ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ ‘ದಿ ಡೆವಿಲ್’ ಸಿನಿಮಾ ಡಿಸೆಂಬರ್ 11ರಂದು ವಿಶ್ವಾದ್ಯಂತ ಬಿಡುಗಡೆಯಾಗಿ ಭಾರೀ ಸದ್ದು ಮಾಡುತ್ತಿದೆ. ನಟ ದರ್ಶನ್ ಸದ್ಯ ಜೈಲಿನಲ್ಲಿರುವುದರಿಂದ ಅವರ ಅನುಪಸ್ಥಿತಿಯಲ್ಲೇ ಸಿನಿಮಾ ತೆರೆಕಂಡಿದೆ. ಈ ನಡುವೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ದರ್ಶನ್ ಅವರು ಬೆಳಗ್ಗೆಯೇ ಅಭಿಮಾನಿಗಳ ಜೊತೆ ಕುಳಿತು ಸಿನಿಮಾ ವೀಕ್ಷಿಸಿ, ತಮ್ಮ ಭಾವನಾತ್ಮಕ ವಿಮರ್ಶೆಯನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅವರ ಪೋಸ್ಟ್ ಅಭಿಮಾನಿಗಳನ್ನು ಭಾವುಕರಾನ್ನಾಗಿಸಿದೆ.
‘ದಿ ಡೆವಿಲ್’ ಸಿನಿಮಾ ರಾಜ್ಯಾದ್ಯಂತ ಹೌಸ್‌ಫುಲ್ ಶೋಗಳೊಂದಿಗೆ ಆರಂಭವಾಗಿದೆ. ನಿರ್ದೇಶಕ ಪ್ರಕಾಶ್ ವೀರ್ ಅವರ ಕಥನಶೈಲಿ ಅದ್ಭುತವಾಗಿದೆ ಎಂದು ವಿಜಯಲಕ್ಷ್ಮಿ ಶ್ಲಾಘಿಸಿದ್ದಾರೆ. ಚಿತ್ರಮಂದಿರದಿಂದ ಹೊರಬಂದ ಕ್ಷಣದಲ್ಲೇ ಹೃದಯ ತುಂಬಿ ಹರಿದಿದೆ ಎಂದು ಬರೆದುಕೊಂಡಿರುವ ಅವರು, ಪ್ರತಿ ಫ್ರೇಮ್‌ನ ಹಿಡಿತ, ಕ್ಯಾಮೆರಾ ಕೆಲಸ ಮತ್ತು ತಾಂತ್ರಿಕ ತಂಡದ ಶ್ರಮವನ್ನು ವಿಶೇಷವಾಗಿ ಉಲ್ಲೇಖಿಸಿ ಬರೆದಿದ್ದಾರೆ.
ನಾಯಕಿ ರಚನಾ ರೈ ಅವರನ್ನು ‘ಮುದ್ದಾದ ಹುಡುಗಿ’ ಎಂದು ಕರೆದ ವಿಜಯಲಕ್ಷ್ಮಿ, ಅವರ ನೈಸರ್ಗಿಕ ಅಭಿನಯ ಮನಸೂರೆಗೊಳಿಸುತ್ತದೆ. ಅವರ ಮುಂದಿನ ಪಯಣ ಬೆಳಕಿನದ್ದಾಗಲಿ ಎಂದು ಹಾರೈಸಿದ್ದಾರೆ. ಶರ್ಮಿಳಾ ಮಾಂಡ್ರೆ ಅವರ ಸಣ್ಣ ಪಾತ್ರವೂ ಪರದೆಯಲ್ಲಿ ಗಮನ ಸೆಳೆಯುತ್ತದೆ ಎಂದು ಹೇಳಿದ್ದಾರೆ. ಕಥೆ ಆರಂಭದಿಂದ ಅಂತ್ಯದವರೆಗೂ ಹಿಡಿತ ಸಾಧಿಸಿದ್ದು, ಎರಡು ಪಾತ್ರಗಳ ನಡುವಿನ ಟ್ವಿಸ್ಟ್‌ಗಳನ್ನು ನಿರ್ದೇಶಕರು ಅದ್ಭುತವಾಗಿ ನಿರ್ವಹಿಸಿದ್ದಾರೆ ಎಂದು ಪ್ರಶಂಸಿಸಿದ್ದಾರೆ. ಪ್ರತಿ ಕಲಾವಿದ ಮತ್ತು ತಾಂತ್ರಿಕರ ಶ್ರಮ ದೃಶ್ಯಗಳಲ್ಲಿ ಕಾಣುತ್ತದೆ ಎಂದಿದ್ದಾರೆ.
ವಿಜಯಲಕ್ಷ್ಮಿ ಅವರು, ದರ್ಶನ್ ಬಗ್ಗೆಯೂ ಮಾತನಾಡಿದ್ದಾರೆ. ದರ್ಶನ್ ಅವರ ಪಾತ್ರ, ಅಭಿನಯ, ಹಾಸ್ಯ ಟೈಮಿಂಗ್ ಮತ್ತು ಪರದೆಯ ಹಾಜರಾತಿ ಜಾದುವಿನಂತೆ ಎಂದು ಬರೆದಿದ್ದಾರೆ. ಅವರು ಎರಡು ಪಾತ್ರಗಳನ್ನು ಸೊಗಸಾಗಿ ಹೊತ್ತೊಯ್ದ ರೀತಿ ಬೆರಗುಗೊಳಿಸಿತು ಎಂದಿದ್ದಾರೆ. ನೋಡುವಾಗ ಪದಗಳಲ್ಲಿ ವ್ಯಕ್ತಪಡಿಸಲಾಗದ ಭಾವನೆ ಕಲಿಸಿತು ಎಂದು ಭಾವುಕರಾಗಿದ್ದಾರೆ.
ಫ್ಯಾನ್ಸ್‌ನ ಕೂಗಾಟ, ಚಪ್ಪಾಳೆ ಮತ್ತು ದರ್ಶನ್ ಮೇಲಿನ ಪ್ರೀತಿ ನೋಡಿ ಭಾವನೆಗಳನ್ನು ಹಿಡಿದುಕೊಳ್ಳಬೇಕಾಯಿತು ಎಂದು ಬರೆದಿರುವ ವಿಜಯಲಕ್ಷ್ಮಿ, ಈ ಪ್ರೀತಿಯ ಪ್ರತಿ ಹನಿ ದರ್ಶನ್‌ಗೆ ತಲುಪಿಸುತ್ತೇನೆ ಎಂದು ಭರವಸೆ ನೀಡಿದ್ದಾರೆ. ಈ ಹುಚ್ಚುತನವನ್ನು ದರ್ಶನ್ ಬೇಗನೇ ನೋಡಿ ಅನುಭವಿಸಲಿ ಎಂಬ ಹಾರೈಕೆಯೊಂದಿಗೆ ಪೋಸ್ಟ್ ಮಾಡಿದ್ದಾರೆ. ಸಿನಿಮಾವನ್ನು ವಿಶೇಷಗೊಳಿಸಿದ ಸೆಲೆಬ್ರಿಟಿಗಳು ಮತ್ತು ಸಿನಿತಾರೆಯರಿಗೆ ಧನ್ಯವಾದ ತಿಳಿಸಿದ್ದಾರೆ.
