ನಟಿ ಸಮಂತಾ ದೇಗುಲದಲ್ಲಿ ಚಿನ್ನ ಲೇಪಿತ ಮೂರ್ತಿ!

Untitled design 2025 04 30t184413.076

ವಿಶಾಖಪಟ್ಟಣಂ, ಏಪ್ರಿಲ್ 30: ಭಾರತೀಯ ಚಿತ್ರರಂಗದ ಮೇರು ನಟಿಯರಲ್ಲಿ ಒಬ್ಬರಾಗಿರುವ ಸಮಂತಾ ರುತ್ ಪ್ರಭು ಇತ್ತೀಚಿನ ದಿನಗಳಲ್ಲಿ ಚಲನಚಿತ್ರಗಳಿಂದ ದೂರವಿದ್ದರೂ, ಅವರ ಅಭಿಮಾನಿಗಳ ಶ್ರದ್ಧೆ ಮತ್ತು ಪ್ರೀತಿ ಮಾತ್ರ ದೂರವಾಗಿಲ್ಲ. 38ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಸಮಂತಾ ಅಭಿಮಾನಿಯೊಬ್ಬನಿಂದ ಲಭಿಸಿದ ವಿಶೇಷ ಉಡುಗೊರೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಆಂಧ್ರ ಪ್ರದೇಶದ ಬಾಪಟ್ಲಾ ಜಿಲ್ಲೆಯ ಅಲಪಾಡು ಗ್ರಾಮಕ್ಕೆ ಸೇರಿದ ತೆನಾಲಿ ಸಂದೀಪ್ ಎಂಬ ಅಭಿಮಾನಿ, ಸಮಂತಾ ಅವರ ದೇವಸ್ಥಾನವನ್ನೇ ನಿರ್ಮಿಸಿರುವುದು ವೈರಲ್‌ ಆಗಿದೆ.

ತೆನಾಲಿ ಸಂದೀಪ್ ಎಂಬ ಅಭಿಮಾನಿ 2023ರಲ್ಲಿ ‘ಟೆಂಪಲ್ ಆಫ್ ಸಮಂತಾ’ ನಿರ್ಮಾಣ ಕಾರ್ಯ ಪ್ರಾರಂಭಿಸಿದನು. ಇದೀಗ ಈ ದೇವಸ್ಥಾನ ಸಂಪೂರ್ಣವಾಗಿದ್ದು, ಅದರಲ್ಲಿ ನಟಿ ಸಮಂತಾರ ಎರಡು ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ಈ ಮೂರ್ತಿಗಳಲ್ಲಿ ಒಂದರ ಮೇಲೆ ಚಿನ್ನದ ಲೇಪನವಿದೆ, ಮತ್ತೊಂದು ಮೂರ್ತಿ ಕೆಂಪು ವಸ್ತ್ರದಲ್ಲಿ ಅಲಂಕರಿಸಲಾಗಿದೆ. ಸಮಂತಾ ಅವರ ಜೀವನಮೌಲ್ಯಗಳು ಮತ್ತು ಸಾಮಾಜಿಕ ಚಟುವಟಿಕೆಗಳಿಂದ ಪ್ರೇರಿತನಾದ ಸಂದೀಪ್, ಈ ದೇವಾಲಯವನ್ನು ನಿರ್ಮಿಸಿ, ಸಾಮಾಜಿಕ ಸೇವೆಯ ಮಾದರಿಯಾಗಿ ಹೊರಹೊಮ್ಮಿದ್ದಾರೆ.

