ಸ್ಯಾಂಡಲ್‌ವುಡ್ ಸೆಂಚುರಿ ಸ್ಟಾರ್ ಶಿವಣ್ಣ ತೆಲುಗಿನ ಗ್ಲೋಬಲ್ ಸ್ಟಾರ್ ರಾಮ್ ಚರಣ್ ಕೈಗೆ ‘ಲಾಂಗ್’ ಕೊಟ್ಟು ಅಖಾಡಕ್ಕಿಳಿಸಿದ್ರೆ ಹೇಗಿರುತ್ತೆ..? ಇಷ್ಟಕ್ಕೂ ಶಿವಣ್ಣ ಕೊಟ್ಟ ಆ ಒಂದೇ ಒಂದು ಡೈಲಾಗ್ ಕೇಳಿ, ರಾಮ್ ಚರಣ್ ಮೈಯೆಲ್ಲಾ ನಡುಗಿ, ಕೈ ಮುಗಿದಿದ್ದು ಏಕೆ..?ಅಷ್ಟೇ ಅಲ್ಲ, ಅಣ್ಣಾವ್ರ ಕಾಲದ ಆ ರಹಸ್ಯ ಲೆಗಸಿಯನ್ನು ಶಿವಣ್ಣ ಮತ್ತೆ ಮರುಕಳಿಸಿದ್ದಾರೆ. ಏನಿದು ಜೋಗಯ್ಯ ಡೈಲಾಗ್ ರಹಸ್ಯ? ರಾಮ್ ಚರಣ್ ಅಷ್ಟೊಂದು ಹೆದರಿದ್ದಾದರೂ ಯಾಕೆ? ಇಂಟರ್ನೆಟ್ ಅನ್ನೇ ಶೇಕ್ ಮಾಡ್ತಿರೋ ಆ ‘ಮುತ್ತಿನ’ ಕಥೆಯಾದ್ರೂ ಏನು? ಈ ಎಲ್ಲಾ ಇನ್ಸೈಡ್ ಸ್ಟೋರಿ ಇಲ್ಲಿದೆ ನೋಡಿ.
- ಮುತ್ತು, ಲಾಂಗ್, ಬ್ರದರ್ ಸೆಂಟಿಮೆಂಟ್ ಪೆದ್ದಿ ಹೈಲೈಟ್ಸ್..!
- ಜೋಗಯ್ಯ ಡೈಲಾಗ್ ಗೆ ರಾಮ್ ಚರಣ್ ಕೈ ಮುಗಿದಿದ್ದು ಯಾಕೆ..?
- ಜಾನ್ವಿ ಕಪೂರ್ ಗೆ ಕನ್ನಡ ಡೈಲಾಗ್ ಹೇಳಿಕೊಟ್ರು ಶಿವರಾಜಕುಮಾರ್
- ಅಣ್ಣಾವ್ರ ಮುತ್ತಿನ ಲೆಗಸಿ ಮತ್ತೆ ರಿಪೀಟ್..ಚರಣ್ ಗೆ ಮುತ್ತಿಕ್ಕಿದ ಶಿವಣ್ಣ
ಬುಚ್ಚಿಬಾಬು ನಿರ್ದೇಶನದ ಮೋಸ್ಟ್ ಎಕ್ಸ್‌ಪೆಕ್ಟಡ್ ಮೂವಿ ‘ಪೆದ್ದಿ’ ಬೆಳ್ಳಿಪರದೆಗೆ ಅಪ್ಪಳಿಸಲು ಇನ್ನು ಕೆಲವೇ ದಿನಗಳು ಬಾಕಿ ಇವೆ. ಮುಂಬೈ, ಭೋಪಾಲ್, ದೆಹಲಿ ಅಂತ ದೇಶಾದ್ಯಂತ ಪ್ರಚಾರ ನಡೆಸಿರುವ ಚಿತ್ರತಂಡ, ಇತ್ತೀಚೆಗೆ ಸಿಲಿಕಾನ್ ಸಿಟಿ ಬೆಂಗಳೂರಿಗೂ ಲಗ್ಗೆ ಇಟ್ಟಿತ್ತು. ರಾಮ್ ಚರಣ್ ಮತ್ತು ಜಾನ್ವಿ ಕಪೂರ್ ಮುಖ್ಯ ಭೂಮಿಕೆಯಲ್ಲಿರುವ ಈ ಸಿನಿಮಾದಲ್ಲಿ ನಮ್ಮ ಕರುನಾಡ ಚಕ್ರವರ್ತಿ ಶಿವರಾಜ್‌ಕುಮಾರ್ ಕೂಡ ‘ಉಸ್ತಾದ್ ಗೌರ್ನಾಯ್ಡು’ ಎಂಬ ಪವರ್‌ಫುಲ್ ಗುರುವಿನ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಬೆಂಗಳೂರಿನಲ್ಲಿ ನಡೆದ ಅನುಶ್ರೀ ಅವರ ಸ್ಪೆಷಲ್ ಇಂಟರ್ವ್ಯೂನಲ್ಲಿ ಶಿವಣ್ಣ, ಚರಣ್ ಮತ್ತು ಜಾನ್ವಿ ಒಟ್ಟಾಗಿ ಬಂದು ಸಖತ್ ಧೂಳೆಬ್ಬಿಸಿದ್ದಾರೆ.
ಸದ್ಯ ಕನ್ನಡದಲ್ಲಿ ನಡೆದ ಸಂದರ್ಶನದಲ್ಲಿ ರಾಮ್ ಚರಣ್ ಹಾಗು ಜಾನ್ವಿ ಗೆ ಶಿವಣ್ಣ ಲಾಂಗ್ ಹಿಡಿಯೋದು ಹೇಳಿಕೊಟ್ಟಿದ್ದಾರೆ. ಮೊದಲಿಗೆ ‘ದಿ ವಿಲನ್’ ಸಿನಿಮಾದ ಖಡಕ್ ಸಾಲುಗಳನ್ನು ಶಿವಣ್ಣ ಹೇಳಿಕೊಡುತ್ತಿದ್ದಂತೆ ಜಾನ್ವಿ ಕಪೂರ್, “ನಾನ್ ಸೈಲೆಂಟ್ ಆಗಿದ್ದ್ರೆ ರಾಮ, ವೈಲೆಂಟ್ ಆದ್ನೋ ರಾವಣ” ಅಂತ ಲಾಂಗ್ ಹಿಡಿದು ಮಾಸ್ ಎಕ್ಸ್‌ಪ್ರೆಶನ್ ಕೊಟ್ಟರು. ಆದರೆ, ಯಾವಾಗ ರಾಮ್ ಚರಣ್ ಸರದಿ ಬಂತೋ, ಶಿವಣ್ಣ ತಮ್ಮ ಕಲ್ಟ್ ಕ್ಲಾಸಿಕ್ ‘ಜೋಗಯ್ಯ’ ಸಿನಿಮಾದ ಆ ಅಲ್ಟಿಮೇಟ್ ಪ್ರೆಸ್ ಮೀಟ್ ಡೈಲಾಗ್ ಎತ್ತಿಕೊಂಡರು. ಶಿವಣ್ಣ ಆರ್ಭಟಿಸುತ್ತಿದ್ದಂತೆ, ಚರಣ್ ಬೆಚ್ಚಿಬಿದ್ದರು. ಅಯ್ಯೋ ಬೇಡವೇ ಬೇಡ, ಮಾಧ್ಯಮದವರಿಗೆ ಈಗಲೇ ಏನು ಹೇಳುವುದು ಬೇಡ, ನಾನು ಖುಷಿಯಾಗಿರಬೇಕು ಅಂತ ಕೈ ಮುಗಿದ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಮಿಲಿಯನ್ ಗಟ್ಟಲೆ ವೀವ್ಸ್ ಕೊಳ್ಳೆ ಹೊಡೆಯುತ್ತಿದೆ. ಕೊನೆಗೆ ಶಿವಣ್ಣ, “ಏಯ್ ಡಾಲಿ.. ನಾನ್ ಸುಮ್ನೆ ಬಂದ್ರೆ ಅತಿಥಿ.. ಹುಡುಕ್ಕೊಂಡ್ ಬಂದ್ರೆ ನಿಮ್ಗಳ ತಿಥಿ” ಅನ್ನೋ ಡೈಲಾಗ್ ಹೇಳಿಕೊಟ್ಟು ಚರಣ್ ಕೈಯಲ್ಲಿ ಶಿಳ್ಳೆ ಹೊಡೆಯುವಂತೆ ಮಾಡಿದರು.
