ಅರ್ಜುನ್ ಜನ್ಯ ಸೇರಿ ಅನೇಕ ಸಂಗೀತ ನಿರ್ದೇಶಕರಿಗೆ ರೂಪೇಶ್ ರಾಜಣ್ಣ ವಾರ್ನಿಂಗ್

Untitled design 2025 05 03t133748.224

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಗಾಯಕ ಸೋನು ನಿಗಮ್ ಅವರ ವಿವಾದಾತ್ಮಕ ಹೇಳಿಕೆಯಿಂದ ಭಾರೀ ಚರ್ಚೆಗೆ ಕಾರಣವಾಗಿದೆ. ಕನ್ನಡಿಗರ ಬಗ್ಗೆ, ಕರ್ನಾಟಕದ ಬಗ್ಗೆ ಅವಾಚ್ಯವಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ, ಕನ್ನಡ ಪರ ಹೋರಾಟಗಾರ ಹಾಗೂ ಬಿಗ್‌ಬಾಸ್ ಮಾಜಿ ಸ್ಪರ್ಧಿ ರೂಪೇಶ್ ರಾಜಣ್ಣ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸೋನು ನಿಗಮ್ ಅವಿವೇಕಿ, ದುರಹಂಕಾರಿ ಎಂದು ಕರೆದಿರುವ ರೂಪೇಶ್, ಕನ್ನಡ ಚಿತ್ರರಂಗದಿಂದ ಅವರನ್ನು ಬಹಿಷ್ಕರಿಸಬೇಕೆಂದು ಒತ್ತಾಯಿಸಿದ್ದಾರೆ. ಜೊತೆಗೆ, ಪ್ರಮುಖ ಸಂಗೀತ ನಿರ್ದೇಶಕರಾದ ಅರ್ಜುನ್ ಜನ್ಯ, ವಿ. ಹರಿಕೃಷ್ಣ, ಮತ್ತು ಅಜನೀಶ್ ಲೋಕನಾಥ್ ಅವರಿಗೆ ಎಚ್ಚರಿಕೆ ನೀಡಿದ್ದಾರೆ.

ರೂಪೇಶ್ ರಾಜಣ್ಣ, ಸೋನು ನಿಗಮ್ ಕನ್ನಡಿಗರನ್ನು ಭಯೋತ್ಪಾದಕರೆಂದು ಕರೆದಿದ್ದಾರೆ ಎಂದು ಆರೋಪಿಸಿದ್ದಾರೆ. “ಆತನ ಮುಖವನ್ನೂ ನೋಡಲು ಇಷ್ಟವಿಲ್ಲ. ಕನ್ನಡ ಚಿತ್ರರಂಗದಿಂದ ಈ ವ್ಯಕ್ತಿಯನ್ನು ಸಂಪೂರ್ಣವಾಗಿ ಬ್ಯಾನ್ ಮಾಡಬೇಕು. ಯಾವುದೇ ಚಿತ್ರತಂಡ ಸೋನು ಅವರನ್ನು ಕರೆದು ಹಾಡು ಹಾಡಿಸಿದರೆ, ಆ ಚಿತ್ರವನ್ನು ಬಿಡುಗಡೆಯಾಗದಂತೆ ತಡೆಯುತ್ತೇವೆ,” ಎಂದು ರೂಪೇಶ್ ತೀವ್ರವಾಗಿ ಹೇಳಿದ್ದಾರೆ. ಅವರು ಕನ್ನಡ ಚಿತ್ರರಂಗದ ವಾಣಿಜ್ಯ ಮಂಡಳಿಯನ್ನು ಎಚ್ಚರಿಸಿದ್ದು, ಸೋನು ನಿಗಮ್ ಯಾವುದೇ ಕನ್ನಡ ಚಿತ್ರದಲ್ಲಿ ಹಾಡಿದರೆ ಮಂಡಳಿಯೇ ನೇರವಾಗಿ ಹೊಣೆಗಾರನಾಗುತ್ತದೆ ಎಂದಿದ್ದಾರೆ.