ಹುಟ್ಟುಹಬ್ಬದಂದು ಸೇವಾ ಕಾರ್ಯಕ್ರಮ

ಸಮಂತಾ 38ನೇ ವರ್ಷದ ಹುಟ್ಟುಹಬ್ಬದಂದು, ತೆನಾಲಿ ಸಂದೀಪ್ ಈ ದೇವಸ್ಥಾನದಲ್ಲಿ ವಿಶೇಷವಾಗಿ ಮಕ್ಕಳಿಗಾಗಿ ಅನ್ನದಾನ ಹಾಗೂ ಹಬ್ಬದ ಆಚರಣೆಯನ್ನು ಆಯೋಜಿಸಿದರು. ಅನಾಥ ಮಕ್ಕಳಿಗೆ ಆಹಾರ ವಿತರಣೆಯು ಮಾತ್ರವಲ್ಲದೆ, ದೇವಾಲಯದಲ್ಲಿ ಸಮಂತಾ ಮೂರ್ತಿಯ ಮುಂದೇ ಕೇಕ್ ಕತ್ತರಿಸುವ ಮೂಲಕ ವಿಶಿಷ್ಟ ರೀತಿಯಲ್ಲಿ ಹುಟ್ಟುಹಬ್ಬ ಆಚರಿಸಲಾಯಿತು. ಈ ಸಂದರ್ಭದಲ್ಲಿ ಹೂವಿನ ಅಲಂಕಾರ, ವಿದ್ಯುತ್ ದೀಪಾಲಂಕಾರ ಸೇರಿದಂತೆ ದೇವಸ್ಥಾನವನ್ನೆಲ್ಲಾ ಹಬ್ಬದ ವಾತಾವರಣವಿತ್ತು.

ಅಭಿಮಾನಿ ಸಂದೀಪ್‌ ಅವರ ಪ್ರತಿಕ್ರಿಯೆ

ಸಮಂತಾ ಅವರ ಚಲನಚಿತ್ರಗಳು ಮಾತ್ರವಲ್ಲ, ಸಮಾಜ ಸೇವೆಯು ತಮ್ಮ ಜೀವನದ ಪ್ರೇರಣೆಯಾಗಿದೆ ಎಂದು ಸಂದೀಪ್ ತಿಳಿಸಿದ್ದಾರೆ. “ಅವಳ ಪ್ರತಿ ಸಿನಿಮಾವನ್ನೂ ನಾನು ನೋಡುತ್ತೇನೆ. ಸಮಾಜ ಸೇವೆಯಲ್ಲಿ ಮುಂದಾಗಿ ನಿಲ್ಲುತ್ತಾಳೆ. ಅದರಿಂದಲೇ ಪ್ರೇರಿತರಾಗಿ ನಾನು ಸಹ ಬಡ ಮಕ್ಕಳಿಗೆ ಸಹಾಯ, ಅನ್ನದಾನ, ಶಿಕ್ಷಣ ಸಹಾಯ ಮಾಡುವ ಕೆಲಸ ಮಾಡುತ್ತಿದ್ದೇನೆ” ಎಂದು ಹೆಮ್ಮೆಯಿಂದ ಹೇಳಿದರು.

 ಸಾರ್ವಜನಿಕ ಪ್ರತಿಕ್ರಿಯೆ

‘ಟೆಂಪಲ್ ಆಫ್ ಸಮಂತಾ’ ಎಂಬ ಹೆಸರಿನ ಫಲಕವನ್ನು ದೇವಸ್ಥಾನದ ಮುಂಭಾಗದಲ್ಲಿ ಕೆತ್ತಿಸಿ ಹಾಕಲಾಗಿದೆ. ಈ ದೇವಾಲಯದ ಬಗ್ಗೆ ಮಾಹಿತಿ ಹರಡಿದ ಬಳಿಕ, ಸಮಂತಾ ಅಭಿಮಾನಿಗಳು ಸಾವಿರಾರು ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದಾರೆ. ಕೆಲವರು ಈ ದೇವಸ್ಥಾನ ನಿರ್ಮಾಣಕ್ಕೆ ಖರ್ಚಾದ ಮೊತ್ತದ ಮಾಹಿತಿ ಪಡೆಯಲು ಸಹ ಬಂದಿದ್ದಾರೆ. ಈ ಸ್ಥಳ ಈಗಾಗಲೇ ಪ್ರಸಿದ್ಧಿ ಪಡೆದುಕೊಂಡಿದೆ.

Exit mobile version