ನಟ ಸುದೀಪ್‌ ಸಿನಿ ಪಯಣಕ್ಕೆ 30 ವರ್ಷ..ಫ್ಯಾನ್ಸ್‌ಗೆ ಭಾವುಕ ಪತ್ರ ಬರೆದ ಕಿಚ್ಚ..!

Untitled design 2026 01 31T143732.010

ಬೆಂಗಳೂರು: ಸ್ಯಾಂಡಲ್‌ವುಡ್‌ನ ‘ಅಭಿನಯ ಚಕ್ರವರ್ತಿ’ ಎಂದೇ ಖ್ಯಾತರಾದ ಕಿಚ್ಚ ಸುದೀಪ್ ಅವರು ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು ಇಂದಿಗೆ ಸರಿಯಾಗಿ 30 ವರ್ಷಗಳು. ಕನಸುಗಳ ಜೊತೆ ಆರಂಭವಾದ ಈ ಪಯಣ ಇಂದು ಭಾರತೀಯ ಚಿತ್ರರಂಗದಲ್ಲಿ ಗುರುತಿಸಿಕೊಳ್ಳುವಂತೆ ಬೆಳೆದಿದೆ. ಈ ಅಪರೂಪದ ಮೈಲಿಗಲ್ಲನ್ನು ಸುದೀಪ್ ಅವರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಭಾವುಕ ಪೋಸ್ಟ್ ಮೂಲಕ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

ತಮ್ಮ ಮೂರು ದಶಕಗಳ ಸಿನಿ ಜರ್ನಿಯನ್ನು ನೆನೆದು ಭಾವುಕರಾದ ಸುದೀಪ್, “ಮೂರು ದಶಕಗಳ ನಂತರ ಈ ಸುಂದರ ಸಿನಿರಂಗದಲ್ಲಿ ನಿಂತಿರುವಾಗ ನನ್ನ ಹೃದಯ ತುಂಬಿ ಬಂದಿದೆ. ಕನಸುಗಳ ಜೊತೆ ಆರಂಭಿಸಿದ ನನ್ನ ಪ್ರಯಾಣ ಇಷ್ಟು ದೊಡ್ಡದಾಗುತ್ತದೆ ಎಂದು ನಾನು ಅಂದು ಊಹಿಸಿರಲಿಲ್ಲ. ಇದಕ್ಕೆ ಕಾರಣ ನೀವು” ಎಂದು ಬರೆದುಕೊಂಡಿದ್ದಾರೆ..

ಸಿನಿಮಾ ಜೀವನದಲ್ಲಿ ಏರುಪೇರನ್ನು ಅನುಭವಿಸಿದ ಸುದೀಪ್, ಕಷ್ಟದ ದಿನಗಳಲ್ಲೂ ತಮ್ಮ ಬೆನ್ನಿಗೆ ನಿಂತ ಅಭಿಮಾನಿಗಳನ್ನು ವಿಶೇಷವಾಗಿ ನೆನಪಿಸಿಕೊಂಡಿದ್ದಾರೆ. “ಅಭಿಮಾನಿಗಳೇ ನೀವು ನನ್ನ ಶಕ್ತಿ. ನಿಮ್ಮ ಪ್ರೀತಿಯೇ ನನಗೆ ಮುಂದುವರೆಯುವ ಧೈರ್ಯ ನೀಡಿದೆ” ಎಂದು ಹೇಳುವ ಮೂಲಕ ಅಭಿಮಾನಿಗಳೊಂದಿಗೆ ಇರುವ ತಮ್ಮ ಬಾಂಧವ್ಯವನ್ನು ವ್ಯಕ್ತಪಡಿಸಿದ್ದಾರೆ.

ಸಿನಿಮಾ ಎಂಬುದು ಒಬ್ಬರ ಶ್ರಮವಲ್ಲ, ಅದು ಒಂದು ತಂಡದ ಸಾಧನೆ ಎಂಬ ಸತ್ಯವನ್ನು ಒತ್ತಿ ಹೇಳಿದ ಸುದೀಪ್, ತಮ್ಮ ಮೇಲೆ ನಂಬಿಕೆ ಇಟ್ಟು ಅವಕಾಶ ನೀಡಿದ ನಿರ್ದೇಶಕರು ಮತ್ತು ಬರಹಗಾರರಿಗೆ ಧನ್ಯವಾದ ತಿಳಿಸಿದ್ದಾರೆ. “ನನ್ನ ಮೇಲೆ ನಂಬಿಕೆ ಇಟ್ಟು ನನ್ನ ಕಲೆಯನ್ನು ನಂಬಿದ ನಿರ್ದೇಶಕರು ಹಾಗೂ ಬರಹಗಾರರಿಗೆ ನಾನು ಸದಾ ಋಣಿಯಾಗಿರುತ್ತೇನೆ” ಎಂದು ಅವರು ಹೇಳಿದ್ದಾರೆ. ಅದೇ ರೀತಿ ನಿರ್ಮಾಪಕರ ಧೈರ್ಯ ಮತ್ತು ವಿಶ್ವಾಸದಿಂದಲೇ ತಮ್ಮ ಕನಸುಗಳು ನನಸಾದವು ಎಂದು ಕೃತಜ್ಞತೆ ಸಲ್ಲಿಸಿದ್ದಾರೆ.

ತಮ್ಮ ಜೊತೆ ಕೆಲಸ ಮಾಡಿದ ಸಹನಟರು ಹಾಗೂ ತಾಂತ್ರಿಕ ವರ್ಗದವರ ಪರಿಶ್ರಮವನ್ನು ಸ್ಮರಿಸಿದ ಅವರು, “ಸಿನಿಮಾ ಒಬ್ಬರ ಕೆಲಸ ಅಲ್ಲ, ಇದು ತಂಡದ ಕೆಲಸ. ಪ್ರತಿಯೊಬ್ಬರ ಶ್ರಮವೂ ಅಮೂಲ್ಯ” ಎಂದು ಹೇಳಿದ್ದಾರೆ.

ಮಾಧ್ಯಮಗಳ ಪಾತ್ರವನ್ನೂ ಮರೆಯದ ಕಿಚ್ಚ, “ನೀವು ನನ್ನನ್ನು ಬೆಂಬಲಿಸಿ, ಪ್ರಶ್ನಿಸಿ, ಬೆಳೆಸಿದಿರಿ. ಅದಕ್ಕಾಗಿ ನಿಮಗೆ ಧನ್ಯವಾದಗಳು” ಎಂದು ಹೇಳಿದ್ದಾರೆ. ಜೊತೆಗೆ ಕನ್ನಡ ಚಿತ್ರರಂಗವೇ ತಮ್ಮ ಗುರುತು ಮತ್ತು ಗೌರವಕ್ಕೆ ಕಾರಣ ಎಂದು ಹೇಳಿಕೊಂಡು, “ಕನ್ನಡ ಸಿನೆಮಾ ನನ್ನ ಹೆಮ್ಮೆ” ಎಂದು ಹೆಮ್ಮೆಯಿಂದ ಉಲ್ಲೇಖಿಸಿದ್ದಾರೆ.

 ಸುದೀಪ್ ಅವರ ಈ ಮೂರು ದಶಕಗಳ ಸಾಧನೆಗೆ ಚಿತ್ರರಂಗದ ಗಣ್ಯರು ಹಾಗೂ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯಗಳ ಸುರಿಮಳೆ ಸುರಿಸುತ್ತಿದ್ದಾರೆ.

Exit mobile version