ಈ ಸಂದರ್ಶನ ಕೇವಲ ಸಿನಿಮೀಯ ಮಸ್ತಿಗಷ್ಟೇ ಸಾಕ್ಷಿಯಾಗಲಿಲ್ಲ, ಬದಲಿಗೆ ದಶಕಗಳ ಹಳೆಯ ಎರಡು ದೊಡ್ಡ ರಾಜಮನೆತನಗಳ ಭಾವುಕ ಒಡನಾಟವನ್ನು ಜಗತ್ತಿಗೆ ಸಾರಿತು. ಈ ಹಿಂದೆ ಗಾನಗಂಧರ್ವ ಡಾ. ರಾಜ್‌ಕುಮಾರ್ ಅವರು ಮೆಗಾಸ್ಟಾರ್ ಚಿರಂಜೀವಿ ಅವರಿಗೆ ಬಹಿರಂಗ ವೇದಿಕೆಯಲ್ಲೇ ಮುತ್ತಿಕ್ಕಿ, ಕನ್ನಡ-ತೆಲುಗು ಚಿತ್ರರಂಗದ ಅಖಂಡ ಸ್ನೇಹಕ್ಕೆ ಭದ್ರ ಬುನಾದಿ ಹಾಕಿದ್ದರು. ಈಗ ಅದೇ ಇತಿಹಾಸ, ಅದೇ ಪ್ರೀತಿಯ ಲೆಗಸಿ ಇಂದಿನ ತಲೆಮಾರಿನಲ್ಲೂ ರಿಪೀಟ್ ಆಗಿದೆ. ಸಂದರ್ಶನದ ಮಧ್ಯೆ ಶಿವಣ್ಣ ಅವರು ರಾಮ್ ಚರಣ್ ಅವರನ್ನು ಅಪ್ಪಿಕೊಂಡು ಕೆನ್ನೆಗೆ ಪ್ರೀತಿಯ ಮುತ್ತಿಕ್ಕುತ್ತಿದ್ದಂತೆ ಇಡೀ ಸೆಟ್ ರೋಮಾಂಚನಗೊಂಡಿತು. ಅಣ್ಣಾವ್ರ ಕುಟುಂಬ ಹಾಗೂ ಚಿರಂಜೀವಿ ಕುಟುಂಬದ ನಡುವಿನ ಈ ರಕ್ತಗತ ಒಡನಾಟವನ್ನು ನೋಡಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.
