ನಟ ಹಾಗೂ ನಿರ್ಮಾಪಕ ಶಿವಕಾರ್ತಿಕೇಯನ್ ಮತ್ತೆ ಸುದ್ದಿಯಲ್ಲಿದ್ದಾರೆ. ಈ ಬಾರಿ ಅವರು ಸಿನಿಮಾ ಅಥವಾ ಅಭಿನಯದ ಕಾರಣಕ್ಕೆ ಮಾತ್ರವಲ್ಲ, ತಮ್ಮ ಉದಾರ ಗುಣದಿಂದ ಗಮನ ಸೆಳೆದಿದ್ದಾರೆ. ತಮ್ಮ ನಿರ್ಮಾಣ ಸಂಸ್ಥೆಯಡಿ ಮೂಡಿಬಂದ ‘ತಾಯಿ ಕಿಳವಿ’ ಸಿನಿಮಾ ಭರ್ಜರಿ ಯಶಸ್ಸು ಕಂಡ ಹಿನ್ನೆಲೆ, ಚಿತ್ರದ ನಿರ್ದೇಶಕ ಶಿವಕುಮಾರ್ ಮುರುಗೇಶನ್ ಅವರಿಗೆ ಶಿವಕಾರ್ತಿಕೇಯನ್ ದುಬಾರಿ ಮಹೀಂದ್ರಾ BE 6 ಕಾರನ್ನು ಉಡುಗೊರೆಯಾಗಿ ನೀಡಿ ಅಚ್ಚರಿ ಮೂಡಿಸಿದ್ದಾರೆ.
‘ತಾಯಿ ಕಿಳವಿ’ ಸಿನಿಮಾ ಬಿಡುಗಡೆಯಾದ ಬಳಿಕ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಭಾವನಾತ್ಮಕ ಕಥಾಹಂದರ, ಮಾನವೀಯ ಸಂಬಂಧಗಳ ಚಿತ್ರಣ ಮತ್ತು ಹೆಣ್ಣಿನ ಧ್ವನಿಗೆ ಗೌರವ ನೀಡುವ ವಿಷಯವಸ್ತುವಿನ ಮೂಲಕ ಈ ಚಿತ್ರವು ಪ್ರೇಕ್ಷಕರ ಮನಸ್ಸು ಗೆದ್ದಿತ್ತು. ವಿಶೇಷವೆಂದರೆ, ದೊಡ್ಡ ಸ್ಟಾರ್ ಸಿನಿಮಾಗಳಂತೆ ಟಿಕೆಟ್ ದರವನ್ನು ಹೆಚ್ಚಿಸದೇ, ಸಾಮಾನ್ಯ ದರದಲ್ಲೇ ಬಿಡುಗಡೆಗೊಂಡಿದ್ದರೂ ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಮಟ್ಟದ ಕಲೆಕ್ಷನ್ ಮಾಡಿತ್ತು. ವಾಣಿಜ್ಯಾತ್ಮಕ ಯಶಸ್ಸಿನ ಜೊತೆಗೆ ವಿಮರ್ಶಕರ ಮೆಚ್ಚುಗೆಯನ್ನೂ ಈ ಚಿತ್ರ ಪಡೆದುಕೊಂಡಿತ್ತು.
ಚಿತ್ರವು ಚಿತ್ರಮಂದಿರಗಳಲ್ಲಿ ಯಶಸ್ವಿಯಾಗಿ 100 ದಿನಗಳನ್ನು ಪೂರೈಸಿದ ಸಂಭ್ರಮಾಚರಣೆ ವೇಳೆ ಶಿವಕಾರ್ತಿಕೇಯನ್ ಈ ವಿಶೇಷ ಉಡುಗೊರೆಯನ್ನು ನಿರ್ದೇಶಕರಿಗೆ ನೀಡಿದರು. ಈ ಸಂದರ್ಭದ ಫೋಟೋಗಳನ್ನು ಶಿವಕಾರ್ತಿಕೇಯನ್ ಪ್ರೊಡಕ್ಷನ್ಸ್ ತನ್ನ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, “ನಾವು ಯಾವಾಗಲೂ ಹೆಮ್ಮೆಪಡುವಂತಹ ಪ್ರಯಾಣಕ್ಕೆ ಒಂದು ವಿಶೇಷ ಉಡುಗೊರೆ” ಎಂದು ಬರೆದುಕೊಂಡಿದೆ. ಜೊತೆಗೆ ಚಿತ್ರದ ಯಶಸ್ಸಿಗೆ ಶ್ರಮಿಸಿದ ಕಲಾವಿದರು, ತಂತ್ರಜ್ಞರು, ವಿತರಕರು ಮತ್ತು ಪ್ರದರ್ಶಕರಿಗೆ ಸಂಸ್ಥೆ ಧನ್ಯವಾದಗಳನ್ನು ಸಲ್ಲಿಸಿದೆ.
