ಬೆಂಗಳೂರು: ಕನ್ನಡ ಚಿತ್ರರಂಗದ ಸೆಂಚುರಿ ಸ್ಟಾರ್, ಕರುನಾಡ ಚಕ್ರವರ್ತಿ ಶಿವರಾಜ್‌ಕುಮಾರ್ ಇಂದು (ಜುಲೈ 12) ತಮ್ಮ 63ನೇ ಜನ್ಮದಿನವನ್ನು ಅಭಿಮಾನಿಗಳೊಂದಿಗೆ ಅದ್ಧೂರಿಯಾಗಿ ಆಚರಿಸಿಲಕೊಂಡಿದ್ದಾರೆ. ಶಿವಣ್ಣನ ಹುಟ್ಟುಹಬ್ಬದ ಸಂಭ್ರಮವನ್ನು ಅಭಿಮಾನಿಗಳು ಮಧ್ಯರಾತ್ರಿಯಿಂದಲೇ ಸಂಭ್ರಮಿಸಿದ್ದು, ಬೆಂಗಳೂರಿನ ಮಾನ್ಯತಾ ಟೆಕ್ ಪಾರ್ಕ್‌ನಲ್ಲಿರುವ ಅವರ ನಿವಾಸದ ಬಳಿ ನೂರಾರು ಅಭಿಮಾನಿಗಳು ಜಮಾಯಿಸಿದ್ದರು.
ಮಧ್ಯರಾತ್ರಿ 12 ಗಂಟೆಗೆ ಶಿವರಾಜ್‌ಕುಮಾರ್ ತಮ್ಮ ಪತ್ನಿ ಗೀತಾ ಶಿವರಾಜ್‌ಕುಮಾರ್ ಜೊತೆಗೆ ಕೇಕ್ ಕತ್ತರಿಸಿ ಜನ್ಮದಿನವನ್ನು ಆಚರಿಸಿದರು. ಅಭಿಮಾನಿಗಳು ಮನೆಯ ಸುತ್ತಲೂ ಬ್ಯಾನರ್‌ಗಳನ್ನು ಹಾಕಿ, ಪಟಾಕಿಗಳನ್ನು ಸಿಡಿಸಿ, ಶಿವಣ್ಣನಿಗೆ ಶುಭಾಶಯ ಕೋರಿದರು. ಮುಂಜಾಗೃತಾ ಕ್ರಮವಾಗಿ ಶಿವಣ್ಣರವರ ನಿವಾಸದ ಬಳಿ ಪೊಲೀಸ್ ಭದ್ರತೆಯನ್ನು ನಿಯೋಜಿಸಲಾಗಿತ್ತು. ಶಿವರಾಜ್‌ಕುಮಾರ್ ತಮ್ಮ ಅಭಿಮಾನಿಗಳೊಂದಿಗೆ ಶೇಕ್‌ಹ್ಯಾಂಡ್ ಮಾಡಿ, ಅವರೊಂದಿಗೆ ಸಂವಾದ ನಡೆಸಿ ಕಳುಹಿಸಿದರು.
ಜನ್ಮದಿನದ ಸಂದರ್ಭದಲ್ಲಿ ಶಿವಣ್ಣನ ಹೊಸ ಚಿತ್ರ 666 ಆಪರೇಷನ್ ಡ್ರೀಮ್ ಥಿಯೇಟರ್ನ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ಶಿವರಾಜ್‌ಕುಮಾರ್ ಸೂಟ್ ಧರಿಸಿ, ವಿಂಟೇಜ್ ರಿವಾಲ್ವರ್ ಹಿಡಿದು, ತೀಕ್ಷ್ಣವಾದ ನೋಟದೊಂದಿಗೆ ಸ್ಟೈಲಿಶ್ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಫಸ್ಟ್ ಲುಕ್‌ನ್ನು ಚಿತ್ರತಂಡ ಸಾಮಾಜಿಕ ಮಾಧ್ಯಮದಲ್ಲಿ ಬಿಡುಗಡೆ ಮಾಡಿದ್ದು, ಅಭಿಮಾನಿಗಳಿಂದ ಭಾರೀ ಪ್ರಶಂಸೆ ವ್ಯಕ್ತವಾಗಿದೆ.
63ನೇ ವಯಸ್ಸಿನಲ್ಲೂ ಶಿವರಾಜ್‌ಕುಮಾರ್ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಟಗರು 2, ಜೈಲರ್ 2, 45, ಉತ್ತರಕಾಂಡ, ಭೈರವನ ಕೊನೆಯ ಪಾಠ, ಮಂಡ್ಯ ಬ್ರದರ್ಸ್, ಮತ್ತು ಆನಂದ್ ಸೇರಿದಂತೆ ಒಂದು ಡಜನ್‌ಗೂ ಹೆಚ್ಚು ಚಿತ್ರಗಳಲ್ಲಿ ಅವರು ನಟಿಸುತ್ತಿದ್ದಾರೆ. ಕನ್ನಡದ ಜೊತೆಗೆ ತಮಿಳು ಮತ್ತು ತೆಲುಗು ಚಿತ್ರರಂಗದಲ್ಲೂ ಬ್ಯುಸಿಯಾಗಿರುವ ಶಿವಣ್ಣ, ತಮ್ಮ ವೈವಿಧ್ಯಮಯ ನಟನೆಯ ಮೂಲಕ ಅಭಿಮಾನಿಗಳ ಮನಗೆದ್ದಿದ್ದಾರೆ.
ಶಿವರಾಜ್‌ಕುಮಾರ್‌ನ 63ನೇ ಜನ್ಮದಿನವು ಅವರ ಸಿನಿಮಾ ಪಯಣದ ಮತ್ತೊಂದು ಮೈಲಿಗಲ್ಲಾಗಿದ್ದು, ಅಭಿಮಾನಿಗಳ ಸಂಭ್ರಮ ಮತ್ತು ಹೊಸ ಚಿತ್ರಗಳ ಘೋಷಣೆಯೊಂದಿಗೆ ಈ ದಿನವು ವಿಶೇಷವಾಗಿದೆ.