ಉಪೇಂದ್ರ, ವಿಜಯ್, ಆಶಿಕಾಗೆ ಸೈಮಾ ಗರಿ.. ದುಬೈ ರಂಗು

ಮ್ಯಾಕ್ಸ್‌ಗೆ ಬೆಸ್ಟ್ ಆ್ಯಕ್ಟರ್.. ಶೂಟಿಂಗ್‌ನಿಂದ ಸುದೀಪ್ ಗೈರು

111 (14)

ಪ್ರತೀ ವರ್ಷದಂತೆ ಈ ವರ್ಷವೂ ದುಬೈನಲ್ಲಿ ಪ್ರತಿಷ್ಠಿತ ಸೈಮಾ ಅವಾರ್ಡ್‌ ಫಂಕ್ಷನ್ ಬಹಳ ಅದ್ಧೂರಿಯಾಗಿ ನಡೆದಿದೆ. ಸೌತ್‌ನ ಎಲ್ಲಾ ಸೂಪರ್ ಸ್ಟಾರ್‌‌ಗಳು ಭಾಗಿಯಾಗಿ, ಕಾರ್ಯಕ್ರಮ ಸಿಕ್ಕಾಪಟ್ಟೆ ರಂಗೇರಿದೆ. ಆ ಕಲರ್‌‌ಫುಲ್ ವೇದಿಕೆಯಲ್ಲಿ ಕನ್ನಡದ ಕಿಚ್ಚ, ಉಪೇಂದ್ರ, ದುನಿಯಾ ವಿಜಯ್, ರಶ್ಮಿಕಾ ಸೇರಿದಂತೆ ಯಾವೆಲ್ಲಾ ಸ್ಟಾರ್ಸ್‌ ಅವಾರ್ಡ್ಸ್ ಪಡೆದ್ರು ಅನ್ನೋದ್ರ ಕಂಪ್ಲೀಟ್ ಕಹಾನಿ ಇಲ್ಲಿದೆ.

ಕಳೆದ 2024ನೇ ಸಾಲಿನ ಬೆಸ್ಟ್ ಸಿನಿಮಾಗಳಿಗೆ, ಕಲಾವಿದರಿಗೆ ಹಾಗೂ ತಂತ್ರಜ್ಞರಿಗೆ ಪ್ರತೀ ವರ್ಷದಂತೆ ಈ ವರ್ಷವೂ ಸೈಮಾ ಪ್ರಶಸ್ತಿಗಳನ್ನ ನೀಡಿ ಗೌರವಿಸಲಾಗಿದೆ. ಎಂದಿನಂತೆ ಈ ಬಾರಿ ಕೂಡ ದುಬೈನಲ್ಲಿ ಸೈಮಾ ಅವಾರ್ಡ್‌ ಫಂಕ್ಷನ್ ಬಹಳ ಕಲರ್‌‌ಫುಲ್ ಹಾಗೂ ಅದ್ಧೂರಿಯಾಗಿ ರಂಗೇರಿದೆ. ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಚಿತ್ರರಂಗಗಳೇ ದುಬೈನಲ್ಲಿ ಬೀಡು ಬಿಡುವುದರ ಮೂಲಕ ಕಾರ್ಯಕ್ರಮ ಗಳೆಗಟ್ಟಿತ್ತು.

ಮ್ಯಾಕ್ಸ್ ಚಿತ್ರದ ನಟನೆಗಾಗಿ ಬಾದ್‌ಷಾ ಸುದೀಪ್‌‌ ಬೆಸ್ಟ್ ಆ್ಯಕ್ಟರ್ ಅವಾರ್ಡ್‌ ಮುಡಿಗೇರಿಸಿಕೊಂಡರು. ಆದ್ರೆ ಕಿಚ್ಚ ಮಾರ್ಕ್ ಚಿತ್ರದ ಶೂಟಿಂಗ್‌‌ನಲ್ಲಿ ಬ್ಯುಸಿ ಇರೋದ್ರಿಂದ ಅವಾರ್ಡ್‌ ಫಂಕ್ಷನ್‌‌ಗೆ ಗೈರಾಗಿದ್ದಾರೆ. ಇನ್ನು ಯುಐ ಚಿತ್ರದ ನಿರ್ದೇಶನಕ್ಕಾಗಿ ಬೆಸ್ಟ್ ಡೈರೆಕ್ಟರ್ ಅವಾರ್ಡ್‌ನ ರಿಯಲ್ ಸ್ಟಾರ್‌‌ ಪಡೆದರೆ, ಭೀಮ ಚಿತ್ರದ ನಟನೆಗಾಗಿ ಬೆಸ್ಟ್ ಕ್ರಿಟಿಕ್ ಅವಾರ್ಡ್‌ ದುನಿಯಾ ವಿಜಯ್ ಪಾಲಾಯಿತು.