ಈ ಚಿತ್ರದಲ್ಲಿ ಹಿರಿಯ ನಟಿ ರಾಧಿಕಾ ಶರತ್‌ಕುಮಾರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಅವರ ಅಭಿನಯಕ್ಕೂ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗಿತ್ತು. ಕೆಲವು ತಿಂಗಳುಗಳ ಹಿಂದೆ ನಡೆದ ಚಿತ್ರದ ಯಶಸ್ಸಿನ ಕಾರ್ಯಕ್ರಮದಲ್ಲಿ ರಾಧಿಕಾ ಮಾತನಾಡುತ್ತಾ ನಿರ್ದೇಶಕ ಶಿವಕುಮಾರ್ ಮುರುಗೇಶನ್ ಅವರನ್ನು ಶ್ಲಾಘಿಸಿದ್ದರು. ಆ ವೇಳೆ ಅವರು, “ಒಮ್ಮೆ ಕಮಲ್ ಹಾಸನ್ ನನ್ನೊಂದಿಗೆ ಮಾತನಾಡುತ್ತಾ, ಈ ಸಿನಿಮಾ ಯಶಸ್ವಿಯಾಗಬೇಕು ಎಂದು ಹೇಳಿದರು. ಸಿನಿಮಾ ಚೆನ್ನಾಗಿದ್ದರೆ ನನಗೆ ಮೆಚ್ಚುಗೆ ಸಿಗಬಹುದು. ಆದರೆ ಇದು ಸೂಪರ್ ಹಿಟ್ ಆದರೆ ನಿರ್ದೇಶಕ ಶಿವಕುಮಾರ್ ಮುರುಗೇಶನ್ ಸೇರಿದಂತೆ ಈ ಸಿನಿಮಾದ ಎಲ್ಲರಿಗೂ ದೊಡ್ಡ ಬ್ರೇಕ್ ಸಿಗುತ್ತದೆ ಎಂದು ಹೇಳಿದ್ದರು” ಎಂದು ನೆನಪಿಸಿಕೊಂಡಿದ್ದರು.
ಈ ಹೇಳಿಕೆ ಈಗ ನಿಜವಾಗುತ್ತಿರುವಂತೆ ಕಾಣುತ್ತಿದೆ. ‘ತಾಯಿ ಕಿಳವಿ’ ಚಿತ್ರದ ಯಶಸ್ಸು ನಿರ್ದೇಶಕ ಶಿವಕುಮಾರ್ ಮುರುಗೇಶನ್ ಅವರಿಗೆ ದೊಡ್ಡ ಗುರುತನ್ನು ತಂದಿದೆ. ಅದರ ಜೊತೆಗೆ, ಅವರ ಪರಿಶ್ರಮವನ್ನು ಗೌರವಿಸಿ ಶಿವಕಾರ್ತಿಕೇಯನ್ ನೀಡಿದ ಈ ದುಬಾರಿ ಕಾರು ಉಡುಗೊರೆ ತಮಿಳು ಚಿತ್ರರಂಗದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಯಶಸ್ಸಿನ ಹಾದಿಯಲ್ಲಿ ಜೊತೆ ನಿಂತವರನ್ನು ಮರೆತೇ ಬಿಡದೇ, ಅವರ ಪರಿಶ್ರಮಕ್ಕೆ ಮೌಲ್ಯ ನೀಡುವ ಶಿವಕಾರ್ತಿಕೇಯನ್ ಅವರ ಈ ನಡೆಗೆ ಸಿನಿಪ್ರಿಯರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
