ವಿಶಿಷ್ಟ ಕಥಾ ಹಂದರದ ಮಕ್ಕಳ ಚಿತ್ರ ‘ಸೀಸ್ ಕಡ್ಡಿ’ ಬಿಡುಗಡೆಗೆ ರೆಡಿ!

Untitled design 2025 03 26t191343.772

ಇತ್ತೀಚಿನ ದಿನಗಳಲ್ಲಿ ಮಕ್ಕಳ ಚಿತ್ರಗಳ ಸಂಖ್ಯೆ ಕಡಿಮೆಯಾಗಿದೆ ಅಂತೊಂದು ಕೊರಗು ಕನ್ನಡದ ಸಿನಿಮಾ ಪ್ರೇಮಿಗಳಲ್ಲಿದೆ. ಒಂದು ಸಿನಿಮಾ ರಂಗದ ಜೀವಂತಿಕೆಯ ದೃಷ್ಟಿಯಿಂದ ಎಲ್ಲ ಬಗೆಯ ಸಿನಿಮಾಗಳೂ ಕೂಡಾ ಕಾಲ ಕಾಲಕ್ಕೆ ರೂಪುಗೊಳ್ಳಬೇಕಾಗುತ್ತೆ. ಈ ನಿಟ್ಟಿನಲ್ಲಿ ಸಿನಿಮಾಸಕ್ತರ ನಡುವಲ್ಲೊಂದು ಚರ್ಚೆ ಚಾಲ್ತಿಯಲ್ಲಿರುವಾಗಲೇ ಸದ್ದಿಲ್ಲದೆ ತಯಾರಾಗಿ ನಿಂತಿರುವ ವಿಶಿಷ್ಟ ಕಥಾನಕದ ಮಕ್ಕಳ ಚಿತ್ರವೊಂದು ಅಂತಾರಾಷ್ಟ್ರೀಯ ಸಿನಿಮೋತ್ಸವಗಳಲ್ಲಿ ಸದ್ದು ಮಾಡಿದೆ. ಇನ್ನೇನು ಆರಂಭವಾಗಲಿರೋ ಶಾಲಾ ರಜಾ ದಿನಗಳು ಅಂತಿಮ ಘಟ್ಟ ತಲುಪಿಕೊಳ್ಳುವ ಹೊತ್ತಿಗೆಲ್ಲ ಅದ್ದೂರಿಯಾಗಿ ತೆರೆಗಾಣಲು ತಯಾರಿಯೂ ಆರಂಭವಾಗಿದೆ. ಹಾಗೆ ಬಿಡುಗಡೆಗೆ ತಯಾರಾಗಿರುವ ಮಕ್ಕಳ ಚಿತ್ರ `ಸೀಸ್ ಕಡ್ಡಿ’!

ಇದು ಕನ್ನಡ ಚಿತ್ರರಂಗದಲ್ಲಿ ನಿರ್ಮಾಪಕರಾಗಿ, ನಿರ್ದೇಶಕರಾಗಿ ಪರಿಚಿತರಾಗಿರುವ ರತನ್ ಗಂಗಾಧರ್ ನಿರ್ದೇಶನದ ಚಿತ್ರ. ಸೀಸ್ ಕಡ್ಡಿ ಎಂಬುದು ನಮ್ಮೆಲ್ಲರ ಪಾಲಿಗೆ ಅಕ್ಷರದ ಬೆಳಕು ತೋರುವ ವಸ್ತು. ಅಂಥಾ ಪೆನ್ಸಿಲ್ ಅನ್ನು ರೂಪಕವಾಗಿಟ್ಟುಕೊಂಡು, ಅದರ ಭಾಗವಾಗಿರೋ ಲೆಡ್, ಶಾರ್ಪ್‌ನರ್, ಇರೇಜರ್ ಮುಂತಾದವುಗಳನ್ನು ಹೋಲುವ ಪಾತ್ರಗಳ ಮೂಲಕ ಈ ಸಿನಿಮಾ ಕಥೆ ಮೈಕೈ ತುಂಬಿಕೊಂಡಿದೆಯಂತೆ. ಈ ರೂಪಕಗಳನ್ನಿಟ್ಟುಕೊಂಡು ಎಂಥಾ ಪಾತ್ರಗಳು ಸೃಷ್ಟಿಯಾಗಿರಬಹುದೆಂಬ ಕುತೂಹಲಕ್ಕೆ ತಿಂಗಳೊಪ್ಪತ್ತಿನಲ್ಲಿಯೇ ಮಜವಾದ ಉತ್ತರ ಸಿಗಲಿದೆ. ಒಂದು ಪೆನ್ಸಿಲ್ ನ ರೂಪಕದೊಂದಿಗೆ ಬದುಕಿನ ಅಚ್ಚರಿದಾಯಕ ಮಜಲುಗಳನ್ನು ತೆರೆದಿಡುವ ಈ ಸಿನಿಮಾ ಮಕ್ಕಳ ಚಿತ್ರಗಳ ಸಾಲಿನಲ್ಲಿ ಭಿನ್ನವಾಗಿ ನೆಲೆಕಂಡುಕೊಳ್ಳುವ ಸಾಧ್ಯತೆಗಳಿವೆ. ಇದುವರೆಗೂ ಸಿನಿಮೋತ್ಸವಗಳಲ್ಲಿ ಪ್ರದರ್ಶನಗೊಂಡಿದ್ದ ಈ ಚಿತ್ರವನ್ನು ನೋಡಿದವರೆಲ್ಲ ನಾನಾ ದಿಕ್ಕಿನಲ್ಲಿ ವಿಮರ್ಶೆ ಮಾಡಿದ್ದಾರೆ. ಅವೆಲ್ಲವೂ ಸಕಾರಾತ್ಮಕವಾಗಿವೆ ಅನ್ನೋದೇ ಸೀಸ್ ಕಡ್ಡಿಯ ನಿಜವಾದ ಹೆಗ್ಗಳಿಕೆ. ಒಂದಿಡೀ ಸಿನಿಮಾ ಲೈವ್ ಸೌಂಡ್ ರೆಕಾರ್ಡಿಂಗ್ ಮೂಲಕ ಮೂಡಿ ಬಂದಿರೋದು ಮತ್ತೊಂದು ವಿಶೇಷ.

