ಚೆನ್ನೈ, ನವೆಂಬರ್ 10: ತಮಿಳು ಚಿತ್ರರಂಗದ ಜನಪ್ರಿಯ ನಟ ಹಾಗೂ ಬಹುಭಾಷಾ ಕಲಾವಿದ ಅಭಿನಯ್ (44) ಇಂದು ನಿಧನರಾಗಿದ್ದಾರೆ. ಕೆಲ ದಿನಗಳಿಂದ ಲಿವರ್‌ಗೆ ಸಂಬಂಧಿಸಿದ ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದ ಅವರು, ಚಿಕಿತ್ಸೆಗೆ ಸ್ಪಂದಿಸದೆ ಚೆನ್ನೈಯಲ್ಲಿರುವ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.
ಅಭಿನಯ್ ಅವರ ಮೃತದೇಹವನ್ನು ಸದ್ಯ ಅವರ ಮನೆಯಲ್ಲೇ ಇರಿಸಲಾಗಿದ್ದು, ಹತ್ತಿರದ ಸಂಬಂಧಿಕರು ಇಲ್ಲದ ಕಾರಣ ಅಂತ್ಯಕ್ರಿಯೆಯನ್ನು ನಡಿಗರ್ ಸಂಘದ ಮೇಲ್ವಿಚಾರಣೆಯಲ್ಲಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಮೂಲಗಳು ತಿಳಿಸಲಾಗಿದೆ.
ಅಭಿನಯ್ ಅವರು ಕೆಲವು ತಿಂಗಳುಗಳಿಂದಲೂ ಲಿವರ್ ಸಂಬಂಧಿತ ಸಮಸ್ಯೆಯಿಂದ ಬಳಲುತ್ತಿದ್ದರು. ಚಿಕಿತ್ಸೆಗೆ ಹಣಕಾಸಿನ ನೆರವು ಬೇಕೆಂದು ಅವರು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಮೂಲಕ ಮನವಿ ಮಾಡಿದ್ದರು. “ನನ್ನ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ವೈದ್ಯರು ಇನ್ನು ಒಂದೂವರೆ ವರ್ಷ ಮಾತ್ರ ಬದುಕಬಹುದು ಎಂದು ಹೇಳಿದ್ದಾರೆ. ನಾನು ಹೆಚ್ಚು ಕಾಲ ಇರುತ್ತೇನೆಯೋ ಇಲ್ಲವೋ ತಿಳಿದಿಲ್ಲ” ಎಂದು ಅವರು ಭಾವುಕರಾಗಿ ಹೇಳಿದ್ದ ವಿಡಿಯೊ ವೈರಲ್ ಆಗಿತ್ತು.
ಇವರ ಈ ಮನವಿಗೆ ಸ್ಪಂದಿಸಿ ಚಿತ್ರರಂಗದ ಹಲವು ಕಲಾವಿದರು ಧನ ಸಹಾಯ ಮಾಡಿದ್ದರು. ನಟ ಧನುಷ್ 5 ಲಕ್ಷ ರೂಪಾಯಿ, ಕೆ.ಪಿ.ವೈ. ಬಾಲ 1 ಲಕ್ಷ ರೂಪಾಯಿ ನೆರವು ನೀಡಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅಭಿನಯ್ ಚಿಕ್ಕ ವಯಸ್ಸಿನಲ್ಲೇ ಇಹಲೋಕ ತ್ಯಜಿಸಿದ್ದಾರೆ.
ಅಭಿನಯ್ ಅವರ ಚಿತ್ರರಂಗ ಪ್ರಯಾಣ 2002ರಲ್ಲಿ ಆರಂಭವಾಯಿತು. ಧನುಷ್ ಅವರ ಮೊದಲ ಚಿತ್ರ ‘ತುಲ್ಲುವದೋ ಇಲಮೈ’ ಮೂಲಕ ಅವರು ಕಾಲಿವುಡ್‌ಗೆ ಕಾಲಿಟ್ಟರು. ಈ ಚಿತ್ರದಲ್ಲಿ ಅಭಿನಯ್ ಅವರ ಅಭಿನಯಕ್ಕೆ ಮೆಚ್ಚುಗೆ ಸಿಕ್ಕಿತ್ತು. 23 ವರ್ಷಗಳ ವೃತ್ತಿ ಜೀವನದಲ್ಲಿ ಅವರು ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಸುಮಾರು 15 ಚಿತ್ರಗಳಲ್ಲಿ ನಟಿಸಿದ್ದಾರೆ.