ಕರ್ನಾಟಕದಲ್ಲಿ ಸೋನು ನಿಗಮ್ ತಮ್ಮ ಖ್ಯಾತಿಯನ್ನು ಗಳಿಸಿದ್ದಾರೆ ಎಂದು ರೂಪೇಶ್ ರಾಜಣ್ಣ ಉಲ್ಲೇಖಿಸಿದ್ದಾರೆ. “ಕರ್ನಾಟಕದ ಜನರಿಂದಲೇ ಈ ವ್ಯಕ್ತಿಗೆ ಗೌರವ, ಖ್ಯಾತಿ ಸಿಕ್ಕಿದೆ. ಆದರೆ ಇದೀಗ ಕನ್ನಡಿಗರ ವಿರುದ್ಧವೇ ಮಾತನಾಡುತ್ತಿದ್ದಾರೆ. ಖಾಸಗಿ ಕಾರ್ಯಕ್ರಮಗಳಿಗೆ ಸೋನು ಅವರನ್ನು ಕರೆಸಿಕೊಳ್ಳುವವರಿಗೆ ನಾಚಿಕೆಯಾಗಬೇಕು,” ಎಂದು ಕಿಡಿಕಾರಿದ್ದಾರೆ. ಅಲ್ಲದೆ, ಕನ್ನಡಿಗರನ್ನು ಗುರಿಯಾಗಿಸಿಕೊಂಡು ದೊಡ್ಡ ಸೆಲೆಬ್ರಿಟಿಗಳು ಟೀಕೆ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರೂಪೇಶ್ ರಾಜಣ್ಣ ಅವರ ಈ ಹೇಳಿಕೆಯು ಕನ್ನಡ ಚಿತ್ರರಂಗದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಅವರು ಸಂಗೀತ ನಿರ್ದೇಶಕರಿಗೆ ನೇರವಾಗಿ ಎಚ್ಚರಿಕೆ ನೀಡಿರುವುದು ಗಮನಾರ್ಹ. “ಅರ್ಜುನ್ ಜನ್ಯ, ಹರಿಕೃಷ್ಣ, ಅಜನೀಶ್ ಲೋಕನಾಥ್ ಸೇರಿದಂತೆ ಯಾವುದೇ ಸಂಗೀತ ನಿರ್ದೇಶಕರು ಸೋನು ನಿಗಮ್ ಅವರಿಂದ ಹಾಡು ಹಾಡಿಸಿದರೆ, ನೀವೇ ನೇರವಾಗಿ ಹೊಣೆಗಾರರಾಗುತ್ತೀರಿ. ಇದು ಕನ್ನಡಿಗರ ವಿರುದ್ಧ ನಿಮ್ಮ ನಿಲುವನ್ನು ಪ್ರತಿಬಿಂಬಿಸುತ್ತದೆ,” ಎಂದು ಎಚ್ಚರಿಕೆ ನೀಡಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ಸೋನು ನಿಗಮ್ ಅವರ ಹಾಡುಗಳು ಜನಪ್ರಿಯವಾಗಿವೆ. ಆದರೆ, ಈ ಇತ್ತೀಚಿನ ವಿವಾದದಿಂದಾಗಿ ಅವರ ಕನ್ನಡ ಚಿತ್ರರಂಗದ ಭವಿಷ್ಯದ ಬಗ್ಗೆ ಪ್ರಶ್ನೆಗಳು ಎದ್ದಿವೆ. ರೂಪೇಶ್ ರಾಜಣ್ಣ ಅವರ ಕರೆಯನ್ನು ಕನ್ನಡ ಚಿತ್ರರಂಗದ ನಿರ್ಮಾಪಕರು, ಸಂಗೀತ ನಿರ್ದೇಶಕರು ಹೇಗೆ ಸ್ವೀಕರಿಸುತ್ತಾರೆ ಎಂಬುದು ಕಾದುನೋಡಬೇಕಿದೆ.

Exit mobile version