ಇಲ್ಲಿ ಹರಿಕಥೆಯಲ್ಲಿ ಪ್ರಾವಿಣ್ಯ ಹೊಂದಿರೋ ಸೆಕ್ಯೂರಿಟಿ ಗಾರ್ಡ್ ಮತ್ತು ಕಾಂದಂಬರಿಕಾರನೋರ್ವನ ಮುಖಾಮುಖಿಯಾಗುತ್ತೆ. ಹಾಗೆ ಸಿಕ್ಕ ಸೆಕ್ಯೂರಿಟಿ ಗಾರ್ಡ್ ಅನ್ನೇ ಬೇತಾಳನಾಗಿ ಕಲ್ಪಿಸಿಕೊಂಡು ಆ ಕಾದಂಬರಿಕಾರ ಕಥೆಯೊಂದನ್ನು ಬರೆಯಲಾರಂಭಿಸುತ್ತಾನೆ. ಆ ಬೇತಾಳನ ಪ್ರಶ್ನೆಗಳಿಗೆ ವಿಕ್ರಮಾದಿತ್ಯನ ಪಾತ್ರ ಕೊಡುವ ಉತ್ತರಗಳ ಮೂಲಕ ಕಥೆ ಗರಿಬಿಚ್ಚಿಕೊಳ್ಳುತ್ತೆ. ಮಕ್ಕಳ ಕಥನದಲ್ಲಿಯೇ ಹಿರೀಕರ ಕಥೆಯೂ ತೆರೆದುಕೊಳ್ಳುತ್ತಾ ಸಾಗುತ್ತದೆ. ಅದರೊಂದಿಗೇ ಒಟ್ಟಾರೆ ಸಿನಿಮಾದ ಪಾತ್ರಗಳೂ ಕದಲಲಾರಂಭಿಸುತ್ತವೆ. ಈ ಸಿನಿಮಾ ಈಗಾಗಲೇ ನೋಯ್ಡಾದಲ್ಲಿ ನಡೆದಿರುವ ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ಪ್ರದರ್ಶನ ಕಂಡಿದೆ. ಉತ್ತಮ ನಿರ್ದೇಶನ ವಿಭಾಗದಲ್ಲಿ ಪ್ರಶಸ್ತಿಯನ್ನೂ ಬಾಚಿಕೊಂಡಿದೆ. ಮೆಲ್ಬೋರ್ನ್ ಸಿನಿಮಾ ಫೆಸ್ಟಿವಲ್ ನಲ್ಲಿಯೂ ಪ್ರದರ್ಶನ ಕಂಡು ಎಲ್ಲರಿಂದಲೂ ಮೆಚ್ಚುಗೆ ಪಡೆದುಕೊಂಡಿದೆ.

