ದಳಪತಿ ವಿಜಯ್ ಫ್ಯಾನ್ಸ್‌ಗೆ ನಿರಾಸೆ: ಜನ ನಾಯಗನ್‌ನ 20 ನಿಮಿಷದ ವಿವಾದಿತ ದೃಶ್ಯ ಕಟ್‌

Untitled design 2026 02 03T204439.231

ಚೆನ್ನೈ: ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ದಳಪತಿ ವಿಜಯ್ ಅವರ ವೃತ್ತಿಜೀವನದ ಕೊನೆಯ ಚಿತ್ರ ಎನ್ನಲಾಗಿರುವ ‘ಜನ ನಾಯಗನ್’ (Jana Nayagan) ಈಗ ಭಾರಿ ವಿವಾದದಲ್ಲಿ ಸಿಲುಕಿದೆ. ರಾಜಕೀಯ ಸಿದ್ಧಾಂತಗಳ ಪ್ರಚಾರ ಮತ್ತು ವಿಪಕ್ಷಗಳ ಟೀಕೆಯ ಕಾರಣಕ್ಕೆ ಸೆನ್ಸಾರ್ ಮಂಡಳಿಯಿಂದ ತಡೆ ಅನುಭವಿಸುತ್ತಿದ್ದ ಈ ಚಿತ್ರದ ಬಿಡುಗಡೆಗಾಗಿ ಚಿತ್ರತಂಡ ಈಗ ದೊಡ್ಡ ಸಾಹಸಕ್ಕೆ ಕೈಹಾಕಿದೆ. ನ್ಯಾಯಾಲಯದಲ್ಲಿನ ವಿಳಂಬ ಮತ್ತು ಚುನಾವಣೆ ಘೋಷಣೆಯ ಭೀತಿಯಿಂದಾಗಿ ವಿವಾದಿತ 20 ನಿಮಿಷಗಳ ದೃಶ್ಯಗಳಿಗೆ ಕತ್ತರಿ ಹಾಕಲು ನಿರ್ಮಾಪಕರು ಒಪ್ಪಿಕೊಂಡಿದ್ದಾರೆ.

ಸೆನ್ಸಾರ್ ತಡೆ

‘ಜನ ನಾಯಗನ್’ ಮೂಲತಃ ತೆಲುಗಿನ ಭಗವಂತ ಕೇಸರಿ ಚಿತ್ರದ ರೀಮೇಕ್ ಆಗಿದ್ದರೂ, ವಿಜಯ್ ಅವರ ರಾಜಕೀಯ ಪ್ರವೇಶಕ್ಕೆ ಪೂರಕವಾಗಿ ಚಿತ್ರದಲ್ಲಿ ಸಾಕಷ್ಟು ಬದಲಾವಣೆ ಮಾಡಲಾಗಿತ್ತು. ವಿಜಯ್ ಅವರ ತಮಿಳಗ ವೆಟ್ರಿ ಕಳಗಮ್ (TVK) ಪಕ್ಷದ ಸಿದ್ಧಾಂತಗಳು, ಆದರ್ಶಗಳು ಮತ್ತು ವಿರೋಧ ಪಕ್ಷಗಳನ್ನು ನೇರವಾಗಿ ಟೀಕಿಸುವ ಸಂಭಾಷಣೆಗಳನ್ನು ಸೇರಿಸಲಾಗಿತ್ತು. ಈ ಅಂಶಗಳನ್ನು ಸಂವಿಧಾನಬದ್ಧವಲ್ಲ ಮತ್ತು ಸಿನಿಮಾ ಪ್ರಚಾರಕ್ಕೆ ರಾಜಕೀಯವನ್ನು ಬಳಸಲಾಗುತ್ತಿದೆ ಎಂದು ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (CBFC) ಸೆನ್ಸಾರ್ ಪ್ರಮಾಣಪತ್ರ ನೀಡಲು ನಿರಾಕರಿಸಿತ್ತು.

