ಈ ವರ್ಷ ಸ್ಯಾಂಡಲ್‌ವುಡ್‌ಗೆ ಮೊದಲಾರ್ಧಕ್ಕಿಂತ ದ್ವಿತಿಯಾರ್ಧ ಬಿಗ್ಗೆಸ್ಟ್ ಓಪನಿಂಗ್ ಪಡೆದಿದೆ. ಯೆಸ್.. ಥಿಯೇಟರ್‌ಗೆ ಜನಾನೇ ಬರ್ತಿಲ್ಲ ಅನ್ನೋ ಮಾತುಗಳು ಸುಳ್ಳು ಅನ್ನೋದನ್ನ ಚಂದನವನದ ಕೆಲ ಹಿಟ್ ಮೂವೀಸ್ ಪ್ರೂವ್ ಮಾಡಿವೆ. ಬ್ಯಾಕ್ ಟು ಬ್ಯಾಕ್ ಹಿಟ್ ಚಿತ್ರಗಳಿಂದ ಶುಕ್ರದೆಸೆ ಶುರುವಾದಂತಿದೆ. ಹಾಗಾದ್ರೆ ಆ ಒಂದು ದೊಡ್ಡ ಭರವಸೆ ತಂದ ಬಾಕ್ಸ್ ಆಫೀಸ್ ಹಿಟ್ಸ್ ಯಾವ್ಯಾವು ಅನ್ನೋದಕ್ಕೆ ಈ ಸ್ಟೋರಿ ಒಮ್ಮೆ ನೋಡಿ.
- ಸ್ಯಾಂಡಲ್‌ವುಡ್‌ಗೆ ಶುಕ್ರದೆಸೆ.. ಬ್ಯಾಕ್ ಟು ಬ್ಯಾಕ್ ಬಿಗ್ ಹಿಟ್ಸ್
- ಅಯೋಗ್ಯ, ವಿಡಿಯೋ, ಸಿಟಿಲೈಟ್ಸ್, ಪ್ರೇಮದ ಊರಲಿ, ಬೇಲ್
- ಇವು ಬಾಕ್ಸ್ ಆಫೀಸ್ ಭರವಸೆ.. ಜನ ಮೆಚ್ಚುಗೆಯ ಚಿತ್ರಗಳು..!!
- ಥಿಯೇಟರ್‌ಗೆ ಜನನ ವಾಪಸ್ ತಂದ ಫ್ಯಾಮಿಲಿ ಬ್ಲಾಕ್ಬಸ್ಟರ್ಸ್
ಯೆಸ್.. ಈ ಬಾರಿ ಸಿಕ್ಕಾಪಟ್ಟೆ ಬರ ಬಂದಾಗಿದೆ. ಮಳೆಯಿಲ್ಲದೆ ಬೆಳೆ ಕೂಡ ಇಲ್ಲವಾಗಿ, ರೈತರು ಹೊಟ್ಟೆ ಮೇಲೆ ತಣ್ಣೀರು ಬಟ್ಟೆ ಹಾಕಿಕೊಳ್ಳುವಂತಾಗಿದೆ. ಅದೇ ಪರಿಸ್ಥಿತಿ ಸಿನಿಮಾರಂಗಕ್ಕೂ ಬಂದೊದಗಿದ್ದು ಸುಳ್ಳಲ್ಲ. ಆದ್ರೆ ಈ 2026ನೇ ವರ್ಷ ಮೊದಲಾರ್ಧಕ್ಕಿಂತ ದ್ವಿತಿಯಾರ್ಧ ಸೂಪರ್ ಅನಿಸಿದೆ. ಥಿಯೇಟರ್‌ಗೆ ಜನನೇ ಬರ್ತಿಲ್ಲ ಗುರು ಅಂತ ಬೇಸರ ವ್ಯಕ್ತಪಡಿಸ್ತಿದ್ದ ಸಂದಿಗ್ಧ ಪರಿಸ್ಥಿತಿಯಲ್ಲಿ ಹೌಸ್‌ಫುಲ್ ಪ್ರದರ್ಶನ ಕಾಣುವಂತಹ ಸಿನಿಮಾಗಳು ತೆರೆಕಂಡವು.
ಯೆಸ್.. ಬ್ಯಾಕ್ ಟು ಬ್ಯಾಕ್ ಐದೈದು ಸಿನಿಮಾಗಳು ಚಂದನವನದ ಗಲ್ಲಾ ಪೆಟ್ಟಿಗೆಗೆ ಗರ ಬಡಿದಿದ್ದನ್ನ ಬಿಡಿಸಿದಂತಾಗಿದೆ. ನೀನಾಸಂ ಸತೀಶ್-ರಚಿತಾ ರಾಮ್ ಅಯೋಗ್ಯ-2 ಸಿನಿಮಾದಿಂದ ಶುರುವಾದ ಆ ಬ್ಲಾಕ್‌ಬಸ್ಟರ್ ಹಿಟ್ ಪರ್ವ, ದೀಕ್ಷಿತ್ ಶೆಟ್ಟಿ ನಿರ್ಮಾಣದ ಹಾರರ್ ಸಿನಿಮಾ ವಿಡಿಯೋ, ದುನಿಯಾ ವಿಜಯ್ ಹ್ಯಾಟ್ರಿಕ್ ಹಿಟ್ ಮೂವಿ ಸಿಟಿಲೈಟ್ಸ್, ರಂಗಾಯಣ ರಘು-ಶ್ರೀರಾಮ್ ಕಾಂಬೋನ ಪ್ರೇಮದ ಊರಲಿ ಹಾಗೂ ಶಿವಣ್ಣನ ಬೇಲ್‌ವರೆಗೂ ಬಂದಿದೆ. ಇದು ನಿಜಕ್ಕೂ ಖುಷಿಯ ವಿಚಾರ. ಇದೊಂಥರಾ ಇಂಡಸ್ಟ್ರಿಗೆ ಮರುಜೀವ ಬಂದಂತಾಗಿರೋದು ಸುಳ್ಳಲ್ಲ.
