುದರ ಕುರಿತು ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.
ಆತ್ಮಹತ್ಯೆಗೂ ಮುನ್ನ ನಟಿ ಕೃಷಿ ತಾಪಂಡಾಗೆ ಸಂದೇಶ ಕಳುಹಿಸಿದ್ದ ವೈಶಾಖ್
ನಟಿ ಕೃಷಿ ತಾಪಂಡ ಅವರ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಉದ್ಯಮಿ ವೈಶಾಖ್, ಈ ದುರ್ಘಟನೆಗೆ ಮುನ್ನ ನಟಿಗೆ ಸಂದೇಶ ಕಳುಹಿಸಿ ತನ್ನ ಮನಸ್ಥಿತಿಯನ್ನು ಹಂಚಿಕೊಂಡಿದ್ದ ಎಂಬ ಮಾಹಿತಿ ಬೆಳಕಿಗೆ ಬಂದಿದೆ. ವೈಶಾಖ್ “ನನಗೆ ಜೀವನವೇ ಸಾಕಾಗಿದೆ. ಇನ್ನು ಬದುಕುವ ಆಸೆ ಇಲ್ಲ” ಎಂದು ಕೃಷಿ ತಾಪಂಡ ಅವರಿಗೆ ಮೆಸೇಜ್ ಮಾಡಿದ್ದರು ಎನ್ನಲಾಗಿದೆ. ಆ ವೇಳೆ ಕೃಷಿ ತಾಪಂಡ ಅವರು ಯಲಹಂಕದಲ್ಲಿದ್ದು, ವೈಶಾಖ್ ಅವರನ್ನು ಸಮಾಧಾನಪಡಿಸಲು ಪ್ರಯತ್ನಿಸಿದ್ದರು ಎಂದು ತಿಳಿದುಬಂದಿದೆ.
ಆತ್ಮಹತ್ಯೆಯಂತಹ ನಿರ್ಧಾರ ಕೈಗೊಳ್ಳಬೇಡ ಎಂದು ಧೈರ್ಯ ತುಂಬಿದ್ದ ನಟಿ, “ನಾನು ಬರುತ್ತೇನೆ, ಅಲ್ಲಿಯವರೆಗೆ ಏನೂ ಮಾಡಿಕೊಳ್ಳಬೇಡ” ಎಂದು ಮನವಿ ಮಾಡಿದ್ದರು ಎನ್ನಲಾಗಿದೆ. ಜೊತೆಗೆ, ಇಬ್ಬರೂ ಸೇರಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಹೋಗೋಣ, ದೇವರ ದರ್ಶನ ಪಡೆದು ಮನಸ್ಸನ್ನು ಹಗುರ ಮಾಡಿಕೊಳ್ಳೋಣ ಎಂದು ಸಲಹೆ ನೀಡಿದ್ದರು ಎಂದು ಹೇಳಲಾಗುತ್ತಿದೆ. ನಟಿ ನೀಡಿದ ಸಲಹೆಗೆ ವೈಶಾಖ್ ಸಹ ಒಪ್ಪಿಗೆ ಸೂಚಿಸಿ ‘ಓಕೆ’ ಎಂದು ಪ್ರತಿಕ್ರಿಯೆ ನೀಡಿದ್ದರು ಎನ್ನಲಾಗಿದೆ. ಆದರೆ, ಕೃಷಿ ತಾಪಂಡ ಅವರು ಮನೆಗೆ ತಲುಪುವಷ್ಟರಲ್ಲಿ ವೈಶಾಖ್ ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡುಬಂದಿದೆ.
ಘಟನೆ ತಿಳಿದ ತಕ್ಷಣ ಕೃಷಿ ತಾಪಂಡ ಅವರು ರಾತ್ರಿ ಸುಮಾರು 11 ಗಂಟೆಗೆ ಆರ್.ಆರ್ ನಗರ ಪೊಲೀಸ್ ಠಾಣೆಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಬಳಿಕ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣದ ಕುರಿತು ತನಿಖೆ ಮುಂದುವರಿಸಿದ್ದಾರೆ. ಮೊಬೈಲ್ ಸಂದೇಶಗಳು ಹಾಗೂ ಇತರ ಮಾಹಿತಿಗಳ ಆಧಾರದಲ್ಲಿ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.