ಸಿನಿಮಾ ಬಿಡುಗಡೆ ವಿಳಂಬವಾಗುತ್ತಿದ್ದಂತೆ ಚಿತ್ರತಂಡ ನ್ಯಾಯಾಲಯದ ಮೊರೆ ಹೋಗಿತ್ತು. ಆದರೆ ಅಲ್ಲಿಯೂ ನ್ಯಾಯದಾನ ವಿಳಂಬವಾಗುತ್ತಿದೆ. ತಮಿಳುನಾಡು ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದು, ಒಮ್ಮೆ ನೀತಿಸಂಹಿತೆ ಜಾರಿಯಾದರೆ ಸಿನಿಮಾ ಬಿಡುಗಡೆ ಎರಡು ತಿಂಗಳಿಗೂ ಹೆಚ್ಚು ಕಾಲ ಮುಂದೂಡಲ್ಪಡುವ ಸಾಧ್ಯತೆ ಇತ್ತು. ಇದನ್ನು ಮನಗಂಡ ನಿರ್ಮಾಪಕ ವೆಂಕಟ್ (KVN ಪ್ರೊಡಕ್ಷನ್ಸ್), ಯಾವುದೇ ವಿವಾದವಿಲ್ಲದೆ ಸಿನಿಮಾ ತೆರೆಕಾಣಿಸಲು ವಿವಾದಿತ ದೃಶ್ಯಗಳನ್ನು ಕತ್ತರಿಸಲು ಸಮ್ಮತಿಸಿದ್ದಾರೆ.

20 ನಿಮಿಷಗಳ ದೃಶ್ಯಗಳಿಗೆ ಕತ್ತರಿ

ರಾಜಕೀಯವಾಗಿ ಪ್ರಚೋದನಕಾರಿ ಎಂದು ಗುರುತಿಸಲಾದ ಸುಮಾರು 20 ನಿಮಿಷಗಳ ದೃಶ್ಯಗಳು ಮತ್ತು ಸಂಭಾಷಣೆಗಳನ್ನು ಚಿತ್ರದಿಂದ ತೆಗೆದುಹಾಕಲಾಗುತ್ತಿದೆ. ಇದರಿಂದಾಗಿ ಚಿತ್ರವು ತನ್ನ ಮೂಲ ಸ್ವರೂಪಕ್ಕೆ (ಭಗವಂತ ಕೇಸರಿ ರೀಮೇಕ್) ಹತ್ತಿರವಾಗಲಿದೆ. ರಾಜಕೀಯ ಸಂದೇಶಗಳ ಮೂಲಕ ಪಕ್ಷದ ಪ್ರಚಾರ ಮಾಡಲು ಹೊರಟಿದ್ದ ದಳಪತಿಗೆ ಹಿನ್ನಡೆಯಾದಂತಾಗಿದೆ. ಆದರೂ, ವಿಜಯ್ ಅವರ ಕೊನೆಯ ಸಿನಿಮಾ ಎಂಬ ಕ್ರೇಜ್ ಚಿತ್ರದ ಮೇಲಿದೆ.

ಎಚ್. ವಿನೋದ್ ನಿರ್ದೇಶನದ ಈ ಚಿತ್ರದಲ್ಲಿ ಪೂಜಾ ಹೆಗ್ಡೆ ನಾಯಕಿಯಾಗಿ ಮಿಂಚಿದ್ದಾರೆ. ಮಲಯಾಳಂನ ಉದಯೋನ್ಮುಖ ತಾರೆ ಮಮಿತಾ ಬಿಜು ಪ್ರಮುಖ ಪಾತ್ರವೊಂದರಲ್ಲಿ ನಟಿಸಿದ್ದು, ಅನಿರುದ್ಧ್ ರವಿಚಂದ್ರನ್ ಅವರ ಸಂಗೀತ ಚಿತ್ರದ ಪ್ಲಸ್ ಪಾಯಿಂಟ್ ಆಗಿದೆ. ಸೆನ್ಸಾರ್ ವಿವಾದ ಸುಖಾಂತ್ಯಗೊಂಡರೆ ಚಿತ್ರವು ನಿಗದಿಗಿಂತ ಮುಂಚೆಯೇ ಚಿತ್ರಮಂದಿರಗಳಿಗೆ ಬರಲಿದೆ.

Exit mobile version