ಹಿಟ್ ಸಿನಿಮಾಗಳ ಡೈರೆಕ್ಟರ್ ಮುರಳಿ ಮೋಹನ್ ಬಾಳಲ್ಲಿ ವಿಧಿ ದೊಡ್ಡ ಆಟ..!!

ಉಪ್ಪಿ ಮಿತ್ರನಿಗೆ ಕಿಡ್ನಿ ವೈಫಲ್ಯ.. ಸಂಕಷ್ಟದಲ್ಲಿ ಸ್ಟಾರ್ ಡೈರೆಕ್ಟರ್

Untitled design 2025 05 04t160241.769

ಶಿವಣ್ಣ, ಉಪೇಂದ್ರ, ರವಿಚಂದ್ರನ್ ಅಂತಹ ಬಿಗ್ ಸ್ಟಾರ್ಸ್ಗೆ ದೊಡ್ಡ ದೊಡ್ಡ ಮೂವಿಗಳನ್ನ ನಿರ್ದೇಶಿಸಿದ್ದ ಹಿರಿಯ ನಿರ್ದೇಶಕ ಮುರಳಿ ಮೋಹನ್‌‌, ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದಾರೆ. ಆರ್ಥಿಕ ಸಂಕಷ್ಟದಲ್ಲಿರೋ ಅವರಿಗೆ ನೆರವು ಬೇಕಾಗಿದೆ. ಈ ಕುರಿತು ನಮ್ಮ ಗ್ಯಾರಂಟಿ ನ್ಯೂಸ್ ಜೊತೆ ಸ್ವತಃ ಅವರೇ ಎಕ್ಸ್‌‌ಕ್ಲೂಸಿವ್ ಆಗಿ ಮಾತನಾಡಿದ್ದಾರೆ. ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಅದನ್ನ ಒಮ್ಮೆ ಕೇಳಿ, ಕೈಲಾದಷ್ಟು ಸಹಾಯ ಮಾಡಿ.

ಕಾಶಿನಾಥ್ ಅವ್ರ ಶಿಷ್ಯ, ನಟ ನಿರ್ದೇಶಕ ಉಪೇಂದ್ರ ಅವ್ರ ಆಪ್ತಮಿತ್ರ ಮುರಳಿ ಮೋಹನ್ ಜೀವನ ಸಂಕಷ್ಟದಲ್ಲಿದೆ. ಹೌದು.. ಕಿಡ್ನಿ ವೈಫಲ್ಯದಿಂದ ಬಳಲುತ್ತಿರೋ ಇವರು, ಚಿಕಿತ್ಸೆಗಾಗಿ ಹಣವಿಲ್ಲದೆ ಪರದಾಡುತ್ತಿದ್ದಾರೆ. ಅವರ ಗೋಳು ಫಿಲ್ಮ್ ಚೇಂಬರ್‌ಗಾಗಲಿ, ಕಲಾವಿದರ ಸಂಘಕ್ಕಾಗಲಿ ಕೇಳಿಸುತ್ತಿಲ್ಲ. ಹಾಗಾಗಿಯೇ ಸದ್ಯ ಕನ್ನಡ ಕಲಾಭಿಮಾನಿಗಳ ಬಳಿ ಸ್ವತಃ ಅವರೇ ಸಹಾಯ ನಿರೀಕ್ಷಿಸುತ್ತಿದ್ದಾರೆ.

ಶಿವರಾಜ್‌ಕುಮಾರ್ ಜೊತೆ ಸಂತ, ಉಪೇಂದ್ರ ಜೊತೆ ನಾಗರಹಾವು ಹಾಗೂ ರವಿಚಂದ್ರನ್ ಜೊತೆ ಮಲ್ಲಿಕಾರ್ಜುನ ಸೇರಿದಂತೆ ಸಾಕಷ್ಟು ಸಿನಿಮಾಗಳಿಗೆ ಆ್ಯಕ್ಷನ್ ಕಟ್ ಹೇಳಿದ್ದ ಮುರಳಿ ಮೋಹನ್. ಅಷ್ಟೇ ಅಲ್ಲ, ಹತ್ತಾರು ಸಿನಿಮಾಗಳಲ್ಲಿ ಕಲಾವಿದನಾಗಿಯೂ ಬಣ್ಣ ಹಚ್ಚಿದ್ದಾರೆ. ಇವ್ರ ಬಳಿ ಕೆಲಸ ಕಲಿತ ಸಾಕಷ್ಟು ಮಂದಿ ಡೈರೆಕ್ಟರ್‌ಗಳಾಗಿದ್ದಾರೆ. ಇಂತಹ ಹಿರಿಜೀವದ ಬಾಳಲ್ಲಿ ವಿಧಿ ದೊಡ್ಡ ಆಟ ಆಡಿದೆ. ಸದ್ಯ ಇವರ ಎರಡೂ ಕಿಡ್ನಿಗಳು ವೈಫಲ್ಯ ಕಂಡಿವೆ.