O2 ಚಿತ್ರದ ಅಭಿನಯಕ್ಕಾಗಿ ಆಶಿಕಾ ರಂಗನಾಥ್‌ಗೆ ಬೆಸ್ಟ್ ಆಕ್ಟ್ರೆಸ್ ಪ್ರಶಸ್ತಿ ಪಡೆದರೆ, ಅತ್ಯುತ್ತಮ ಚೊಚ್ಚಲ ನಟ ಹಾಗೂ ಭರವಸೆ ಮೂಡಿಸಿದ ಹೊಸ ಪ್ರತಿಭೆ ಪ್ರಶಸ್ತಿಗೆ ಗೌರಿ ಚಿತ್ರದ ಯುವ ಜೋಡಿ ಸಮರ್ಜೀತ್-ಸಾನ್ಯ ಅಯ್ಯರ್ ಪಾತ್ರರಾದರು. ಅತ್ಯುತ್ತಮ ಚೊಚ್ಚಲ ನಟಿ ಅವಾರ್ಡ್‌‌ನ ಇಬ್ಬನಿ ತಬ್ಬಿದ ಇಳೆಯಲಿ ಚಿತ್ರಕ್ಕಾಗಿ ಅಂಕಿತಾ ಅಮರ್ ಮುಡಿಗೇರಿಸಿಕೊಂಡರು.

ಬೆಸ್ಟ್ ಫಿಲ್ಮ್ ಆಗಿ ಗೋಲ್ಡನ್ ಸ್ಟಾರ್ ಗಣೇಶ್‌ರ ಕೃಷ್ಣಂ ಪ್ರಣಯಸಖಿ ತಂಡ ಅವಾರ್ಡ್‌ ಪಡೆಯಿತು. ಅದೇ ಚಿತ್ರದ ದ್ವಾಪರ ಗೀತೆಯ ಗಾಯನಕ್ಕೆ ಜಸ್ಕರಣ್ ಸಿಂಗ್‌ ಹಾಗೂ ಮ್ಯಾಕ್ಸ್ ಚಿತ್ರದ ಗಾಯನಕ್ಕೆ ಐಶ್ವರ್ಯಾ ರಂಗರಾಜನ್‌ಗೆ ಬೆಸ್ಟ್ ಸಿಂಗರ್ ಅವಾರ್ಡ್‌ಗಳು ಬಂದಿವೆ. ಮ್ಯಾಕ್ಸ್‌ ಚಿತ್ರದ ಸಂಗೀತ ಸಂಯೋಜನೆಗೆ ಅಜನೀಶ್ ಲೋಕನಾಥ್ ಹಾಗೂ ಕೊರಿಯೋಗ್ರಫಿ ವಿಭಾಗದಲ್ಲಿ ಇಮ್ರಾನ್ ಸರ್ದಾರಿಯಾ ಕೂಡ ಸೈಮಾ ಅವಾರ್ಡ್‌ ಸ್ವೀಕರಿಸಿ, ಸಂಭ್ರಮಿಸಿದರು.

ಇನ್ನೂ ಟಾಲಿವುಡ್‌ನ ಬೆಸ್ಟ್ ಆ್ಯಕ್ಟರ್ ಹಾಗೂ ಆ್ಯಕ್ಟ್ರೆಸ್ ಪ್ರಶಸ್ತಿಗಳನ್ನ ಪುಷ್ಪ-2 ನಟನೆಗಾಗಿ ಅಲ್ಲು ಅರ್ಜುನ್ ಹಾಗೂ ನಮ್ಮ ಕನ್ನಡತಿ ರಶ್ಮಿಕಾ ಮಂದಣ್ಣ ಪಡೆದರು. ಅಲ್ಲದೆ, ಸುಹಾಸಿನಿ ಮಣಿರತ್ನಂ, ಕಮಲ್ ಹಾಸನ್, ರಾಕ್‌ಲೈನ್ ವೆಂಕಟೇಶ್, ಪ್ರಣಿತಾ, ಖಷ್ಬೂ, ಸುಮಲತಾ ಅಂಬರೀಶ್, ಮಾನ್ವಿತಾ, ಅಕುಲ್ ಬಾಲಾಜಿ, ಪ್ರಿಯಾಂಕಾ ಉಪೇಂದ್ರ ಸೇರಿದಂತೆ ಸಾಕಷ್ಟು ಮಂದಿ ತಾರೆಯರು ಸೈಮಾ ಅವಾರ್ಡ್‌ ಫಂಕ್ಷನ್‌‌ನಲ್ಲಿ ಲಕಲಕ ಮಿಂಚಿದ್ರು.

Exit mobile version