ಬೆಂಗಳೂರು: ಸೆಲೆಬ್ರಿಟಿ ಕ್ರಿಕೆಟ್ ಲೀಗ್ (CCL) 2026ರ ಆವೃತ್ತಿಯಲ್ಲಿ ಕರ್ನಾಟಕ ಬುಲ್ಡೋಜರ್ಸ್ ತಂಡವು ಮೂರನೇ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮುವ ಮೂಲಕ ಇತಿಹಾಸ ಬರೆದಿದೆ. ಬರೋಬ್ಬರಿ 12 ವರ್ಷಗಳ ನಂತರ ಟ್ರೋಫಿಯನ್ನು ತಾಯ್ನಾಡಿಗೆ ಹೊತ್ತು ತಂದಿದ್ದಾರೆ ಕಿಚ್ಚ ಸುದೀಪ್ ನೇತೃತ್ವದ ತಂಡ. ಈ ಐತಿಹಾಸಿಕ ಗೆಲುವಿನ ಸಂಭ್ರಮವನ್ನು ಹಂಚಿಕೊಳ್ಳಲು ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಸುದೀಪ್ ಅವರು ಅಭಿಮಾನಿಗಳಿಗೆ ಬಂಪರ್ ಕೊಡುಗೆಯೊಂದನ್ನು ಘೋಷಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಟ್ರೋಫಿ ಹಿಡಿದು ಮಾತನಾಡಿದ ನಾಯಕ ಕಿಚ್ಚ ಸುದೀಪ್, ನನಗೆ ಇದು ಕೇವಲ ಒಂದು ಟೂರ್ನಮೆಂಟ್ ಅಲ್ಲ, ಇದೊಂದು ಭಾವನೆ. ದಶಕದ ನಂತರ ಕಪ್ ಅನ್ನು ಮನೆಗೆ ತರುತ್ತಿರುವುದು ಪದಗಳಲ್ಲಿ ವಿವರಿಸಲಾಗದ ಅನುಭವ ಎಂದು ಭಾವುಕರಾದರು. ನಮಗೆ ಕಷ್ಟದ ದಿನಗಳಲ್ಲೂ ಬೆಂಬಲ ನೀಡಿದವರು ನಮ್ಮ ಅಭಿಮಾನಿಗಳು. ‘ಈ ಸಲ ಕಪ್ ನಮ್ದೆ’ ಎಂಬ ಘೋಷಣೆ ಈ ಬಾರಿ ಕೇವಲ ಮಾತಾಗಿ ಉಳಿಯಲಿಲ್ಲ, ಅದು ವಾಸ್ತವವಾಗಿದೆ. ಈ ಗೆಲುವನ್ನು ನಾನು ನನ್ನ ಪ್ರೀತಿಯ ಅಭಿಮಾನಿಗಳಿಗೆ ಅರ್ಪಿಸುತ್ತೇನೆ ಎಂದು ಸಂಭ್ರಮ ಹಂಚಿಕೊಂಡರು.
ಅಭಿಮಾನಿಗಳಿಗೂ ಸಿಸಿಎಲ್ ತಂಡ ಸೇರುವ ಅವಕಾಶ
ಇದೇ ವೇಳೆ ಕಿಚ್ಚ ಸುದೀಪ್ ಅವರು ಅಭಿಮಾನಿಗಳಿಗಾಗಿ ಒಂದು ವಿಶೇಷ ಘೋಷಣೆ ಮಾಡಿದರು. ಸಿಸಿಎಲ್ ಎಂದರೆ ಕೇವಲ ಸಿನಿಮಾ ಸೆಲೆಬ್ರಿಟಿಗಳಿಗೆ ಮಾತ್ರ ಸೀಮಿತವಲ್ಲ. ನಮ್ಮ ಅಭಿಮಾನಿಗಳಲ್ಲೂ ಅದ್ಭುತ ಕ್ರಿಕೆಟ್ ಆಡುವ ಪ್ರತಿಭೆಗಳಿವೆ. ಯಾರಲ್ಲಿ ನಿಜವಾದ ಕ್ರಿಕೆಟ್ ಕೌಶಲವಿದೆಯೋ ಅಂತಹ ಅಭಿಮಾನಿಗಳಿಗೂ ನಮ್ಮ ತಂಡದಲ್ಲಿ ಅವಕಾಶ ನೀಡಲಾಗುವುದು. ಅವರು ಬಂದು ನಮ್ಮ ತಂಡವನ್ನು ಸೇರಿಕೊಳ್ಳಬಹುದು ಎಂದು ಹೇಳಿದ್ದಾರೆ.
ಕಳೆದ ಭಾನುವಾರ (ಫೆಬ್ರವರಿ 1) ಕೊಯಂಬತ್ತೂರಿನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಬೆಂಗಾಲ್ ಟೈಗರ್ಸ್ ವಿರುದ್ಧ ಗೆದ್ದು ಕಿಚ್ಚನ ಪಡೆ ಟ್ರೋಫಿ ಎತ್ತಿ ಹಿಡಿದಿತ್ತು. 6 ವಿಕೆಟ್‌ಗಳ ಭರ್ಜರಿ ಜಯ ಸಾಧಿಸುವ ಮೂಲಕ ಬುಲ್ಡೋಜರ್ಸ್ ಇತಿಹಾಸ ನಿರ್ಮಿಸಿತು.
ಸುದೀಪ್ ನೇತೃತ್ವದ ಪ್ರದೀಪ್, ಜೆಕೆ, ಕೃಷ್ಣ, ಚಂದನ್, ರಾಜೀವ್, ನಿರೂಪ್, ಪ್ರತಾಪ್, ಅರ್ಜುನ್, ಸಚಿನ್, ಕರಣ್, ಮಂಜುನಾಥ್ ಮತ್ತು ಬಚ್ಚನ್ ಅವರನ್ನೊಳಗೊಂಡ ತಂಡವು ಅಮೋಘ ಪ್ರದರ್ಶನ ನೀಡಿತು. 130 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಬುಲ್ಡೋಜರ್ಸ್ ಪರ ಸ್ಟಾರ್ ಬ್ಯಾಟ್ಸ್‌ಮನ್ ರಾಜೀವ್ ಹನು ಕೇವಲ 35 ಎಸೆತಗಳಲ್ಲಿ 69 ರನ್ ಸಿಡಿಸಿ ‘ಪಂದ್ಯ ಪುರುಷ’ ಪ್ರಶಸ್ತಿ ಪಡೆದರು. ಬೌಲಿಂಗ್‌ನಲ್ಲಿ ಎದುರಾಳಿಗಳನ್ನು ಕಟ್ಟಿಹಾಕಿದ ಪ್ರತಾಪ್ ‘ಅತ್ಯುತ್ತಮ ಬೌಲರ್’ ಗೌರವಕ್ಕೆ ಪಾತ್ರರಾದರು.
