ಬೆಂಗಳೂರು: ಖ್ಯಾತ ಗಾಯಕ ಸೋನು ನಿಗಮ್ ಅವರನ್ನು ಕನ್ನಡ ಚಲನಚಿತ್ರ ರಂಗದಿಂದ ನಿಷೇಧಿಸಲು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ (ಫಿಲ್ಮ್ ಚೇಂಬರ್) ತೀರ್ಮಾನ ಕೈಗೊಂಡಿದೆ.
ಇಂದು ನಡೆದ ಫಿಲ್ಮ್ ಚೇಂಬರ್‌ನ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದ್ದು, ಕನ್ನಡಿಗರ ಆಕ್ರೋಶ ಮತ್ತು ಕನ್ನಡಪರ ಸಂಘಟನೆಗಳ ಒತ್ತಡದ ಬೆನ್ನಲ್ಲೇ ಈ ಕ್ರಮ ಕೈಗೊಳ್ಳಲಾಗಿದೆ.
ಹೌದು, ಇತ್ತೀಚೆಗೆ ಬೆಂಗಳೂರಿನ ಈಸ್ಟ್ ಪಾಯಿಂಟ್ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ, ವಿದ್ಯಾರ್ಥಿಯೊಬ್ಬ ಕನ್ನಡ ಹಾಡು ಹಾಡುವಂತೆ ಕೇಳಿದಾಗ, ಸೋನು ನಿಗಮ್ ಅವರು “ಕನ್ನಡ, ಕನ್ನಡ ಎಂದಿದ್ದಕ್ಕೆ ಪಹಲ್ಗಾಮ್‌ನಲ್ಲಿ ಭಯೋತ್ಪಾದಕ ದಾಳಿ ಆಗಿದೆ” ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಹೇಳಿಕೆಯು ಕನ್ನಡಿಗರ ಭಾವನೆಗಳಿಗೆ ಧಕ್ಕೆ ತಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಕನ್ನಡಪರ ಸಂಘಟನೆಗಳು ಸೋನು ನಿಗಮ್ ಅವರನ್ನು ಕನ್ನಡ ಚಿತ್ರರಂಗದಿಂದ ನಿಷೇಧಿಸುವಂತೆ ಒತ್ತಾಯಿಸಿದ್ದವು.
ಫಿಲ್ಮ್ ಚೇಂಬರ್ ಅಧ್ಯಕ್ಷ ಎನ್.ಎಂ. ನರಸಿಂಹಲು ಅವರು, ಸೋನು ನಿಗಮ್ ಅವರಿಗೆ ಕನ್ನಡ ಚಿತ್ರರಂಗದಲ್ಲಿ ಹಾಡಲು ಅವಕಾಶ ನೀಡದಿರಲು ತೀರ್ಮಾನಿಸಿದ್ದಾರೆ. ಅಲ್ಲದೆ, ಕನ್ನಡಿಗರಿಗೆ ಸಾರ್ವಜನಿಕವಾಗಿ ಕ್ಷಮೆಯಾಚಿಸುವವರೆಗೆ ಕರ್ನಾಟಕದ ಯಾವುದೇ ಸಂಗೀತ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತಿಲ್ಲ ಎಂದು ಆದೇಶಿಸಲಾಗಿದೆ. ಸೋನು ನಿಗಮ್ ವಿರುದ್ಧ ಆವಲಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
ಕನ್ನಡ ಚಿತ್ರರಂಗದ ಪ್ರಮುಖರಾದ ನಿರ್ಮಾಪಕ ಕಾರ್ತಿಕ್ ಗೌಡ, ಕನ್ನಡಪರ ಹೋರಾಟಗಾರ ಸಾರಾ ಗೋವಿಂದು ಮತ್ತು ಕರವೇ ಅಧ್ಯಕ್ಷ ನಾರಾಯಣ ಗೌಡ ಅವರು ಸೋನು ನಿಗಮ್ ಅವರ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. “ಕನ್ನಡ ಭಾಷೆಯನ್ನು ಭಯೋತ್ಪಾದಕತೆಗೆ ಹೋಲಿಸಿರುವುದು ಕ್ಷಮಾರ್ಹವಲ್ಲ. ಸೋನು ನಿಗಮ್ ಕೂಡಲೇ ಕನ್ನಡಿಗರಲ್ಲಿ ಕ್ಷಮೆ ಕೇಳಬೇಕು” ಎಂದು ನಾರಾಯಣ ಗೌಡ ಆಗ್ರಹಿಸಿದ್ದಾರೆ.
ಸೋನು ನಿಗಮ್ ಅವರು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಳ್ಳುವ ಪ್ರಯತ್ನ ಮಾಡಿದ್ದು, “ನಾನು ಕನ್ನಡಿಗರಿಗೆ ವಿರುದ್ಧವಾಗಿ ಮಾತನಾಡಿಲ್ಲ, ಕೆಲವು ಯುವಕರು ಬೆದರಿಕೆ ಒಡ್ಡುವ ರೀತಿಯಲ್ಲಿ ಕೇಳಿದ್ದಕ್ಕೆ ಪ್ರತಿಕ್ರಿಯಿಸಿದೆ” ಎಂದು ಸ್ಪಷ್ಟನೆ ನೀಡಿದ್ದಾರೆ. ಆದರೆ, ಈ ಸಮರ್ಥನೆಯು ಕನ್ನಡಿಗರ ಆಕ್ರೋಶವನ್ನು ತಣ್ಣಗಾಗಿಸಿರಲಿಲ್ಲ.