ವಾರಕ್ಕೆ ಮೂರು ಬಾರಿ ಡಯಾಲಿಸಿಸ್ ಮಾಡಿಸ್ತಿರೋ ಮುರಳಿ ಮೋಹನ್ ಅವರು, ಕಿಡ್ನಿ ಕಸಿ ಮಾಡಿಸೋಕೆ 25 ಲಕ್ಷ ರೂಪಾಯಿ ಆರ್ಥಿಕ ನೆರವು ಕೋರಿದ್ದಾರೆ. ಹೌದು.. ಕಿಡ್ನಿ ಕಸಿ ಮಾಡಿಸೋಕೆ ವೈದ್ಯರು 25 ಲಕ್ಷ ಹಣ ಕೇಳಿದ್ದು, ಸರ್ಜರಿ ಆದ ಬಳಿಕ 100 ದಿನಗಳ ಕಾಲ ಕ್ವಾರಂಟೀನ್‌ನಲ್ಲಿ ಕೂಡ ಇರಬೇಕಾಗುತ್ತೆ ಎನ್ನಲಾಗಿದೆ. ಜೆಸಿ ರಸ್ತೆಯಲ್ಲಿರೋ ಟ್ರಸ್ಟ್‌ ವೆಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರೋ ಇವರು, ನಮ್ಮ ಗ್ಯಾರಂಟಿ ನ್ಯೂಸ್ ಜೊತೆ ಅಳಲು ತೋಡಿಕೊಂಡಿದ್ದಾರೆ.

ಹಾರ್ಟ್‌ ಅಟ್ಯಾಕ್ ಕೂಡ ಆಗಿರೋ ಮುರಳಿ ಮೋಹನ್‌ಗೆ ಕಿಡ್ನಿ ಜೊತೆ ಹೃದಯ ಕೂಡ ಸಮಸ್ಯೆಯಿದೆ. ಗಟ್ಟಿ ಮನಸ್ಸಿನಿಂದ ಬದುಕ್ತಿರೋ ನಾನು, ಒಳಗೆ ತುಂಬಾ ಅಳುತ್ತಿದ್ದೇನೆ ಎಂದಿದ್ದಾರೆ. ಇವ್ರ ಕಷ್ಟಕ್ಕೆ ಉಪೇಂದ್ರ, ಸುದೀಪ್ ಅವರು ಸ್ಪಂದಿಸಿದ್ದು, ಕನ್ನಡಿಗರು ಕೈಹಿಡಿಯಬೇಕಿದೆ. ಕಳೆದ ಐದು ವರ್ಷಗಳಿಂದ ಅನಾರೋಗ್ಯ ಎದುರಿಸುತ್ತಿರೋ ಮುರಳಿ ಮೋಹನ್ ಅವರಿಗೆ ಹಣ ಬೇಗ ಹೊಂದಿಕೆ ಆಗಲಿ, ಕಿಡ್ನಿ ಕಸಿ ನಡೆದು, ಮೊದಲಿನಂತೆ ಅವರು ನಡೆದಾಡುವಂತಾಗಲಿ ಅನ್ನೋದು ನಮ್ಮ ಆಶಯ. ಇಲ್ಲಿ ಅವರ ಅಕೌಂಟ್ ಡಿಟೇಲ್ಸ್ ಇದೆ. ಕೈಲಾದಷ್ಟು ಸಹಾಯ ಮಾಡಿ, ಈ ಹಿರಿಜೀವವನ್ನು ಉಳಿಸಿಕೊಳ್ಳೋಣ.

Name: Murali S

AC No. 1641011025178

IFSC: UCBA0001641

Swift Code: UCBAINBB306

Bank: UCO Bank, KR Road Branch, Bangalore, Karnataka

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

Exit mobile version