ಕರಿಯ-2 ಖ್ಯಾತಿಯ ನಟ ಸಂತೋಷ್ ಬಾಲರಾಜ್ ಜಾಂಡೀಸ್‌ನಿಂದ ನಿಧನ!

ಜಾಂಡೀಸ್‌ ಖಾಯಿಲೆಯಿಂದ ಕೋಮಾಗೆ ಜಾರಿದ್ದ ನಟ ಇನ್ನಿಲ್ಲ!

222 (6)

ಬೆಂಗಳೂರು: ಕನ್ನಡ ಚಿತ್ರರಂಗದ ಯುವ ನಟ ಸಂತೋಷ್ ಬಾಲರಾಜ್ (34) ಅವರು ಜಾಂಡೀಸ್‌ನಿಂದ ಉಂಟಾದ ಆರೋಗ್ಯ ಸಮಸ್ಯೆಯಿಂದಾಗಿ ಇಂದು (ಆಗಸ್ಟ್ 5) ಬೆಳಗ್ಗೆ 9:30ರ ಸುಮಾರಿಗೆ ಬೆಂಗಳೂರಿನ ಕುಮಾರಸ್ವಾಮಿ ಲೇಔಟ್‌ನ ಸಾಗರ್ ಅಪೋಲೋ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಕಳೆದ ತಿಂಗಳು ಜಾಂಡೀಸ್‌ನಿಂದ ಬಳಲುತ್ತಿದ್ದ ಸಂತೋಷ್ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ, ಆರೋಗ್ಯ ಸ್ಥಿತಿ ಗಂಭೀರವಾಗಿ ಕೋಮಾಕ್ಕೆ ಜಾರಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

ಸಂತೋಷ್ ಬಾಲರಾಜ್ ಅವರು ಕಿರಿಯ ವಯಸ್ಸಿನಲ್ಲೇ ತೀವ್ರ ಜಾಂಡೀಸ್‌ನಿಂದ ಬಳಲುತ್ತಿದ್ದರು. ಎರಡು ದಿನಗಳ ಹಿಂದೆ ಅವರನ್ನು ಬೆಂಗಳೂರಿನ ಬನಶಂಕರಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಆರೋಗ್ಯ ಸ್ಥಿತಿ ಮತ್ತಷ್ಟು ಹದಗೆಟ್ಟು ತೀವ್ರ ನಿಗಾ ಘಟಕದಲ್ಲಿ (ICU) ಚಿಕಿತ್ಸೆ ಪಡೆಯುತ್ತಿದ್ದರು. ಅವರ ಚೇತರಿಕೆಗಾಗಿ ಕುಟುಂಬದವರು, ಆಪ್ತರು ಮತ್ತು ಅಭಿಮಾನಿಗಳು ಪ್ರಾರ್ಥಿಸುತ್ತಿದ್ದರೂ, ಚಿಕಿತ್ಸೆ ಯಶಸ್ವಿಯಾಗದೆ ಸಂತೋಷ್ ಅವರು ಕೊನೆಯುಸಿರೆಳೆದಿದ್ದಾರೆ.

ಸಂತೋಷ್ ಬಾಲರಾಜ್ ಅವರು ತಮ್ಮ ತಾಯಿಯೊಂದಿಗೆ ಬೆಂಗಳೂರಿನಲ್ಲಿ ವಾಸವಾಗಿದ್ದರು. ಅವರ ತಂದೆ, ಹಿರಿಯ ನಿರ್ಮಾಪಕ ಆನೇಕಲ್ ಬಾಲರಾಜ್, ಕನ್ನಡ ಚಿತ್ರರಂಗದಲ್ಲಿ ದರ್ಶನ್‌ರ ‘ಕರಿಯ’ ಸಿನಿಮಾದಂತಹ ಯಶಸ್ವಿ ಚಿತ್ರಗಳನ್ನು ನಿರ್ಮಿಸಿದ್ದರು. ಆನೇಕಲ್ ಬಾಲರಾಜ್ 2022ರಲ್ಲಿ ರಸ್ತೆ ಅಪಘಾತದಲ್ಲಿ ನಿಧನರಾಗಿದ್ದರು.

ಸಂತೋಷ್ ಬಾಲರಾಜ್ ಅವರು ‘ಕೆಂಪ’ (2009), ‘ಗಣಪ’ (2015), ‘ಕರಿಯ 2’ (2017), ‘ಬರ್ಕ್ಲಿ’, ಮತ್ತು ‘ಸತ್ಯ’ (2021) ಚಿತ್ರಗಳಲ್ಲಿ ನಾಯಕ ನಟನಾಗಿ ಅಭಿನಯಿಸಿದ್ದರು. ‘ಗಣಪ’ ಚಿತ್ರದಲ್ಲಿ ಬೆಂಗಳೂರು ಅಂಡರ್‌ವರ್ಲ್ಡ್‌ನ ಘಟನೆಯೊಂದರ ಆಧಾರದ ಮೇಲೆ ನಿರ್ಮಿತವಾದ ಕಥಾಹಂದರದಲ್ಲಿ ಅವರ ನಟನೆಗೆ ವಿಮರ್ಶಕರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ‘ಕರಿಯ 2’ ಚಿತ್ರದಲ್ಲಿ ಒಂದು ರೊಮ್ಯಾಂಟಿಕ್ ಆಕ್ಷನ್ ಥ್ರಿಲ್ಲರ್‌ನಲ್ಲಿ ಅವರು ಎರಡು ಛಾಯೆಗಳ ಪಾತ್ರವನ್ನು ನಿಭಾಯಿಸಿದ್ದರು.

ಸಂತೋಷ್ ಅವರ ಅಕಾಲಿಕ ನಿಧನದ ಸುದ್ದಿ ಕನ್ನಡ ಚಿತ್ರರಂಗದಲ್ಲಿ ಆಘಾತವನ್ನುಂಟು ಮಾಡಿದ್ದು, ಅಭಿಮಾನಿಗಳು ಮತ್ತು ಸಹ ಕಲಾವಿದರು ಸಾಮಾಜಿಕ ಜಾಲತಾಣಗಳಲ್ಲಿ ಸಂತಾಪ ಸೂಚಿಸುತ್ತಿದ್ದಾರೆ.

Exit mobile version