ಸಾಮಾನ್ಯವಾಗಿ ಮಕ್ಕಳ ಸಿನಿಮಾ ಅಂದಾಕ್ಷಣ ಸಿದ್ಧಸೂತ್ರದ ಸುತ್ತ ಒಂದಷ್ಟು ಕಲ್ಪನೆಗಳು ಮೂಡಿಕೊಳ್ಳುತ್ತವೆ. ಅಂಥಾ ಕಲ್ಪನೆಗಳ ನಿಲುಕಿನಾಚೆಗೆ ಹಬ್ಬಿಕೊಂಡ ಲಕ್ಷಣಗಳಿದ್ದಾವೆ. ಚಿತ್ರತಂಡ ಹಂಚಿಕೊಂಡಿರೋ ಕೆಲ ವಿಚಾರಗಳನ್ನು ಗಮನಿಸಿದರೆ ಆ ವಿಚಾರ ಸ್ಪಷ್ಟವಾಗುತ್ತದೆ. ಇಲ್ಲಿ ಐದು ಕಥೆಗಳಳಿದ್ದಾವೆ. ಅವೆಲ್ಲವೂ ಒಂದು ಬಿಂದುವಿನಲ್ಲಿ ಸಂಧಿಸುತ್ತವೆ. ಒಬ್ಬ ಕಾದಂಬರಿಕಾರ ಮತ್ತು ಆತನ ಸುತ್ತ ಹಬ್ಬಿಕೊಂಡ ಮಕ್ಕಳ ಪಾತ್ರಗಳು… ಅವುಗಳ ಸುತ್ತ ಥ್ರಿಲ್ಲಿಂಗ್ ಅಂಶಗಳಗೊಂಡು, ಚಿಂತನೆಗೂ ಹಚ್ಚುವಂಥಾ ಧಾಟಿಯಲ್ಲಿ ಈ ಸಿನಿಮಾವನ್ನು ರೂಪಿಸಲಾಗಿದೆಯಂತೆ. ಒಟ್ಟಾರೆಯಾಗಿ ಮಕ್ಕಳ ಚಿತ್ರವಾದರೂ ಕೂಡಾ ಎಲ್ಲ ವಯೋಮಾನದವರನ್ನೂ ಆವರಿಸಿಕೊಳ್ಳುವ ಕಥನ ಸೀಸ್ ಕಡ್ಡಿಯದ್ದು.

ಪ್ರಯೋಗಾತ್ಮಕ ಗುಣದೊಂದಿಗೆ ಈ ಸಿನಿಮಾವನ್ನು ನಿರ್ದೇಶನ ಮಾಡಿರುವವರು ರತನ್ ಗಂಗಾಧರ್. ಸಂಪತ್ ಶಿವಶಂಕರ್, ಕೃತಿ ನಾಣಯ್ಯರೊಂದಿಗೆ ರತನ್ ಅವರೂ ಸೇರಿಕೊಂಡು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಇಲ್ಲಿನ ಒಂದೊಂದು ಭಾಗದ ಚಿತ್ರಕಥೆ ಮತ್ತು ಸಂಭಾಷಣೆಯನ್ನು ಒಬ್ಬೊಬ್ಬರು ನಿರ್ವಹಿಸಿದ್ದಾರೆ. ವಿಕ್ರಮ ಬೇತಾಳ ಭಾಗಕ್ಕೆ ಆಕರ್ಷ ಕಮಲ, ಚಿಕ್ಕಿ ಪಾತ್ರಕ್ಕೆ ಅಕ್ಷರ ಭಾರದ್ವಾಜ್, ರವೀಶ ಪಾತ್ರಕ್ಕೆ ಶರತ್ ಕೆ ಪರ್ವತವಾಣಿ, ಮಂಜಿ ಪಾತ್ರಕ್ಕೆ ಜಯಂತ್ ವೆಂಕಟ್ ಹಾಗೂ ತೌಫಿಕ್ ಪಾತ್ರಕ್ಕೆ ಮಹೇಂದ್ರ ಗೌಡ ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ. ಕೆ.ಸಿ ಬಾಲಸಾರಂಗನ್ ಸಂಗೀತ ನಿರ್ದೇಶನದಲ್ಲಿ ಈ ಸಿನಿಮಾ ಹಾಡುಗಳು ರೂಪುಗೊಂಡಿವೆ. ಮಹೇಶ್ ಎನ್.ಸಿ, ಪ್ರತಾಪ್ ವಿ ಭಟ್, ಮಹೇಂದ್ರ ಗೌಡ ಅನುಜಯ ಎಸ್. ಕುಮ್ಟಕರ್ ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ. ಇದೇ ಮೇ ತಿಂಗಳ ಕಡೇಯ ಭಾಗದಲ್ಲಿ ಸೀಸ್ ಕಡ್ಡಿ ಚಿತ್ರ ತೆರೆಗಾಣಲಿದೆ. ಈ ಮೂಲಕ ಬೇಸಿಗೆ ರಜೆಯ ಅಂಚಿನಲ್ಲಿ ಒಂದು ಅಪರೂಪದ ಅನುಭೂತಿ ಕನ್ನಡ ಚಿತ್ರ ಪ್ರೇಮಿಗಳಿಗೆ ಕಾದಿದೆ.

Exit mobile version