ಹುಬ್ಬಳ್ಳಿಯ ಸಿದ್ದಾರೂಢ ಮಠಕ್ಕೆ ಭೇಟಿ ನೀಡಿದ ಖ್ಯಾತ ಗಾಯಕ ಸೋನು ನಿಗಮ್

Untitled design 2026 02 09T105141.036

ಹುಬ್ಬಳ್ಳಿ: ಖ್ಯಾತ ಹಿನ್ನೆಲೆ ಗಾಯಕ ಸೋನು ನಿಗಮ್ ಅವರು ಇಂದು ವಾಣಿಜ್ಯ ನಗರಿ ಹುಬ್ಬಳ್ಳಿಯ ಇತಿಹಾಸ ಪ್ರಸಿದ್ಧ ಸಿದ್ದಾರೂಢ ಮಠಕ್ಕೆ ಭೇಟಿ ನೀಡಿದರು. ನಗರದ ಕಾರ್ಯಕ್ರಮ ನಿಮಿತ್ತ ಹುಬ್ಬಳ್ಳಿಗೆ ಆಗಮಿಸಿದ್ದ ಅವರು, ನೇರವಾಗಿ ಸಿದ್ದಾರೂಢ ಮಠಕ್ಕೆ ತೆರಳಿ ಸಿದ್ದಾರೂಢ ಸ್ವಾಮೀಜಿಗಳ ಗದ್ದುಗೆಯ ದರ್ಶನ ಪಡೆದರು. ಭಕ್ತಿಭಾವದಿಂದ ವಿಶೇಷ ಪೂಜೆ ಸಲ್ಲಿಸಿ ನಮಸ್ಕರಿಸಿದರು.

ಸಿದ್ದಾರೂಢರ ಗದ್ದುಗೆಯ ದರ್ಶನ ಪಡೆದ ನಂತರ, ಸೋನು ನಿಗಮ್ ಅವರು ಮಠದ ಸನ್ನಿಧಿಯಲ್ಲಿ ಸುಮಾರು ಹತ್ತು ನಿಮಿಷಗಳ ಕಾಲ ಮೌನವಾಗಿ ಕುಳಿತು ಧ್ಯಾನ ಮಾಡಿದರು. ಯಾವುದೇ ಮಾತುಕತೆ ಇಲ್ಲದೆ, ಸಂಪೂರ್ಣವಾಗಿ ಧ್ಯಾನದಲ್ಲೇ ತಲ್ಲೀನರಾಗಿದ್ದರು.

ವಿಶೇಷ ಅತಿಥಿಯಾಗಿ ಆಗಮಿಸಿದ ಸೋನು ನಿಗಮ್ ಅವರನ್ನು ಸಿದ್ದಾರೂಢ ಮಠದ ಟ್ರಸ್ಟ್ ವತಿಯಿಂದ ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು. ಮಠದ ಟ್ರಸ್ಟ್‌ ಅವರಿಗೆ ಶಾಲು ಹೊದಿಸಿ ಗೌರವ ಸನ್ಮಾನ ನಡೆಸಿದರು. ಇದೇ ವೇಳೆ ಸಿದ್ದಾರೂಢ ಸ್ವಾಮೀಜಿಗಳ ಸುಂದರವಾದ ಮೂರ್ತಿಯನ್ನು ಸ್ಮರಣಿಕೆಯಾಗಿ ನೀಡಿ ಅಭಿನಂದಿಸಿದರು. ಈ ಸನ್ಮಾನ ಸ್ವೀಕರಿಸಿದ ಸೋನು ನಿಗಮ್ ಅವರು ಮಠದ ಆಡಳಿತ ಮಂಡಳಿ ಮತ್ತು ಭಕ್ತರಿಗೆ ಧನ್ಯವಾದಗಳನ್ನು ಅರ್ಪಿಸಿದರು.

ಇತ್ತೀಚೆಗೆ ಸೋನು ನಿಗಮ್ ಅವರು ನೀಡಿದ್ದ ವಿವಾದಾತ್ಮಕ ಹೇಳಿಕೆಯಿಂದ ಕನ್ನಡಿಗರಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಏಪ್ರಿಲ್ 2025ರಲ್ಲಿ ಬೆಂಗಳೂರಿನ ಈಸ್ಟ್ ಪಾಯಿಂಟ್ ಕಾಲೇಜ್ ಆಫ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿಯಲ್ಲಿ ನಡೆದ ಸಂಗೀತ ಕಾರ್ಯಕ್ರಮವೊಂದರಲ್ಲಿ, ಅಭಿಮಾನಿಯೊಬ್ಬರು ಕನ್ನಡ ಹಾಡು ಹಾಡುವಂತೆ ಮನವಿ ಮಾಡಿದಾಗ ಸೋನು ನಿಗಮ್ ಅವರು ಅಸಮಾಧಾನ ವ್ಯಕ್ತಪಡಿಸಿದ್ದರು. ಈ ವೇಳೆ ಅವರು ನೀಡಿದ ಪ್ರತಿಕ್ರಿಯೆಯನ್ನು ಪಹಲ್ಗಾಮ್ ಉಗ್ರರ ದಾಳಿಗೆ ಹೋಲಿಸಿದ್ದಾಗಿ ಆರೋಪ ಕೇಳಿಬಂದಿತ್ತು.

ಈ ಹೇಳಿಕೆ ಕನ್ನಡಪರ ಸಂಘಟನೆಗಳನ್ನು ಕೆರಳಿಸಿತ್ತು. ಹಲವು ಸಂಘಟನೆಗಳು ಸೋನು ನಿಗಮ್ ವಿರುದ್ಧ ದೂರು ದಾಖಲಿಸಿ, ಸಾರ್ವಜನಿಕವಾಗಿ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದ್ದವು. ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಸೋನು ನಿಗಮ್ ಅವರ ವರ್ತನೆಗೆ ಭಾರೀ ಟೀಕೆ ವ್ಯಕ್ತವಾಗಿತ್ತು. ಕನ್ನಡ ಭಾಷೆ ಹಾಗೂ ಸಂಸ್ಕೃತಿಯ ಬಗ್ಗೆ ಅವಹೇಳನಕಾರಿ ನಿಲುವು ತಾಳಿದ್ದಾರೆ ಎಂಬ ಆರೋಪಗಳು ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲೇ ಗಾಯಕ ಸೋನು ನಿಗಮ್ ಅವರು ಸಿದ್ದಾರೂಢ ಮಠಕ್ಕೆ ಭೇಟಿ ನೀಡಿರುವುದು ವಿಶೇಷ ಗಮನ ಸೆಳೆದಿದೆ.

Exit mobile version