ಬೆಂಗಳೂರು: ಸಾಮಾಜಿಕ ಜಾಲತಾಣಗಳ ಮೂಲಕ ಸ್ನೇಹ ಬೆಳೆಸಿ, ಲಕ್ಷಾಂತರ ರೂಪಾಯಿ ವಂಚಿಸಿದ ಕಿರುತೆರೆ ನಟಿಯನ್ನು ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್ ಪೊಲೀಸರು ಬಂಧಿಸಿದ್ದಾರೆ. ಆರೋಪಿ ವನಿತಾ ಎಂಬ ಈ ನಟಿ, ತಾನು ಕಿರುತೆರೆ ನಟಿ ಎಂದು ಪರಿಚಯಿಸಿಕೊಂಡು ಹಣವಂತರನ್ನು ಟಾರ್ಗೆಟ್ ಮಾಡಿ ವಂಚಿಸುತ್ತಿದ್ದಳು. ಆಕೆಯ ವಿರುದ್ಧ ಬೆಂಗಳೂರಿನ ಮೂರು ಠಾಣೆಗಳಲ್ಲಿ ದೂರುಗಳು ದಾಖಲಾಗಿವೆ.
ಹೇಗೆ ವಂಚಿಸುತ್ತಿದ್ದಳು?
ಪ್ರಾಥಮಿಕ ತನಿಖೆಯಲ್ಲಿ ಬಹಿರಂಗವಾದ ವಿವರಗಳ ಪ್ರಕಾರ, ವನಿತಾ ಮೊದಲಿಗೆ ಸಾಮಾಜಿಕ ಜಾಲತಾಣಗಳಲ್ಲಿ ತಾನು ಕಿರುತೆರೆ ನಟಿ ಎಂದು ಪರಿಚಯ ಮಾಡಿಕೊಳ್ಳುತ್ತಿದ್ದಳು. ನಂತರ ಆರ್ಥಿಕವಾಗಿ ಸಬಲರಾದವರನ್ನು ಆಯ್ದುಕೊಂಡು ಅವರೊಂದಿಗೆ ಸ್ನೇಹ ಬೆಳೆಸುತ್ತಿದ್ದಳು. ನಿರಂತರವಾಗಿ ಸಂಭಾಷಣೆ ನಡೆಸಿ ತನ್ನನ್ನು ವಿಶ್ವಾಸಾರ್ಹಳು ಎಂದು ನಂಬಿಸಿ, ಅವರ ಮನಸ್ಸು ಗೆಲ್ಲುತ್ತಿದ್ದಳು.
ವಿಶ್ವಾಸ ಸಂಪಾದಿಸಿದ ಬಳಿಕ, ತಾನು ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದೇನೆ ಎಂದು ಹೇಳಿ ಮೋಸ ಮಾಡುತ್ತಿದ್ದಳು. “ನನ್ನ ಚಿನ್ನದ ಆಭರಣಗಳನ್ನು ಅಡವಿಟ್ಟಿದ್ದೇನೆ. ಅವುಗಳನ್ನು ಬಿಡಿಸಿಕೊಳ್ಳಲು ತುರ್ತಾಗಿ ಹಣ ಬೇಕಾಗಿದೆ. ಎರಡು-ಮೂರು ದಿನಗಳಲ್ಲಿ ಸಾಲದ ಹಣವನ್ನು ವಾಪಸ್ ನೀಡುತ್ತೇನೆ” ಎಂದು ಸುಳ್ಳು ಭರವಸೆ ನೀಡಿ ಲಕ್ಷಾಂತರ ರೂಪಾಯಿ ಪಡೆಯುತ್ತಿದ್ದಳು.
ಚಾಲಾಕಿಯಾದ ಕಸರತ್ತು
ವಂಚನೆಯಲ್ಲಿ ಪರಿಣಿತಿಯನ್ನು ಹೊಂದಿದ್ದ ವನಿತಾ, ಅತ್ಯಂತ ಜಾಣ್ಮೆಯಿಂದ ಕಾರ್ಯ ನಿರ್ವಹಿಸುತ್ತಿದ್ದಳು. ಹಣ ಪಡೆಯುವಾಗ ಸಿಸಿಟಿವಿ ಕ್ಯಾಮೆರಾಗಳು ಇಲ್ಲದ ಜಾಗಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಳು. ಅಲ್ಲಿಗೆ ಹಣ ನೀಡುವವರನ್ನು ಕರೆಸಿ ನಗದು ಪಡೆದುಕೊಳ್ಳುತ್ತಿದ್ದಳು. ಹಣ ಕೈಸೇರಿದ ಕೂಡಲೇ ಆಕೆ ಅಸಲಿ ಆಟ ತೋರಿಸುತ್ತಿದ್ದಳು. ಹಣ ಕೊಟ್ಟವರು ಫೋನ್ ಮಾಡಿದರೆ ಸ್ವೀಕರಿಸುತ್ತಿರಲಿಲ್ಲ. ಮೆಸೇಜ್‌ಗಳಿಗೂ ಯಾವುದೇ ಪ್ರತಿಕ್ರಿಯೆ ನೀಡದೆ ಕಣ್ಮರೆಯಾಗುತ್ತಿದ್ದಳು.
ಮೂರು ಠಾಣೆಗಳಲ್ಲಿ ದೂರು
ಈ ಹಿಂದೆ ಗೋವಿಂದರಾಜನಗರ ಮತ್ತು ಜ್ಞಾನಭಾರತಿ ಪೊಲೀಸ್ ಠಾಣೆಗಳಲ್ಲೂ ಆಕೆಯ ವಿರುದ್ಧ ದೂರುಗಳು ದಾಖಲಾಗಿದ್ದವು. ಈಕೆಯಿಂದ ಹಣ ಕಳೆದುಕೊಂಡ ಯುವಕನೊಬ್ಬ ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದ. ಆ ದೂರಿನ ಆಧಾರದ ಮೇಲೆ ಪೊಲೀಸರು ತನಿಖೆ ಆರಂಭಿಸಿದರು.
ಪೊಲೀಸರ ಕಾರ್ಯಾಚರಣೆ
ಮಹಾಲಕ್ಷ್ಮೀ ಲೇಔಟ್ ಠಾಣೆ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಿದರು. ತಾಂತ್ರಿಕ ಪುರಾವೆಗಳು ಮತ್ತು ಸಂತ್ರಸ್ತರ ಹೇಳಿಕೆಗಳ ಆಧಾರದ ಮೇಲೆ ವನಿತಾಳನ್ನು ಪತ್ತೆಹಚ್ಚಿ ಬಂಧಿಸಿದರು.
ಈಕೆಯ ಜಾಲಕ್ಕೆ ಬಿದ್ದಿರುವ ಇನ್ನೂ ಹಲವು ಸಂತ್ರಸ್ತರ ಬಗ್ಗೆ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ. ಆಕೆ ಎಷ್ಟು ಮಂದಿಯಿಂದ ಮತ್ತು ಎಷ್ಟು ಹಣ ಪಡೆದುಕೊಂಡಿದ್ದಾಳೆ ಎಂಬುದರ ಕುರಿತು ವಿವರಗಳನ್ನು ಸಂಗ್ರಹಿಸಲಾಗುತ್ತಿದೆ.
