ತಿರುವನಂತಪುರಂ (ಆಗಸ್ಟ್ 07, 2025): ರಾಷ್ಟ್ರ ಪ್ರಶಸ್ತಿ ವಿಜೇತೆ, ಮಲಯಾಳಂ ಚಿತ್ರರಂಗದ ಖ್ಯಾತ ನಟಿ ಶ್ವೇತಾ ಮೆನನ್ ವಿರುದ್ಧ ಅಶ್ಲೀಲ ವಿಡಿಯೋಗಳು ಮತ್ತು ಜಾಹೀರಾತುಗಳಲ್ಲಿ ನಟಿಸಿದ್ದಾರೆ ಎಂಬ ಆರೋಪ ಗಂಭೀರ ಸ್ವರೂಪ ಪಡೆದುಕೊಂಡಿದೆ. ಲಾಭಕ್ಕಾಗಿ ವಯಸ್ಕರ ಸಿನಿಮಾಗಳು, ವೆಬ್‌ಸೈಟ್‌ಗಳು, ಮತ್ತು ಅಶ್ಲೀಲ ಜಾಹೀರಾತುಗಳಲ್ಲಿ ಭಾಗವಹಿಸಿದ್ದಾರೆ ಎಂದು ದೂರಲಾಗಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ಹೈಕೋರ್ಟ್ ಶ್ವೇತಾ ಮೆನನ್ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ಗೆ ಮಧ್ಯಂತರ ತಡೆಯಾಜ್ಞೆ ನೀಡಿದೆ. ಈ ಆದೇಶದಿಂದ ನಟಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ.
ಸಾಮಾಜಿಕ ಕಾರ್ಯಕರ್ತ ಮಾರ್ಟಿನ್ ಮನಶೆರ್ ಸಲ್ಲಿಸಿದ ದೂರಿನಲ್ಲಿ, ಶ್ವೇತಾ ಮೆನನ್ ಹಣಕ್ಕಾಗಿ ಅಶ್ಲೀಲ ವಿಡಿಯೋಗಳು ಮತ್ತು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಈ ವಿಡಿಯೋಗಳನ್ನು ಅಶ್ಲೀಲ ವೆಬ್‌ಸೈಟ್‌ಗಳಿಗೆ ಮಾರಾಟ ಮಾಡಲಾಗುತ್ತಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ರಾಷ್ಟ್ರ ಪ್ರಶಸ್ತಿ ವಿಜೇತೆಯಾದ ನಟಿಯ ಈ ಕೃತ್ಯಗಳು ಸಮಾಜದ ಮೇಲೆ, ವಿಶೇಷವಾಗಿ ಯುವ ಜನತೆ ಮತ್ತು ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರುತ್ತಿವೆ ಎಂದು ಆರೋಪಿಸಲಾಗಿದೆ. ಈ ದೂರಿನ ಬೆನ್ನಲ್ಲೇ ಶ್ವೇತಾ ಮೆನನ್ ಎಫ್‌ಐಆರ್ ರದ್ದುಗೊಳಿಸುವಂತೆ ಕೋರಿ ಕೇರಳ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಜಸ್ಟೀಸ್ ವಿಜಿ ಅರುಣ್ ಅವರ ನೇತೃತ್ವದಲ್ಲಿ ನಡೆದ ವಿಚಾರಣೆಯಲ್ಲಿ, ನಟಿಯ ವಿರುದ್ಧದ ವಿಚಾರಣೆಗೆ ತಡೆಯಾಜ್ಞೆ ನೀಡಲಾಗಿದೆ.
ಶ್ವೇತಾ ಮೆನನ್ ಮಲಯಾಳಂ ಚಿತ್ರರಂಗದಲ್ಲಿ ಜನಪ್ರಿಯ ನಟಿಯಾಗಿ, ನಿರೂಪಕಿಯಾಗಿ, ಮತ್ತು ರಿಯಾಲಿಟಿ ಶೋಗಳಲ್ಲಿ ಭಾಗವಹಿಸುವ ಮೂಲಕ ಗಮನ ಸೆಳೆದಿದ್ದಾರೆ. ಆದರೆ, ಈ ಆರೋಪಗಳು ಕೇರಳದಲ್ಲಿ ಭಾರಿ ಕೋಲಾಹಲ ಸೃಷ್ಟಿಸಿವೆ.
ದೂರಿನ ಹಿಂದಿನ ರಾಜಕೀಯ?
ನಟಿಯ ವಿರುದ್ಧ ದಿಢೀರ್ ದೂರು ದಾಖಲಾಗಿರುವುದಕ್ಕೆ ರಾಜಕೀಯ ಒತ್ತಡವೇ ಕಾರಣ ಎಂದು ಶ್ವೇತಾ ಅವರ ಬೆಂಬಲಿಗರು ಆರೋಪಿಸಿದ್ದಾರೆ. ಮಲಯಾಳಂ ಚಲನಚಿತ್ರ ಸಂಘ (AMMA) ಅಧ್ಯಕ್ಷ ಸ್ಥಾನಕ್ಕೆ ಶ್ವೇತಾ ಸ್ಪರ್ಧಿಸುತ್ತಿರುವುದು ಈ ದೂರಿನ ಹಿಂದಿನ ಕಾರಣವಿರಬಹುದು ಎಂದು ಊಹಿಸಲಾಗಿದೆ.