ವೃದ್ಧಿ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಬಿಲಿಯನ್ ಬಜೆಟ್‌ನಲ್ಲಿ ಅದ್ಧೂರಿಯಾಗಿ ಮೂಡಿಬಂದಿರುವ ‘ಪೆದ್ದಿ’ ಕಥೆ ಕೇಳಿದ್ರೆ ಪ್ರತಿಯೊಬ್ಬ ಆಕ್ಷನ್ ಪ್ರಿಯನಿಗೂ ಮೈ ಜುಂ ಎನ್ನುತ್ತದೆ. ಚಿತ್ರದಲ್ಲಿ ರಾಮ್ ಚರಣ್ ಬರೀ ರೊಮ್ಯಾಂಟಿಕ್ ಹೀರೋ ಅಲ್ಲ, ಬದಲಿಗೆ ಹಳ್ಳಿ ಕ್ರಿಕೆಟರ್ ಹಾಗೂ ಧೂಳೆಬ್ಬಿಸುವ ಕುಸ್ತಿ ಪೈಲ್ವಾನ್ ಆಗಿ ಎರಡು ಭಿನ್ನ ಶೇಡ್‌ಗಳಲ್ಲಿ ಅಖಾಡಕ್ಕಿಳಿದಿದ್ದಾರೆ. ಇನ್ನು ಇವರಿಗೆ ಕುಸ್ತಿಯ ಪಟ್ಟುಗಳನ್ನು ಹೇಳಿಕೊಡುವ ‘ಉಸ್ತಾದ್ ಗೌರ್ನಾಯ್ಡು’ ಎಂಬ ಪೆದ್ದಿರಾಜುಗೆ ಗುರುವಿನ ಪಾತ್ರದಲ್ಲಿ ನಮ್ಮ ಶಿವಣ್ಣ ಅಬ್ಬರಿಸಿದ್ದಾರೆ. ಬೆಳ್ಳಿತೆರೆಯ ಮೇಲಿನ ಈ ಗುರು-ಶಿಷ್ಯರ ಜುಗಲ್‌ಬಂದಿ, ಎಮೋಷನಲ್ ಸೀನ್‌ಗಳು ಮತ್ತು ಕ್ಲೈಮ್ಯಾಕ್ಸ್ ಫೈಟ್ ಚಿತ್ರದ ಅತಿ ದೊಡ್ಡ ಹೈಲೈಟ್ ಎನ್ನಲಾಗುತ್ತಿದೆ.
ಈ ದೃಶ್ಯ ವೈಭವಕ್ಕೆ ಮತ್ತಷ್ಟು ಮರುಗು ನೀಡಲು ಬಂದಿದ್ದಾರೆ ಮ್ಯೂಸಿಕ್ ಮಾಂತ್ರಿಕ ಎ.ಆರ್. ರಹಮಾನ್. ಈಗಾಗಲೇ ಚಿತ್ರದ ನಾಲ್ಕು ಹಾಡುಗಳು ಬಿಡುಗಡೆಯಾಗಿ ನಂಬರ್ ಒನ್ ಸ್ಥಾನದಲ್ಲಿವೆ ಹಾಗೂ ಇನ್ಸ್ಟಾ ರೀಲ್ಸ್‌ನಲ್ಲಿ ಹೊಸ ಟ್ರೆಂಡ್ ಸೃಷ್ಟಿಸಿವೆ. ಸಿನಿಮಾದಲ್ಲಿ ಬರೀ ಸ್ಟಾರ್ ಕಾಸ್ಟ್ ಅಷ್ಟೇ ಅಲ್ಲ, ಜಗಪತಿ ಬಾಬು, ದಿವ್ಯೇಂದು, ಬೊಮನ್ ಇರಾನಿ ಹಾಗೂ ರವಿ ಕಿಶನ್ ಸೇರಿದಂತೆ ಭಾರತೀಯ ಚಿತ್ರರಂಗದ ದೈತ್ಯ ತಾರಾಗಣವೇ ಜಮಾಯಿಸಿದೆ. ಸದ್ಯ ಕನ್ನಡ ಸೇರಿದಂತೆ ದೇಶದ ಪ್ರಮುಖ 5 ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ‘ಪೆದ್ದಿ’ ಅಬ್ಬರಿಸಲು ದಿನಗಣನೆ ಶುರುವಾಗಿದ್ದು, ಬಾಕ್ಸ್ ಆಫೀಸ್‌ನ ಹಳೆ ರೆಕಾರ್ಡ್‌ಗಳೆಲ್ಲಾ ಧೂಳೀಪಟ ಆಗೋದು ಗ್ಯಾರಂಟಿ ಎನ್ನುತ್ತಿದ್ದಾರೆ ಸಿನಿ ಪಂಡಿತರು.