ತಮಿಳು ಚಿತ್ರಗಳ ಜತೆಗೆ ಮಲಯಾಳಂನಲ್ಲೂ ಅವರು ಜನಪ್ರಿಯರಾಗಿದ್ದರು. 2002ರಲ್ಲೇ ಬಿಡುಗಡೆಯಾದ ‘ಕೈಯೆತುಮ್ ದೂರತ್’ ಅವರ ಮೊದಲ ಮಲಯಾಳಂ ಚಿತ್ರವಾಗಿತ್ತು. 2014ರಲ್ಲಿ ರಿಲೀಸ್ ಆದ ‘ವಲ್ಲವನುಕ್ಕು ಪುಲ್ಲುಂ ಆಯುಧಮ್’ ಅವರ ಕೊನೆಯ ತಮಿಳು ಚಿತ್ರವಾಗಿತ್ತು. ಇದಾದ ನಂತರ ಅವರು ಯಾವುದೇ ಹೊಸ ಚಿತ್ರಗಳಲ್ಲಿ ಕಾಣಿಸಿಕೊಂಡಿರಲಿಲ್ಲ.
ತಮಿಳು ಚಿತ್ರಗಳಲ್ಲಿ ಬಾಲಿವುಡ್ ನಟರಿಗೆ ಧ್ವನಿ ನೀಡಿ ಅವರು ಗಮನ ಸೆಳೆದಿದ್ದರು. ‘ತುಪಾಕಿ’ ಮತ್ತು ‘ಅಂಜಾನ್’ ಚಿತ್ರಗಳಲ್ಲಿ ವಿದ್ಯುತ್ ಜಮ್ಮ್ವಾಲ್‌ಗೆ, ‘ಪೈಯಾ’ದಲ್ಲಿ ಮಿಲಿಂದ್ ಸೋಮನ್‌ಗೆ ಹಾಗೂ ‘ಕಾಕ ಮುಟ್ಟೈ’ಯಲ್ಲಿ ಬಾಬು ಆಂಟೋನಿಗೆ ಅವರು ಧ್ವನಿ ನೀಡಿದ್ದರು. ಇದರಿಂದ ಅವರ ಧ್ವನಿ ಕಲೆಗೆ ವ್ಯಾಪಕ ಮನ್ನಣೆ ಸಿಕ್ಕಿತ್ತು. ಜಾಹೀರಾತುಗಳ ಮೂಲಕ ಅಭಿನಯ್ ಮೋಡಿ ಮಾಡಿದ್ದರು. ಒರಿಯೋ ಬಿಸ್ಕೆಟ್ ಸೇರಿದಂತೆ ಹಲವು ಬ್ರ್ಯಾಂಡ್‌ಗಳ ರಾಯಭಾರಿಯಾಗಿ ಕಾಣಿಸಿಕೊಂಡಿದ್ದರು.
ಅಭಿನಯ್ ಅವರ ನಿಧನಕ್ಕೆ ನಟ ಕಾಯಲ್ ದೇವರಾಜ್ ಸೇರಿದಂತೆ ಹಲವು ಕಲಾವಿದರು ಕಂಬನಿ ಮಿಡಿದಿದ್ದಾರೆ. ಅವರ ವಿಡಿಯೊ ಮನವಿ ವೈರಲ್ ಆದ ನಂತರ ಅಭಿಮಾನಿಗಳು ಅವರ ಆರೋಗ್ಯ ಚೇತರಿಕೆಗಾಗಿ ಪ್ರಾರ್ಥಿಸಿದ್ದರು.