ವಿಜಯ್ ರಾಜ್‌ಕುಮಾರ್ ಕರಿಯರ್‌ನಲ್ಲೇ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ಆಗಿ ಸಿಟಿಲೈಟ್ಸ್ ಹೊರಹೊಮ್ಮಿದೆ. ದುನಿಯಾ ವಿಜಯ್ ಬರವಣಿಗೆ ಹಾಗೂ ನಿರ್ದೇಶನದ ಗತ್ತು, ಅವ್ರ ಕಿರಿ ಮಗಳು ಮೋನಿಷಾ ನಾಯಕನಟಿ ಕರಿಯರ್‌ಗೂ ಪ್ಲಸ್ ಆಗಿದೆ. ದೀಕ್ಷಿತ್ ಶೆಟ್ಟಿ ಸಣ್ಣ ಬಜೆಟ್‌ನಲ್ಲಿ ನಿರ್ಮಿಸಿದ ವಿಡಿಯೋ ಸಿನಿಮಾಗೆ ಪ್ರಮೋಷನ್ಸ್ ಕೂಡ ಮಾಡಲಿಲ್ಲ. ಆದ್ರೆ ಆ ಚಿತ್ರ ಥಿಯೇಟರ್‌ನಲ್ಲಿ ಹೌಸ್‌ಫುಲ್ ಪ್ರದರ್ಶನಗಳನ್ನ ಕಂಡಿತು.
ಪ್ರೇಮದ ಊರಲಿ ಒಂಥರಾ ಬರದಿಂದ ಬಳಲಿ ಬೆಂಡಾಗಿರೋ ಭೂಮಿಗೆ ಮುಂಗಾರುಮಳೆಯನ್ನ ಸುರಿಸಿ, ತಂಪೆರಗಿದೆ. ಅಷ್ಟರ ಮಟ್ಟಿಗೆ ಈ ಎಮೋಷನಲ್ ವೆಂಚರ್ ಪ್ರೇಕ್ಷಕರ ದಿಲ್ ದೋಚುತ್ತಿದೆ. ಎರಡನೇ ದಿನಕ್ಕೆ 70 ಥಿಯೇಟರ್‌ಗಳನ್ನ ಹೆಚ್ಚಿಸಿಕೊಂಡಿದ್ದ ಈ ಚಿತ್ರ ಕೊನೆಗೆ 150 ಹೆಚ್ಚುವರಿ ಸ್ಕ್ರೀನ್ಸ್‌ನಿಂದ ಎಲ್ಲೆಡೆ ಪ್ರೇಕ್ಷಕರ ಕಣ್ಮನ ತಣಿಸಿತು. ಈಗ ಆ ಸಕ್ಸಸ್ ಸಿನಿಮಾಗಳ ಸಾಲಿಗೆ ಶಿವಣ್ಣನ ಬೇಲ್ ಸಿನಿಮಾ ಕೂಡ ಸೇರಿಕೊಂಡಿರೋದು ಇಂಟರೆಸ್ಟಿಂಗ್.
ಅಂದಹಾಗೆ ಈ ವರ್ಷ ಮೊದಲಾರ್ಧದಲ್ಲಿ ಡಾರ್ಲಿಂಗ್ ಕೃಷ್ಣ ನಟಿಸಿ, ನಿರ್ದೇಶಿಸಿದಂತಹ ಲವ್ ಮಾಕ್ಟೇಲ್-3, ಗುರುದತ್ ಗಾಣಿಗ ನಿರ್ದೇಶನದ ಪ್ರಜ್ವಲ್ ದೇವರಾಜ್-ರಾಜ್ ಬಿ ಶೆಟ್ಟಿಯ ಕರಾವಳಿ ಹಾಗೂ ರಾಜ್ ಶೆಟ್ರ ರಕ್ಕಸಪುರದೋಳ್ ಸಿನಿಮಾಗಳು ಜನ ಮೆಚ್ಚುಗೆಗೆ ಪಾತ್ರವಾದವು. ಬಾಕ್ಸ್ ಆಫೀಸ್‌ನಲ್ಲಿ ಕೂಡ ಈ ಸಿನಿಮಾಗಳು ದೊಡ್ಡದಾಗಿ ಸೌಂಡ್ ಮಾಡಿದ್ದವು. ಒಟ್ಟಾರೆ.. ಸ್ಯಾಂಡಲ್‌ವುಡ್ ಕಥೆ ಮುಗಿದೇ ಹೋಯ್ತಾ ಅಂತ ಜನ ಮಾತಾಡಿಕೊಳ್ಳೋ ಸಮಯದಲ್ಲಿ ಹೀಗೆ ಒಂದರ ಹಿಂದೊಂದು ಸಿನಿಮಾ ಹಿಟ್ ಮೇಲೆ ಹಿಟ್ ಆಗ್ತಿರೋದು ಪಾಸಿಟಿವ್ ವೈಬ್ ಬರುವಂತೆ ಮಾಡಿದೆ. ಈ ವಿಜಯೋತ್ಸವ ಹೀಗೆಯೇ ತೇರಂತೆ ಸಾಗಲಿ ಮುಂದೆ ಅನ್ನೋದು ನಮ್ಮ ಆಶಯ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್
